- ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಕೊಡಗು ಜಿಲ್ಲಾ ನಿರ್ದೇಶಕಿ ಲೀಲಾವತಿ ಮಾಹಿತಿ
ಬೆಟ್ಟದಪುರ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ವತಿಯಿಂದ ಸಮುದಾಯದ ಅಭಿವೃದ್ಧಿಗಾಗಿ 150 ಕ್ಕೂ ಹೆಚ್ಚು ಸಾಮಾಜಿಕ ಕಾರ್ಯಕ್ರಮಗಳು ಜಾರಿಯಲ್ಲಿವೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಕೊಡಗು ಜಿಲ್ಲಾ ನಿರ್ದೇಶಕಿ ಲೀಲಾವತಿ ಹೇಳಿದರು.
ಬೆಟ್ಟದಪುರದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಕಚೇರಿಯಲ್ಲಿ ಮದ್ಯವರ್ಜನ ಶಿಬಿರ ಆಯೋಜನೆ ಅಂಗವಾಗಿ ಇತ್ತಿಚೆಗೆ ಆಯೋಜಿಸಿದ್ದ ಸಮಾಲೋಚನ ಸಭೆಯಲ್ಲಿ ಮಾತನಾಡಿದ ಅವರು, ಸ್ವ-ಸಹಾಯ ಸಂಘದ ಸದಸ್ಯರಿಗೆ ಬ್ಯಾಂಕ್ ಮೂಲಕ ಆರ್ಥಿಕ ನೆರವು ನೀಡುವುದರ ಜತೆಗೆ ಕೌಶಲಾಧಾರಿತ ತರಬೇತಿ ನೀಡಿ ಅಭಿವೃದ್ಧಿಗೆ ಶ್ರಮಿಸಲಾಗುತ್ತಿದೆ. ರೈತರಿಗೆ ಆಧುನಿಕ ತಂತ್ರಜ್ಞಾನ ಕೃಷಿ ಪದ್ಧತಿ ಮಾಹಿತಿ ಹಾಗೂ ಯಂತ್ರೋಪಕರಣ ಬಾಡಿಗೆ ನೀಡುವುದು ಸೇರಿದಂತೆ ವಾತ್ಸಲ್ಯ ಕಾರ್ಯಕ್ರಮದಡಿ ಸಮಾಜದಲ್ಲಿ ನೊಂದ ಕುಟುಂಬಗಳಿಗೆ ನೆರವು ನೀಡಲಾಗುತ್ತಿದೆ ಎಂದರು.
ಜನಜಾಗೃತಿ ಯೋಜನೆಯ ಉಡುಪಿ ಪ್ರಾದೇಶಿಕ ವಿಭಾಗದ ಯೋಜನಾಧಿಕಾರಿ ತಿಮ್ಮಯ್ಯ ನಾಯಕ ಮಾತನಾಡಿ ಮದ್ಯವರ್ಜನ ಶಿಬಿರವು ರಾಜಕೀಯ ರಹಿತ ಕ್ಷೇತ್ರದ ಕಾರ್ಯಕ್ರಮವಾಗಿದೆ. ವೀರೇಂದ್ರ ಹೆಗ್ಗಡೆ ಹಾಗೂ ಹೇಮಾವತಿ ಅಮ್ಮನವರ ಮಾರ್ಗದರ್ಶನದಲ್ಲಿ ಯುವ ಪೀಳಿಗೆಯನ್ನು ದುಶ್ಚಟದಿಂದ ಮುಕ್ತರಾಗಿ ಮಾಡುವ ಗುರಿಯಿಂದ ಸ್ಥಳೀಯರ ಸಹಕಾರದೊಂದಿಗೆ ಶಿಬಿರಗಳನ್ನು ಆಯೋಜಿಸಲಾಗುತ್ತಿದೆ ಎಂದರು.
ಜನಜಾಗೃತಿ ವೇದಿಕೆ ಜಿಲ್ಲಾಧ್ಯಕ್ಷರಾದ ಅಭಿಮನ್ಯು, ಉಪಾಧ್ಯಕ್ಷ ಬಿ.ಜೆ. ದೇವರಾಜು, ಗ್ರಾಪಂ ಉಪಾಧ್ಯಕ್ಷೆ ಸೌಮ್ಯಾ, ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬೆಕ್ಕರೆ ಸತೀಶ್‌ಆರಾಧ್ಯ, ಪಿಎಸಿಸಿಎಸ್ ಅಧ್ಯಕ್ಷ ಪಟೇಲ್ ನಟೇಶ್, ರೈತ ಸಂಘ ತಾಲೂಕು ಅಧ್ಯಕ್ಷ ಆನಂದ್, ಮುಖಂಡರಾದ ಪ್ರಭಾಶಂಕರ್, ಗಗನ್, ಪುಟ್ಟರಾಜು, ಕುಮಾರಶೆಟ್ಟಿ, ಕೆ. ಮಹದೇವ್, ಮರಿಯಪ್ಪ, ಮಲ್ಲೇಶ್, ಮಂಜುನಾಥ್, ವಲಯ ಯೋಜನಾಧಿಕಾರಿ ಸಂತೋಷ್‌ಕುಮಾರ್ ಜೈನ್, ಮೇಲ್ವಿಚಾರಕಿ ಬಿ.ಶ್ರೀಮತಿ ಹಾಗೂ ಒಕ್ಕೂಟ ಅಧ್ಯಕ್ಷರು, ಸೇವಾ ಪ್ರತಿನಿಧಿಗಳು, ಸದಸ್ಯರು ಇದ್ದರು.