ಸವಿತಾ ಸಮಾಜಕ್ಕೆ 2 ಸಾವಿರ ವರ್ಷಗಳ ಇತಿಹಾಸವಿದೆ. ಈ ಸಮಾಜವನ್ನು ಸೂರ್ಯವಂಶ ಎಂದು ಕರೆಯುತ್ತಾರೆ. ಸವಿತಾ ಸಮಾಜವು ಸಂಘಟಿತರಾಗುವ ಮೂಲಕ ಸಮಾಜದ ಮುಖ್ಯವಾಹಿನಿಗೆ ಬರಬೇಕು ಎಂದು ವಿಧಾನ ಪರಿಷತ್ ಸದಸ್ಯ ಸಿ.ಎನ್. ಮಂಜೇಗೌಡ ಹೇಳಿದರು.
ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ಕಲಾಮಂದಿರ ಆವರಣದ ಕಿರುರಂಗಮಂದಿರಲ್ಲಿ ಬುಧವಾರ ಆಯೋಜಿಸಿದ್ದ ಸವಿತಾ ಮಹರ್ಷಿ ಜಯಂತಿಯನ್ನು ಉದ್ಘಾಟಿಸಿ ಮಾತನಾಡಿ, ಸಮಾಜವು ಶಿಕ್ಷಣಕ್ಕೆ ಒತ್ತು ನೀಡಬೇಕು. ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕವಾಗಿ ಈ ಸಮುದಾಯ ಮತ್ತಷ್ಟು ಸದೃಢವಾಗಬೇಕಿದೆ ಎಂದರು.
ಅಪರ ಜಿಲ್ಲಾಧಿಕಾರಿ ಡಾ.ಪಿ.ಶಿವರಾಜು ಮಾತನಾಡಿ, ಸವಿತಾ ಮಹರ್ಷಿ ಇಡೀ ಸಮಾಜದ ಕಣ್ಣು. ಅವರ ಆದರ್ಶಗಳು ನಮಗೆ ಮುಖ್ಯ. ಇಂದಿನ ಸಮಾಜದಲ್ಲಿ ಸುಂದರವಾಗಿ ಕಾಣಿಸಲು ಸವಿತಾ ಸಮಾಜದವರ ಪಾತ್ರ ಮಹತ್ವದ್ದಾಗಿದೆ ಎಂದು ಹೇಳಿದರು.
ಮಹಾರಾಣಿ ಮಹಿಳಾ ಕಲಾ ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ಕೆ.ಎಸ್.ರಾಮ್ ಪ್ರಸಾದ್ ಮಾತನಾಡಿ, ಪ್ರಪಂಚದಲ್ಲಿ ಎಲ್ಲ ಧರ್ಮಗಳಿಗೆ, ಎಲ್ಲ ಜಾತಿಯವರಿಗೆ ಬೇಕಾಗಿರುವಂತಹವರು ಸೂರ್ಯದೇವನೊಬ್ಬನೆ. ದೇಶದಲ್ಲಿ ಶುಭಕಾರ್ಯಗಳಿಗೆ ನಿಂತವರು ಸವಿತಾ ಮಹರ್ಷಿಯವರು. ಸವಿತಾ ಸಮಾಜದವರು ತಮ್ಮ ವೃತ್ತಿಯ ಬಗ್ಗೆ ಕೀಳರಿಮೆ ಪಡಬಾರದು ಎಂದು ತಿಳಿಸಿದರು.
ಸವಿತಾ ಮಹರ್ಷಿ ಸೂರ್ಯನಿಗೆ ಮೊದಲು ಕೇಶ ವಿನ್ಯಾಸವನ್ನು ಮಾಡಿದರು. ಸವಿತಾ ಸಮಾಜದವರು ಒಂದಾಗಬೇಕು. ಸವಿತಾ ಮಹರ್ಷಿಯವರನ್ನು ಇಡೀ ಬ್ರಹ್ಮಾಂಡದಲ್ಲಿ ಪ್ರಮುಖರಾಗಿದ್ದು, ಇವರನ್ನು ಸವಿತಾ ಸಮಾಜದ ಪ್ರತಿಯೊಬ್ಬರು ನೆನಪಿನಲ್ಲಿಟ್ಟುಕೊಳ್ಳಬೇಕು ಎಂದು ಹೇಳಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕ ವಿ.ಎನ್.ಮಲ್ಲಿಕಾರ್ಜುನ ಸ್ವಾಮಿ ಇದ್ದರು.