ರಾಜ್ಯ ಸರ್ಕಾರ ಜನರ ಸಾಮಾಜಿಕ-ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆ ಹೆಸರಿನಲ್ಲಿ ಮತಾಂತರಕ್ಕೆ ಕುಮ್ಮಕ್ಕು ನೀಡುತ್ತಿದೆ ಎಂದು ಬಿಜೆಪಿ ರಾಜ್ಯ ಹಿಂದುಳಿದ ವರ್ಗಗಳ ಮೋರ್ಚಾ ಅಧ್ಯಕ್ಷ ಆರ್.ರಘು ಆರೋಪಿಸಿದರು.
ನಗರದ ಖಾಸಗಿ ಹೋಟೆಯಲ್ಲಿನಲ್ಲಿ ಭಾನುವಾರ ಆಯೋಜಿಸಿದ್ದ ಹಿಂದುಳಿದ ವರ್ಗಗಳ ಮುಖಂಡರ ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯ ಹಿಂದುಳಿದ ವರ್ಗಗಳ ಆಯೋಗದಿಂದ ಸಮೀಕ್ಷೆ ನಡೆಸುವುದಕ್ಕೆ ನಮ್ಮ ತಕರಾರು ಇಲ್ಲ. ಆದರೆ ಕೆಲ ಜಾತಿಗಳಿಗೆ ಕ್ರಿಶ್ಚಿಯನ್ ಎಂದು ಸೇರ್ಪಡೆ ಮಾಡಿ ಪಟ್ಟಿ ಪ್ರಕಟಿಸಿರುವುದಕ್ಕೆ ತೀವ್ರ ವಿರೋಧ ಇದೆ ಎಂದು ತಿಳಿಸಿದರು.
1,400 ಜಾತಿಗಳ ಪಟ್ಟಿಯಲ್ಲಿ, ಹಿಂದು ಸಮಾಜದ ಬರೋಬ್ಬರಿ 47ಕ್ಕೂ ಹೆಚ್ಚಿನ ಜಾತಿಗಳಿಗೆ ಕ್ರಿಶ್ಚಿಯನ್ ಎಂದು ಸೇರಿಸಲಾಗಿದೆ. ಇದು ಆತಂಕಕಾರಿಯಾದುದು. ಇದನ್ನು ಸೃಷ್ಟಿಸಿದವರು ಯಾರು? ಆಯೋಗ ಪರಿಗಣಿಸಿದ್ದು ಯಾವಾಗ? ಎಂಬುದಕ್ಕೆ ಆಯೋಗದಿಂದ ಸರಿಯಾದ ಉತ್ತರ ದೊರೆಯುತ್ತಿಲ್ಲ. ಇದು ನಮ್ಮ ಆತಂಕಕ್ಕೆ ಕಾರಣವಾಗಿದೆ ಎಂದು ಹೇಳಿದರು.
ಕುರುಬ ಕ್ರಿಶ್ಚಿಯನ್, ಮಡಿವಾಳ ಕ್ರಿಶ್ಚಿಯನ್, ಒಕ್ಕಲಿಗ ಕ್ರಿಶ್ಚಿಯನ್, ಬ್ರಾಹ್ಮಣ ಕ್ರಿಶ್ಚಿಯನ್, ಅಕ್ಕಸಾಲಿಗ ಕ್ರಿಶ್ಚಿಯನ್, ಬೆಸ್ತ ಕ್ರಿಶ್ಚಿಯನ್, ಬಿಲ್ಲವ ಕ್ರಿಶ್ಚಿಯನ್, ದೇವಾಂಗ ಕ್ರಿಶ್ಚಿಯನ್, ಈಡಿಗ ಕ್ರಿಶ್ಚಿಯನ್, ನೇಕಾರ ಕ್ರಿಶ್ಚಿಯನ್, ವಿಶ್ವಕರ್ಮ ಕ್ರಿಶ್ಚಿಯನ್ ಹೀಗೆ ಸೃಷ್ಟಿಸಲಾಗಿದೆ ಎಂದು ಕಿಡಿಕಾರಿದರು.
ಹಿಂದು ಧರ್ಮದವರನ್ನು ಮತಾಂತರಕ್ಕೆ ಪ್ರೇರೇಪಿಸುವ ವ್ಯವಸ್ಥಿತ ಹುನ್ನಾರ ನಡೆಸಲಾಗುತ್ತಿದೆ. ಹಿಂದುಳಿದ ವರ್ಗಗಳ ಮೀಸಲಾತಿ ಕಿತ್ತುಕೊಳ್ಳುವ ಹಾಗೂ ಈ ಜನರ ದಿಕ್ಕು ತಪ್ಪಿಸುವ ಪಿತೂರಿಯನ್ನೂ ಮಾಡಲಾಗುತ್ತಿದೆ. ಹೀಗಾಗಿಯೇ ತರಾತುರಿಯಲ್ಲಿ ಸಮೀಕ್ಷೆ ನಡೆಸಿ, ಯಾರನ್ನೋ ಓಲೈಸಲು ಮತಾಂತರದ ಭಾಗ್ಯ ನೀಡಲು ಸರ್ಕಾರ ಹೊರಟಿದೆ ಎಂದು ಆರೋಪಿಸಿದರು.
ಯಾವುದೇ ಜಾತಿಗೆ ಮೀಸಲಾತಿ ಕೊಡಬೇಕಾದರೆ ಕುಲಶಾಸ್ತ್ರೀಯ ಅಧ್ಯಯನ ನಡೆಯಬೇಕು. ಸಾಮಾಜಿಕ ಸ್ಥಿತಿಗತಿ ಪರಿಶೀಲಿಸಬೇಕು. ಆದರೆ ಈ ಸರ್ಕಾರದ ಕುಮ್ಮಕ್ಕಿನಿಂದಾಗಿ ಇಲ್ಲದ ಜಾತಿಗಳನ್ನು ಆಯೋಗ ಸೇರಿಸಿದೆ. ಇಡೀ ಹಿಂದು ಸಮಾಜದ ಜಾತಿಗಳ ಬಡ ಅಲುಗಾಡಿಸಲು ಹಾಗೂ ಹಿಂದು ಧರ್ಮದ ಬೇರನ್ನು ಕಿತ್ತುಹಾಕುವ ಕಾರ್ಯಸೂಚಿ ಇಟ್ಟುಕೊಂಡಿದೆ ಎಂದು ದೂರಿದರು.
ಇದನ್ನು ವಿರೋಧಿಸಿ ಹೋರಾಟ ತೀವ್ರಗೊಳಿಸಲಾಗುವುದು. ಆಯಾ ಸಮಾಜದ ಸ್ವಾಮೀಜಿಗಳ ಗಮನಕ್ಕೂ ತರಲಾಗಿದೆ. ಕೂಡಲೇ ಆಯೋಗದವರು ಭೇಷರತ್ ಕ್ಷಮೆ ಯಾಚಿಸಿ, ಇಲ್ಲದ ಜಾತಿಗಳನ್ನು ಪಟ್ಟಿಯನ್ನು ಕೈಬಿಡದಿದ್ದರೆ ರಾಜ್ಯದಲ್ಲಿ ಯಾವ ಕ್ರಾಂತಿ ಬೇಕಾದರೂ ನಡೆಯಬಹುದು ಎಂದು ಎಚ್ಚರಿಕೆ ನೀಡಿದರು.
ವಿವಿಧ ಸಮುದಾಯಗಳ ಮುಖಂಡರಾದ ಪಿ.ಪ್ರಶಾಂತ್ ಗೌಡ, ಶೈಲೇಂದ್ರ, ಯಶಸ್ವಿನಿ ಸೋಮಶೇಖರ್, ಚನ್ನಕೇಶವಶೆಟ್ಟಿ, ವಿದ್ಯಾಸಾಗರ ಕದಂಬ, ರಶ್ಮಿ, ಮಹೇಂದ್ರ, ಪ್ರಕಾಶ್, ಸತೀಶ್‌ಕುಮಾರ್ ಇತರರಿದ್ದರು.