ಮೈಸೂರು: ಕನ್ನಡ ಪರ ಹೋರಾಟಗಾರ, ಸಮಾಜವಾದಿ ಪ.ಮಲ್ಲೇಶ್ (89) ನಗರದಲ್ಲಿ ಗುರುವಾರ ನಿಧನರಾದರು.
ಮೂವರು ಪುತ್ರಿಯರು, ಒಬ್ಬ ಪುತ್ರ ಇದ್ದಾರೆ. 2 ವರ್ಷದ ಹಿಂದೆ ಅವರ ಪತ್ನಿ ಸರ್ವಮಂಗಳಾ ನಿಧನರಾಗಿದ್ದರು. ರಾಮಕೃಷ್ಣನಗರದಲ್ಲಿರುವ ಸ್ವಗೃಹದಲ್ಲಿ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು.
ಮಧ್ಯಾಹ್ನದವರೆಗೂ ಚೆನ್ನಾಗಿಯೇ ಇದ್ದ ಅವರಿಗೆ ಏಕಾಏಕಿ ಸುಸ್ತು, ಉಸಿರಾಟದ ಸಮಸ್ಯೆ ಉಂಟಾಗಿತ್ತು. ಕೂಡಲೇ ಅವರನ್ನು ಕುವೆಂಪುನಗರದ ಖಾಸಗಿ ಆಸ್ಪತ್ರೆಗೆ ಕರೆದೊಯ್ಯವ ವೇಳೆಗೆ ಕೊನೆಯುಸಿರೆಳೆದರು.
ಸಮಾಜವಾದಿಯಾಗಿದ್ದ ಅವರು ಕನ್ನಡನಾಡಿನ ನೆಲ, ಜಲ, ಭಾಷೆಯ ಬಗ್ಗೆ ಹೋರಾಟ ನಡೆಸಿದ್ದರು. ಗೋಕಾಕ್ ಮತ್ತು ಕಾವೇರಿ ಚಳವಳಿಗಳಲ್ಲಿ ಮುಂಚೂಣಿಯಲ್ಲಿದ್ದರು. ಮೈಸೂರು ಜಿಲ್ಲೆಯ ಚಾಮಲಾಪುರ ಉಷ್ಣಸ್ಥಾವರವನ್ನು ವಿರೋಧಿಸಿ ಹೋರಾಟ ರೂಪಿಸಿದ್ದರು. 1989ರ ಲೋಕಸಭಾ ಚುನಾವಣೆಯಲ್ಲಿ ಜನತಾ ದಳದಿಂದ ಸ್ಪರ್ಧಿಸಿದ್ದ ಅವರು 1,31,905 ಮತಗಳೊಂದಿಗೆ 3ನೇ ಸ್ಥಾನ ಗಳಿಸಿದ್ದರು. ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಇನ್ನಿತರರು ಸಂತಾಪ ಸೂಚಿಸಿದ್ದಾರೆ.