ಮನೆಗಳನ್ನು ಯಾರು ಬೇಕಾದರೂ ಕಟ್ಟಬಹುದು. ಆದರೆ, ಮನಸ್ಸುಗಳನ್ನು ಕಟ್ಟಲು ಆಗುವುದಿಲ್ಲ. ಇಂತಹ ಮಹತ್ವಯುತವಾದ ಕಾರ್ಯವನ್ನು ಸಂಘಟನೆಗಳು ಹಾಗೂ ಸಂಘ-ಸಂಸ್ಥೆಗಳು ಮಾಡಬೇಕು. ಆಗ ಮಾತ್ರ ಸಮಾಜದಲ್ಲಿ ಉತ್ತಮ ವಾತಾವರಣ ಮೂಡುತ್ತದೆ ಎಂದು ವಿಶ್ವ ಒಕ್ಕಲಿಗರ ಸಂಸ್ಥಾನ ಮಠದ ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಅಭಿಪ್ರಾಯಪಟ್ಟರು.
ನಗರದ ಕಲಾಮಂದಿರದ ಆವರಣದಲ್ಲಿರುವ ಕಿರು ರಂಗಮಂದಿರದಲ್ಲಿ ಕರ್ನಾಟಕ ರಾಜ್ಯ ಒಕ್ಕಲಿಗರ ವಿಕಾಸ ವೇದಿಕೆಯಿಂದ ಶನಿವಾರ ಏರ್ಪಡಿಸಿದ್ದ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಜಾರಿಗೆ ತಂದ ಮೀಸಲಾತಿಗೆ 106 ವರ್ಷದ ಸಂಭ್ರಮಾಚರಣೆ ಮತ್ತು ಕರ್ನಾಟಕ ರಾಜ್ಯ ಒಕ್ಕಲಿಗರ ವಿಕಾಸ ವೇದಿಕೆಯ 14ನೇ ವಾರ್ಷಿಕೋತ್ಸವದಲ್ಲಿ ಅವರು ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಪ್ರಸ್ತುತ ಕಾಲಘಟ್ಟದಲ್ಲಿ ಮನುಷ್ಯರ ಮನಸ್ಸು-ಮನಸ್ಸುಗಳನ್ನು ಕಟ್ಟಬೇಕಾದ ಅಗತ್ಯವಿದೆ ಎಂದರು.
ಮುಂದಿನ ಪೀಳಿಗೆ ಯಾವುದೇ ರೀತಿಯ ಕಷ್ಟಗಳಿಗೂ ಒಳಗಾಗಬಾರದು ಎಂಬ ಉದ್ದೇಶದಿಂದ ಅನೇಕ ಮಹನೀಯರು ಶ್ರಮಿಸಿದ್ದಾರೆ. ತುಂಬಾ ಕಷ್ಟ-ನಷ್ಟಗಳನ್ನು ಅನುಭವಿಸಿ ನಾಡನ್ನು ಕಟ್ಟಿದ್ದಾರೆ. ಅವರೆಲ್ಲರ ಪರಿಶ್ರಮದ ಫಲವನ್ನು ಅನುಭವಿಸುತ್ತಿರುವ ಈಗಿನ ಪೀಳಿಗೆ ಹಿರಿಯರನ್ನು ಪ್ರತಿನಿತ್ಯವೂ ಸ್ಮರಿಸಬೆಕು ಎಂದು ಸಲಹೆ ನೀಡಿದರು.
ದಕ್ಷಿಣ ಭಾರತದಲ್ಲಿಯೇ ರಾಗಿ ಅತ್ಯಂತ ಹೆಚ್ಚಾಗಿ ಬೆಳೆಯುತ್ತಿದ್ದ ಬೆಳೆಯಾಗಿತ್ತು. ಆದರೆ, ರಾಗಿಯನ್ನು ವೈಜ್ಞಾನಿಕವಾಗಿ ಬೆಳೆಯುವ ವಿಧಾನ ರೈತರಿಗೆ ತಿಳಿದಿರಲಿಲ್ಲ. ಇಂತಹ ಸಂದರ್ಭದಲ್ಲಿ ರಾಗಿ ಲಕ್ಷ್ಮಣಯ್ಯ ಅವರು ರಾಗಿಯ ವಿವಿಧ ತಳಿಗಳನ್ನು ಕಂಡು ಹಿಡಿದು ರೈತರಿಗೆ ನೆರವಾದರು ಎಂದು ತಿಳಿಸಿದರು.
ವೈದ್ಯ ಡಾ.ಎಸ್.ಪಿ.ಯೋಗಣ್ಣ ಮಾತನಾಡಿ, ಸಮಾಜದಲ್ಲಿ ಮೇಲು-ಕೀಳು ಎಂಬ ಭಾವೆನೆ ಬೇರೂರಿತ್ತು. ಕೆಳವರ್ಗದವರಿಗೆ ಉದ್ಯೋಗ ಮತ್ತಿತರ ಕಡೆಗಳಲ್ಲಿ ಉತ್ತಮ ಸ್ಥಾನಮಾನಗಳು ಸಿಗುತ್ತಿರಲಿಲ್ಲ. ಶಿಕ್ಷಣ ಪಡೆಯುವುದಕ್ಕೂ ಅವಕಾಶವಿರಲಿಲ್ಲ. ಆದ್ದರಿಂದ ತಳಸಮುದಾಯಗಳಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಸಮಾನ ಸ್ಥಾನಮಾನ ಕಲ್ಪಿಸಿಕೊಡುವ ಉದ್ದೇಶದಿಂದ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಮೀಸಲಾತಿಯನ್ನು ಜಾರಿಗೆ ತಂದರು ಎಂದು ತಿಳಿಸಿದರು.
ಕೃಷಿ ವಿಜ್ಞಾನಿ ಡಾ.ವಸಂತ ಕುಮಾರ್ ತಿಮಕಾಪುರ ಅವರಿಗೆ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರಶಸ್ತಿ ಪ್ರದಾನ ಮಾಡಲಾಯಿತು. ಸಾಧಕರಾದ ಪ್ರೊ.ವಸಂತಮ್ಮ , ಡಾ.ಸುಜಾತಾ ಅಕ್ಕಿ, ಕೆರೋಡಿ ಲೋಲಾಕ್ಷಿ, ಅಂಬಿಕ ಎನ್.ಮಸಗಿ ಮತ್ತಿತರರಿಗೆ ಪದ್ಮಭೂಷಣ ಯಶೋಧರಮ್ಮ ದಾಸಪ್ಪ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.
ಕುಣಿಗಲ್ ಅರೆಶಂಕರ ಮಠದ ಶ್ರೀ ಸಿದ್ದರಾಮ ಚೈತನ್ಯ ಸ್ವಾಮೀಜಿ, ಕರ್ನಾಟಕ ರಾಜ್ಯ ಒಕ್ಕಲಿಗರ ವಿಕಾಸ ವೇದಿಕೆಯ ಅಧ್ಯಕ್ಷೆ ಎಚ್.ಎಲ್.ಯಮುನಾ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್ ಮತ್ತಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.