ಪಿರಿಯಾಟ್ಟಣ ತಾಲೂಕಿನ ಕಂಪಲಾಪುರದ ಕರಕಂಟೇಶ್ವರ ದೇವಸ್ಥಾನದ ಆವರಣದಲ್ಲಿ ಧಾನ್ ಫೌಂಡೇಷನ್ ಆಯೋಜನೆ ಮಾಡಿದ್ದ ಮಹಿಳಾ ಸಮೂಹ ಮಹಾಸಭೆಯನ್ನು ಗಣ್ಯರು ಉದ್ಘಾಟಿಸಿದರು. ಸಮಾಜ ಚಿಂತಕಿ ಡಾ. ಶ್ವೇತಾ ಮಡಪ್ಪಾಡಿ, ನಾರಾಯಣ ಹೆಗಡೆ, ಸುಹಾಸನ್, ಲತಾ ಮತ್ತಿತರರು ಇದ್ದರು. 
ನ್ಯೂಸ್

ಸಮಾಜದಲ್ಲಿ ಕುಸಿಯುತ್ತಿವೆ ಮೌಲ್ಯಗಳು

ಪಿರಿಯಾಪಟ್ಟಣ: ಮೌಲ್ಯಾಧಾರಿತ ಸಮಾಜ ನಿರ್ಮಾಣದಲ್ಲಿ ಮಹಿಳೆಯರ ಪಾತ್ರ ಮಹತ್ವದ್ದಾಗಿದೆ ಎಂದು ಮೈಸೂರಿನ ಉದ್ಯಮಿ ಹಾಗೂ ಸಮಾಜ ಚಿಂತಕಿ ಡಾ.ಶ್ವೇತಾ ಮಡಪ್ಪಾಡಿ ಅಭಿಮತಪಟ್ಟರು.

ತಾಲೂಕಿನ ಕಂಪಲಾಪುರದ ಕರಕಂಟೇಶ್ವರ ದೇವಸ್ಥಾನದ ಆವರಣದಲ್ಲಿ ಧಾನ್ ಫೌಂಡೇಷನ್ ಮಂಗಳವಾರ ಆಯೋಜನೆ ಮಾಡಿದ್ದ ಮಹಿಳಾ ಸಮೂಹ ಮಹಾಸಭೆಯಲ್ಲಿ ಮಾತನಾಡಿದರು. ಪ್ರಸ್ತುತ ಸಮಾಜದಲ್ಲಿ ಮೌಲ್ಯಗಳು ಮರೀಚಿಕೆಯಾಗುತ್ತಿದೆ. ಅದರ ಪರಿಣಾಮವಾಗಿ ಅನಾಚಾರ, ಅತ್ಯಾಚಾರಗಳಂತಹ ಪ್ರಕರಣಗಳು ಹೆಚ್ಚುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದರು.

ಸಮಾಜದಲ್ಲಿ ಮೌಲ್ಯಗಳನ್ನು ಪುನರ್ನಿರ್ಮಾಣ ಮಹಿಳೆಯರಿಂದ ಮಾತ್ರ ಸಾಧ್ಯ. ಹಾಗಾಗಿ ಮಹಿಳೆಯರು ತಮ್ಮ ಮಕ್ಕಳಲ್ಲಿ ಮೌಲ್ಯಗಳನ್ನು ಬಿತ್ತುವ ಮೂಲಕ ಉತ್ತಮ ಸಮಾಜ ನಿರ್ಮಾಣ ಮಾಡಬೇಕು ಎಂದು ಕರೆಕೊಟ್ಟರು.

ಧಾನ್ ಫೌಂಡೇಷನ್ ಯೋಜನಾ ಕಾರ್ಯ ನಿರ್ವಹಣಾಧಿಕಾರಿ ನಾರಾಯಣ ಹೆಗಡೆ ಮಾತನಾಡಿ, ಮಹಿಳೆಯರ ಸಂಘಟಿತ ಪ್ರಯತ್ನ ಸಮಾಜದಲ್ಲಿ ಬಹುದೊಡ್ಡ ಬದಲಾವಣೆ ತರಬಲ್ಲದು. ಮಹಿಳೆಯರ ಒಗ್ಗೂಡುವಿಕೆಗೆ ಸ್ವ ಸಹಾಯ ಸಂಘಗಳು ಸಾಧನಗಳಾಗಿದ್ದು, ಬಡ ಕುಟುಂಬಗಳ ಆರ್ಥಿಕ ಮತ್ತು ಆರ್ಥಿಕೇತರ ಸಬಲೀಕರಣಕ್ಕೆ ಮಹತ್ತರ ಕೊಡುಗೆ ನೀಡುತ್ತಿವೆ ಎಂದರು.

ಕೆನರಾ ಬ್ಯಾಂಕ್ ವ್ಯವಸ್ಥಾಪಕ ಸುಹಾಸನ್, ಒಕ್ಕೂಟದ ಅಧ್ಯಕ್ಷೆ ಲತಾ ಮಾತನಾಡಿದರು. ಕಾರ್ಯಕ್ರಮದಲ್ಲಿ ಡಾ. ಶ್ವೇತಾ ಮಡಪ್ಪಾಡಿ ಅವರನ್ನು ಸನ್ಮಾನಿಸಲಾಯಿತು. ಸಿಬ್ಬಂದಿ ವಿನೋದಾ, ರಜಿಯಾ, ಮಂಜು, ಮಮತಾ, ಶೈಲಾ, ರಾಜಮ್ಮ ಮುಂತಾದವರು ಹಾಜರಿದ್ದರು.