ನ್ಯೂಸ್

ಸಮಾಜದ ಸ್ವಾಸ್ಥ್ಯ ರಕ್ಷಣೆಯಲ್ಲಿ ಪತ್ರಕರ್ತರ ಪಾತ್ರ ಹಿರಿದು: ಶಾಸಕ ಸಿ.ಎನ್.ಬಾಲಕೃಷ್ಣ

ಚನ್ನರಾಯಪಟ್ಟಣ: ಸಮಾಜದ ಸುಧಾರಣೆ ಹಾಗೂ ಸ್ವಾಸ್ಥ್ಯ ಕಾಪಾಡುವಲ್ಲಿ ಪತ್ರಕರ್ತರ ಪಾತ್ರ ಪ್ರಮುಖವಾಗಿದೆ ಎಂದು ಶಾಸಕ ಸಿ.ಎನ್.ಬಾಲಕೃಷ್ಣ ಹೇಳಿದರು.

ಪಟ್ಟಣದ ಕಾರ್ಯನಿರತ ಪತ್ರಕರ್ತರ ಸಂಘದ ಸಭಾಂಗಣದಲ್ಲಿ ಪತ್ರಿಕಾ ದಿನಾಚರಣೆ ಅಂಗವಾಗಿ ಬುಧವಾರ ಏರ್ಪಡಿಸಿದ್ದ ರಕ್ತದಾನ ಶಿಬಿರ ಹಾಗೂ ಪತ್ರಿಕಾ ಪ್ರದರ್ಶನ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಮಾಧ್ಯಮ ಕ್ಷೇತ್ರ ಸಂವಿಧಾನದ ನಾಲ್ಕನೇ ಅಂಗ ಇದ್ದಂತೆ ಎಂದರು.

ವಿಧಾನ ಪರಿಷತ್ ಸದಸ್ಯ ಎಂ.ಎ.ಗೋಪಾಲಸ್ವಾಮಿ ಮಾತನಾಡಿ, ಕರೊನಾ ಸೋಂಕು ಹರಡುವಿಕೆ ಝೀರೋ ಇದ್ದಾಗ ಲಾಕ್ ಡೌನ್ ಮಾಡಲಾಗಿದ್ದು ದೇಶದ ಆರ್ಥಿಕತೆ ಹಾಗೂ ಜನರ ಬದುಕು ಸಂಕಷ್ಟಕ್ಕೆ ಸಿಲುಕಿತ್ತು. ಆದರೆ ಕರೊನಾ ಸೋಂಕು ಸಮುದಾಯದಲ್ಲಿ ಕಾಣಿಸಿಕೊಳ್ಳುತ್ತಿರುವ ವೇಳೆಯಲ್ಲಿ ಅದರ ವಿರುದ್ಧ ಹೋರಾಡಬೇಕು ಎನ್ನುತ್ತಿರುವ ಕೇಂದ್ರ ಹಾಗೂ ರಾಜ್ಯ ಸರ್ಕಾರದ ನಿಲುವು ಸದ್ಯಕ್ಕೆ ಅರ್ಥವಾಗದ ಕಗ್ಗಂಟಾಗಿದೆ ಎಂದರು.

ಶಿಬಿರದಲ್ಲಿ 40 ಕ್ಕೂ ಹೆಚ್ಚು ಮಂದಿ ರಕ್ತದಾನ ಮಾಡಿದರು, ಶಾಸಕ ಸಿ.ಎನ್.ಬಾಲಕೃಷ್ಣ ಅವರು ಪರ್ತಕರ್ತರ ಕ್ಷೇಮಾಭಿವೃದ್ಧಿ ನಿಧಿಗೆ ತಮ್ಮ ವೇತನದಲ್ಲಿ 1 ಲಕ್ಷ ರೂ. ನೀಡುವುದಾಗಿ ಘೋಷಿಸಿದರೆ, ಸರ್ಕಾರಿ ನೌಕರರ ಸಂಘದ ವತಿಯಿಂದ ಅಧ್ಯಕ್ಷ ಮಂಜುನಾಥ್ 25 ಸಾವಿರ ರೂ. ಚೆಕ್ ನೀಡಿದರು.

ಮೆಳೆಯಮ್ಮ ಆಧ್ಯಾತ್ಮಿಕ ಕೇಂದ್ರದ ಚಂದ್ರಶೇಖರ ಗುರೂಜಿ ಮಾತನಾಡಿದರು, ತಹಸೀಲ್ದಾರ್ ಜೆ.ಬಿ.ಮಾರುತಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜತ್ತೇನಹಳ್ಳಿ ರಾಮಚಂದ್ರ, ತಾಲೂಕು ಆರೋಗ್ಯಾಧಿಕಾರಿ ಡಾ.ಕಿಶೋರ್ ಕುಮಾರ್, ಎಇಇ ಅಂಬಿಕಾ, ಪರಿಸರ ಪ್ರೇಮಿ ಸಿ.ಎನ್.ಅಶೋಕ್, ಜಿಲ್ಲಾ ಪರ್ತಕರ್ತರ ಸಂಘದ ಅಧ್ಯಕ್ಷ ಪ್ರಸನ್ನಕುಮಾರ್, ಮಾಜಿ ಅಧ್ಯಕ್ಷ ರವಿ ನಾಕಲಗೂಡು, ಪ್ರಧಾನ ಕಾರ್ಯದರ್ಶಿ ಕೆ.ಜಿ.ಸುರೇಶ್, ಹಿಂದು ಪ್ರಕಾಶ್, ಡಾ.ನಾಗೇಶ್, ಡಾ.ಮಹೇಶ್, ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಜಯರಾಂ, ಪ್ರಧಾನ ಕಾರ್ಯದರ್ಶಿ ದಯಾನಂದ್, ಮಾಜಿ ಅಧ್ಯಕ್ಷ ಸ್ವಾಮಿಗೌಡ ಹಾಗೂ ಇತರರು ಉಪಸ್ಥಿತರಿದ್ದರು.