ಎನ್.ಆರ್.ಪುರ ತಾಲೂಕು ಬಿ.ಎಚ್.ಕೈಮರದಲ್ಲಿ ಬ್ರಹ್ಮಶ್ರೀ ನಾರಾಯಣಗುರು ಜಯಂತ್ಯುತ್ಸವ ಕಾರ್ಯಕ್ರಮವನ್ನು ಶಾಸಕ ಟಿ.ಡಿ.ರಾಜೇಗೌಡ ಉದ್ಘಾಟಿಸಿದರು. ಸುಧಾಕರ್ ಎಸ್.ಶೆಟ್ಟಿ, ಪಿ.ಆರ್.ಸದಾಶಿವ, ಎಂ.ವಿ.ಮೂರ್ತಿ, ಪಿ.ಆರ್.ಸುಕುಮಾರ್, ಜಯರಾಂ, ಜನಾರ್ದನ, ನಾರಾಯಣ ಪೂಜಾರ್, ಅಜಿತ್‌ಕುಮಾರ್ ಇತರರಿದ್ದರು. 
ನ್ಯೂಸ್

ಸಮಾಜಕ್ಕೆ ನಾರಾಯಣಗುರು ಕೊಡುಗೆ ಅನನ್ಯ

ಎನ್.ಆರ್.ಪುರ: ಶೋಷಿತ ವರ್ಗದವರು, ಕೆಳವರ್ಗದವರು ದೇಶದಲ್ಲಿ ಸಮಾನತೆ ಕಂಡಿದ್ದರೆ ಅದು ಶ್ರೀ ನಾರಾಯಣಗುರು ಅವರ ತ್ಯಾಗ, ಶ್ರಮದ ಲದಿಂದ ಮಾತ್ರ ಎಂದು ಶಾಸಕ ಟಿ.ಡಿ.ರಾಜೇಗೌಡ ಹೇಳಿದರು.

ಭಾನುವಾರ ಬಿ.ಎಚ್.ಕೈಮರದಲ್ಲಿ ನಡೆದ 171ನೇ ಬ್ರಹ್ಮಶ್ರೀ ನಾರಾಯಣಗುರುಗಳ ಜಯಂತ್ಯುತ್ಸವದಲ್ಲಿ ಮಾತನಾಡಿ, ಸಮಾಜಕ್ಕೆ ನಾರಾಯಣಗುರು ಅವರ ಕೊಡುಗೆ ಅನನ್ಯ. ಒಂದೇ ಜಾತಿ, ಒಂದೇ ಧರ್ಮ, ಒಂದೇ ದೇವರು ಎಂದು ಪ್ರತಿಪಾದಿಸಿದವರು. ಎಲ್ಲರನ್ನೂ ಒಗ್ಗೂಡಿಸಿ, ಸಹಭೋಜನ ನಡೆಸಿ ಸಮಾನತೆ, ಸಹಬಾಳ್ವೆ ಮೆರೆದ ಮೇರು ವ್ಯಕ್ತಿತ್ವದವರಾಗಿದ್ದಾರೆ ಎಂದರು.

ಯಾವುದೇ ಕ್ಷೇತ್ರದಲ್ಲಿ ಸಾಧನೆ ಮಾಡಬೇಕಾದರೆ ಶಿಕ್ಷಣವೇ ಮುಖ್ಯ ಅಸ. ಶಿಕ್ಷಣವಿದ್ದರೆ ಎಲ್ಲ ಸಮುದಾಯವದರೂ ಸಂಘಟಿತರಾಗಬಹುದಾಗಿದೆ. ಭಾರತ ಸರ್ಕಾರ ಅವರ ಅನನ್ಯ ಸೇವೆ ಪರಿಗಣಿಸಿ ಅವರ ಭಾವಚಿತ್ರವುಳ್ಳ ನಾಣ್ಯವನ್ನು ಹೊರತಂದಿದೆ. ಅವರ ಆದರ್ಶ, ತತ್ವ ಸಿದ್ಧಾಂತಗಳನ್ನು ಯುವಪೀಳಿಗೆ ಪಾಲಿಸಬೇಕು. ಶೃಂಗೇರಿ ಕ್ಷೇತ್ರದ ಇತಿಹಾಸದಲ್ಲಿ ಕ್ಷೇತ್ರದ ಮೂರೂ ತಾಲೂಕುಗಳಲ್ಲಿ ನಾರಾಯಣಗುರು ಸಮುದಾಯದವರಿಗೆ ಅಧಿಕ ಅನುದಾನ ನೀಡಿದ್ದೇನೆ. ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ.ಶ್ರೀನಿವಾಸ್ ಕೂಡ ನಿಮ್ಮ ಸಮುದಾಯ ಭವನ ನಿರ್ಮಾಣಕ್ಕೆ 7 ಲಕ್ಷ ರೂ. ಅನುದಾನ ನೀಡಿದ್ದಾರೆ. ಈ ಸಮುದಾಯ ಭವನ ಕಾಮಗಾರಿ ಪೂರ್ಣಗೊಳಿಸಲು 25 ಲಕ್ಷ ರೂ. ನೀಡುವುದಾಗಿ ಭರವಸೆ ನೀಡಿದರು.

ಶ್ರೀ ನಾರಾಯಣಗುರು ಸಮಾಜ ಸೇವಾ ಸಂಘದ ಅಧ್ಯಕ್ಷ ಪಿ.ಆರ್.ಸದಾಶಿವ ಮಾತನಾಡಿ, ಕೇರಳದಲ್ಲಿ ಬಡತನದಿಂದ, ಅನಕ್ಷರತೆಯಿಂದಾಗಿ ಹಿಂದುಗಳು ಕ್ರಿಶ್ಚಿಯನ್, ಮುಸ್ಲಿಂ ಧರ್ಮಕ್ಕೆ ಮತಾಂತರಗೊಳ್ಳುತ್ತಿದ್ದರು. ಕೆಳವರ್ಗದವರಿಗೆ ದೇವಸ್ಥಾನಕ್ಕೆ ಪ್ರವೇಶ ಇರಲಿಲ್ಲ. ನಾರಾಯಣಗುರು ಅವರು ಅಂದಿನ ಕಾಲದಲ್ಲೇ ಅಸಮಾನತೆಯ ವಿರುದ್ಧ ಸಿಡಿದೆದ್ದಿದ್ದರು. ನಮ್ಮ ಸಮುದಾಯದವರು ಶೈಕ್ಷಣಿಕವಾಗಿ, ರಾಜಕೀಯವಾಗಿ ಸಮಾಜದ ಮುಖ್ಯವಾಹಿನಿಗೆ ಬರಬೇಕು ಎಂದರು.

ಎಸ್‌ಎಸ್‌ಎಲ್‌ಸಿ, ಪಿಯುಸಿ ಹಾಗೂ ಪದವಿಯಲ್ಲಿ ಹೆಚ್ಚು ಅಂಕ ಪಡೆದ ಸಮುದಾಯದ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಮಾಡಲಾಯಿತು. ವಿವಿಧ ಕ್ರೀಡಾಕೂಟದಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು ವಿತರಿಸಲಾಯಿತು. ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

ಗುಬ್ಬಿಗಾ ಗ್ರಾಪಂ ಅಧ್ಯಕ್ಷೆ ಕೆ.ಟಿ.ನಾಗರತ್ನಾ, ಉಪಾಧ್ಯಕ್ಷೆ ಶಂಕರ್, ನಾರಾಯಣಗುರು ಸಮಾಜ ಸೇವಾ ಸಂಘದ ಸಂಘಟನಾ ಕಾರ್ಯದರ್ಶಿ ಪಿ.ಆರ್.ಸುಕುಮಾರ್, ಉಪಾಧ್ಯಕ್ಷರಾದ ನಾರಾಯಣ ಪೂಜಾರಿ, ಎಂ.ವಿ.ಮೂರ್ತಿ, ಜನಾದರ್ನ, ಸಂಘಟನಾ ಕಾರ್ಯದರ್ಶಿ ಜಯರಾಂ, ಯುವ ವೇದಿಕೆ ಅಧ್ಯಕ್ಷ ದೇವರಾಜ್, ಪ್ರಧಾನ ಕಾರ್ಯದರ್ಶಿ ಅಜಿತ್‌ಕುಮಾರ್, ನಾರಾಯಣಗುರು ಮಹಿಳಾ ಸಂಘದ ಅಧ್ಯಕ್ಷೆ ಪ್ರೇಮಾ ವಾಸುದೇವ ಕೋಟ್ಯಾನ್, ಕಾರ್ಯಕಾರಿಣಿ ಸಮಿತಿ ಸದಸ್ಯರಾದ ಗಾಂಧಿಗ್ರಾಮ ನಾಗರಾಜು, ಮಾಧವಿ ರಾಮಚಂದ್ರ, ಹೊನಗಾರ್ ರಮೇಶ್, ಜಾನಕಿ ರಾಜಶೇಖರ್, ಹಾತೂರು ಪ್ರಭಾಕರ್ ಇದ್ದರು.