ಮೈಸೂರು: ಇಬ್ಬರು ಮಾತುಬಾರದವರು, ಒಬ್ಬರು 96 ವರ್ಷದ ವಯೋವೃದ್ಧರು, ಒಬ್ಬರು ಜೈಲಿನಿಂದ ಬಂದಿದ್ದರು, ಒಬ್ಬರು ದಸರಾ ಆನೆಯ ಮಾವುತರ ಮಗಳು, ಒಬ್ಬರು ವೈದ್ಯರು, ಮತ್ತೆ ಕೆಲವರು ಸಾಹಿತ್ಯ ಕ್ಷೇತ್ರದಲ್ಲಿ ಈಗಷ್ಟೇ ಕೃಷಿ ಆರಂಭಿಸಿದ್ದವರು… ಹೀಗೆ ಹಲವು ವಿಶೇಷ ಕಾರಣಗಳಿಂದಾಗಿ ಗಮನ ಸೆಳೆದದ್ದು ಜಗನ್ಮೋಹನ ಅರಮನೆಯಲ್ಲಿ ಬಾನುವಾರ ನಡೆದ ಸಮಾನತಾ ಕವಿಗೋಷ್ಠಿ.
ದಸರಾ ಸಂಭ್ರಮದಲ್ಲಿ ಎಲ್ಲರೂ ಪಾಲ್ಗೊಳ್ಳಬೇಕೆಂದು ಸಮಿತಿಯವರು ಈ ಬಾರಿ ಐದು ವಿಭಾಗಗಳಲ್ಲಿ ಕವಿಗೋಷ್ಠಿಗಳನ್ನು ನಡೆಸುತ್ತಿದ್ದಾರೆ. ಎರಡನೇ ದಿನದ ಸಮಾನತೆ ಕವಿಗೋಷ್ಠಿಯಲ್ಲಿ 96 ವರ್ಷದ ಕವಯಿತ್ರಿ ನುಗ್ಗೇಹಳ್ಳಿ ಪಂಕಜಾ ಅವರು ವೈದ್ಯಕೀಯ ಆರೈಕೆಯಲ್ಲೇ ಟ್ರೈಸಿಕಲ್‌ನಲ್ಲಿ ಬಂದು ಇಂಗ್ಲಿಷ್ ಕವಿತೆ ಓದಿದರು.
ಜೆಎಸ್‌ಎಸ್ ಕಾಲೇಜಿನ ಇಬ್ಬರು ಮೂಕ ವಿದ್ಯಾರ್ಥಿಗಳು ಕವಿತೆ ಬರೆದಿದ್ದರು. ಆದರೆ ಅವರಿಗೆ ಅವನ್ನು ವಾಚನ ಮಾಡಲು ಸಾಧ್ಯವಿರಲಿಲ್ಲ ಆದ್ದರಿಂದ ಅದೇ ಕಾಲೇಜಿನ ಉಪನ್ಯಾಸಕರಾದ ಪಳನಿಸ್ವಾಮಿಯವರು ಕವಿತೆ ಓದಿದರು. ವಿದ್ಯಾರ್ಥಿಗಳು ಅಭಿನಯದ ಮೂಲಕ ಅದರ ಭಾವನೆಗಳನ್ನು ಅಭಿವ್ಯಕ್ತಿಸಿದರು.