ಹುಣಸೂರು: ಸಮುದಾಯದ ಹಿತ ರಾಷ್ಟ್ರದ ಹಿತಾಸಕ್ತಿಗೆ ಪೂರಕವಾಗಿರಬೇಕು ಎಂದು ಮಾದಳ್ಳಿ ಉಕ್ಕಿನಕಂತೆ ಮಠದ ಶ್ರೀ ಸಾಂಬಸದಾಶಿವ ಸ್ವಾಮೀಜಿ ಅಭಿಪ್ರಾಯಪಟ್ಟರು.
ನಗರದ ಶ್ರೀ ಗುರುಬೂದಿ ಮಂಗಳಮಂಟಪ ಭವನದಲ್ಲಿ ಮಂಗಳವಾರ ಆಯೋಜಿಸಿದ್ದ ಅಖಿಲ ಭಾರತ ವೀರಶೈವ-ಲಿಂಗಾಯತ ಮಹಾಸಭಾದ ಹುಣಸೂರು ಘಟಕದ ನೂತನ ಪದಾಧಿಕಾರಿಗಳ ಅಧಿಕಾರ ಸ್ವೀಕಾರ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ವೀರಶೈವ ಸಮುದಾಯವು ಶತಮಾನದ ಇತಿಹಾಸ ಹೊಂದಿದ್ದು, ಈ ಸಮುದಾಯ ನಾಡಿನ ಅಭ್ಯುದಯಕ್ಕೆ ಶ್ರಮಿಸುತ್ತಲೇ ಬಂದಿದೆ. 12ನೇ ಶತಮಾನದಲ್ಲೇ ಜಾತ್ಯತೀತತೆ, ಸಾಮಾಜಿಕ ನ್ಯಾಯದ ಪರಿಕಲ್ಪನೆಯನ್ನು ಬಸವಣ್ಣ ಅನುಭವ ಮಂಟಪದ ಮೂಲಕ ತೋರಿಸಿಕೊಟ್ಟಿದ್ದಾರೆ. ಸಮಾಜ ಕಲ್ಯಾಣದಿಂದ ಸರ್ವರ ಕಲ್ಯಾಣವಾಗಬೇಕು. ದೇಶದ ಏಕತೆ, ಭದ್ರತೆ ಮತ್ತು ಸಾಮಾಜಿಕ ಸದೃಢತೆಗೆ ವೀರಶೈವ-ಲಿಂಗಾಯತ ಸಮಾಜದ ಕೊಡುಗೆಯನ್ನು ನಾವೆಲ್ಲರೂ ಅರಿತು ನಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.
ಸಾನ್ನಿಧ್ಯವಹಿಸಿದ್ದ ಗಾವಡಗೆರೆ ಶ್ರೀ ಗುರುಲಿಂಗಜಂಗಮದೇವರ ಮಠದ ಶ್ರೀ ನಟರಾಜಸ್ವಾಮಿ ಮಾತನಾಡಿ, ನಮ್ಮ ಸಮಾಜ ನಿಂತ ನೀರಲ್ಲ. ಬದಲಾವಣೆ ಜಗದ ನಿಯಮ. ವೀರಶೈವ ಲಿಂಗಾಯತ ಸಮಾಜ ಅದರೊಳಗೂಡಿ ತನ್ನದೇ ಆದ ಮಹತ್ತರ ಮತ್ತು ಐತಿಹಾಸಿಕ ಕೊಡುಗೆಗಳನ್ನು ನೀಡುವ ಮೂಲಕ ಜನಮಾನಸದಲ್ಲಿ ನೆಲೆಯಾಗಿ ನಿಂತಿದೆ ಎಂದರು.
ಕಾರ್ಯಕ್ರಮದ ಉದ್ಘಾಟಿಸಿ ಮಾತನಾಡಿದ ಮೈಸೂರು ಜಿಲ್ಲಾ ವೀರಶೈವ ಮಹಾಸಭಾ ನೂತನ ಅಧ್ಯಕ್ಷ ಹಿನಕಲ್ ಬಸವರಾಜು, ಸಮಾಜದ ಅಭಿವೃದ್ಧಿಗಾಗಿ ಪ್ರತಿಯೊಬ್ಬರೂ ಪ್ರಯತ್ನಿಸಬೇಕು ಎಂದರು.
ತಾಲೂಕು ಘಟಕದ ನೂತನ ಅಧ್ಯಕ್ಷ ಎಚ್.ಎಸ್.ಸೋಮಶೇಖರ್ ಮಾತನಾಡಿ, ತಾಲೂಕಿನಲ್ಲಿ ಸಮಾಜದ ಸರ್ವತೋಮುಖ ಅಭಿವೃದ್ಧಿಗೆ ಕಂಕಣಬದ್ಧರಾಗಿ ದುಡಿಯಬೇಕು. ಈ ನಿಟ್ಟಿನಲ್ಲಿ ನಾವು ಕಾರ್ಯಪ್ರವೃತ್ತರಾಗಬೇಕು ಎಂದು ಹೇಳಿದರು.
ಶರಣ ಸಾಹಿತ್ಯ ಪರಿಷತ್ತಿನ ತಾಲೂಕು ಅಧ್ಯಕ್ಷ ಮೋದೂರು ಮಹೇಶಾರಾಧ್ಯ, ಮಹಾಸಭಾದ ಮಾಜಿ ಅಧ್ಯಕ್ಷ ಜಾಬಗೆರೆ ರಮೇಶ್‌ಕುಮಾರ್, ಡಾ.ವೃಷಬೇಂದ್ರಸ್ವಾಮಿ, ಕೆ.ಆರ್.ನಗರ ತಾಲೂಕು ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸಿ.ಪಿ.ರಮೇಶ ಕುಮಾರ್, ರೇಣುಕಪ್ರಸಾದ್, ಶಿವಕುಮಾರ್, ವೀರಶೈವ ಸರ್ಕಾರಿ ನೌಕರ ಸಂಘದ ಅಧ್ಯಕ್ಷ ಹರೀಶ್, ನಿರ್ದೇಶಕರಾದ ಭಾಗ್ಯಕುಮಾರ್, ಕೂಸಪ್ಪ, ಕರ್ಣಕುಪ್ಪೆ ಬಸವರಾಜ್, ವಜ್ರಮ್ಮ, ಮಂಜುಳಾ, ಹೆಗ್ಗಂದೂರು ಶಿವಕುಮಾರ್, ಬಿ.ರವಿ, ಬಿ.ಎನ್.ನಾಗರಾಜಪ್ಪ, ವೀರಭದ್ರಪ್ಪ ಇತರರಿದ್ದರು.
ಅಧಿಕಾರ ಸ್ವೀಕಾರಎಚ್.ಎಸ್.ಸೋಮಶೇಖರ್(ಅಧ್ಯಕ್ಷ), ನಿರ್ದೇಶಕರಾಗಿ ಜೆ.ಎಸ್.ರಮೇಶ್‌ಕುಮಾರ್, ಭಾಗ್ಯಕುಮಾರ್, ದೇವರಾಜು, ಜಯಣ್ಣ, ಎಂ.ಆರ್.ಜಗದೀಶ್, ಸೋಮಣ್ಣ, ಕೆ.ಸಿ.ಮಹದೇವಪ್ಪ, ಎಚ್.ಬಿ.ಶೇಖರಾಜು, ಪರಮೇಶ್ ಬಿಳಿಕೆರೆ, ಚಂದ್ರಶೇಖರ್, ಬಿ.ಕೆ.ಲೋಕೇಶ್, ಪುಟ್ಟಲಿಂಗಪ್ಪ, ಪರಮೇಶ್, ಬಸಮ್ಮಣಿ, ಸುಮಿತ್ರಾ, ವಿನೋದ, ಭಾಗ್ಯ, ವಿ.ರಾಣಿ, ಗೌರಮ್ಮ ಮತ್ತು ಎಸ್.ಆರ್.ಮಂಜುಳಾ ಪದಾಧಿಕಾರಿಗಳಾಗಿ ಅಧಿಕಾರ ಸ್ವೀಕರಿಸಿದರು.