ಸಭೆ ಸಮಾರಂಭಗಳಿಗೆ ಬರುವ ಜನರಿಗೆ ಪುಸ್ತಕಗಳನ್ನು ನೀಡಿ ಓದುವಂತೆ ಪ್ರೇರಣೆ ನೀಡಬೇಕು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕಿ ಡಾ.ಧರಣಿದೇವಿ ಮಾಲಗತ್ತಿ ಹೇಳಿದರು.
ಸಂವಹನ ಟ್ರಸ್ಟ್, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಕನ್ನಡ ಸಾಹಿತ್ಯ ಪರಿಷತ್ ಸಹಯೋಗದಲ್ಲಿ ವಿಜಯನಗರದಲ್ಲಿರುವ ಜಿಲ್ಲಾ ಕಸಾಪ ಭವನದಲ್ಲಿ ಶನಿವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಹಾಗೂ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು.
ಜನರಲ್ಲಿ ಓದುವ ಅಭ್ಯಾಸವಾಗುವಂತಹ ಕೆಲಸಗಳು ಜರುಗಿದರೆ, ಜನರಿಗೆ ಕನ್ನಡ ಸಾಹಿತ್ಯದ ಮೇಲೂ ಹೆಚ್ಚಿನ ಪ್ರೀತಿ ಬರುತ್ತದೆ. ಗ್ರಾಮೀಣ ಪ್ರದೇಶದಲ್ಲಿ ಓದಿನ ತುಡಿತ ಹೆಚ್ಚಾಗುತ್ತಿರುವುದರಿಂದ, ನಗರದ ಪ್ರದೇಶಕ್ಕೆ ಬಂದು ಅನೇಕ ಸವಾಲು ಎದುರಿಸಿ ಸಾಧನೆ ಮಾಡುತ್ತಿದ್ದಾರೆ. ಸಾಹಿತ್ಯ ಕ್ಷೇತ್ರದಲ್ಲಿ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ತೊಡಗಿಸಿಕೊಳ್ಳುತ್ತಿರುವುದು ತುಂಬ ಸಂತಸವಾಗಿದೆ ಎಂದು ತಿಳಿಸಿದರು.
ವಿಶ್ರಾಂತ ಕುಲಪತಿ ಡಾ.ಪದ್ಮಾಶೇಖರ್ ಮಾತನಾಡಿ, ಹೆಣ್ಣು ಮಕ್ಕಳಲ್ಲಿ ಧೈರ್ಯ ಹಾಗೂ ಛಲ ಇದ್ದರೆ ಎಂತಹ ಸಾಧನೆಯನ್ನಾದರೂ ಮಾಡಬಹುದು ಎಂಬುದಕ್ಕೆ ಅನೇಕ ನಿರ್ದೇಶನಗಳು ನಮ್ಮ ಮುಂದೆ ಇವೆ. ಪ್ರಶಸ್ತಿಗಳು ಸಾಧನೆಗಿಂತ ಜವಾಬ್ದಾರಿ ಹೆಚ್ಚುಸುತ್ತವೆ ಎಂದು ತಿಳಿಸಿದರು.
ಇದೇ ವೇಳೆ ಹಿರಿಯ ಸಾಹಿತಿ ಡಾ.ಡಿ.ಕೆ.ರಾಜೇಂದ್ರ ಅವರನ್ನು ಸನ್ಮಾನಿಸಲಾಯಿತು. ಮಹಾರಾಣಿ ಸರಕಾರಿ ಪದವಿಪೂರ್ವ ಕಾಲೇಜಿನ ಅಧ್ಯಾಪಕ ಡಾ.ಎನ್.ಎನ್.ಚಿಕ್ಕಮಾದು ಅವರಿಗೆ ಸಂವನಹ ಸಿರಿ ಯುವ ಸಾಹಿತ್ಯ ಪ್ರಶಸ್ತಿ ಪ್ರದಾನ ಮಾಡಲಾಯಿತು. ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ವಿಶ್ರಾಂತ ಕುಲಪತಿ ಡಾ.ಪದ್ಮಾಶೇಖರ್ ಹಾಗೂ ಸುವರ್ಣ ಕರ್ನಾಟಕ ಪ್ರಶಸ್ತಿ ಪುರಸ್ಕೃತರಾದ, ಜಿಲ್ಲಾ ಕಸಾಪ ಅಧ್ಯಕ್ಷ ಮಡ್ಡಿಕೆರೆ ಗೋಪಾಲ್ ಅವರನ್ನು ಅಭಿನಂದಿಸಲಾಯಿತು.
ಹಿರಿಯ ವಿದ್ವಾಂಸ ಡಾ.ರಾಮೇಗೌಡ (ರಾಗೌ), ಹಿರಿಯ ವಿಜ್ಞಾನ ಲೇಖಕ ಎಸ್.ರಾಮಪ್ರಸಾದ್, ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕಿ ಡಾ.ಎನ್.ಕೆ.ಲೋಲಾಕ್ಷಿ, ಜೆಎಸ್‌ಎಸ್ ಮಹಾವಿದ್ಯಾಪೀಠದ ಪ್ರಕಟಣ ವಿಭಾಗದ ನಿರ್ದೇಶಕ ಪ್ರೊ.ಮೊರಬದ ಮಲ್ಲಿಕಾರ್ಜುನ, ಕನ್ನಡ ಸಾಹಿತ್ಯ ಕಲಾಕೂಟದ ಅಧ್ಯಕ್ಷ ಎಂ.ಚಂದ್ರಶೇಖರ್, ಸಂವಹನ ಟ್ರಸ್ಟ್‌ನ ಅಧ್ಯಕ್ಷ ಡಿ.ಎನ್.ಲೋಕಪ್ಪ, ಶಾರದಾ ವಿಲಾಸ ಕಾಲೇಜಿನ ವಿಶ್ರಾಂತ ಪ್ರಾಧ್ಯಾಪಕಿ ಪ್ರೊ.ಎ.ಶಶಿಕಲಾ ಮತ್ತಿತರರು ಇದ್ದರು.