ನ್ಯೂಸ್

ಸಬ್‌ರಿಜಿಸ್ಟ್ರಾರ್ ಕೆಲಸದ ಆಮಿಷ, 30 ಲಕ್ಷ ರೂ. ವಂಚನೆ

ಬೆಂಗಳೂರು : ಸಬ್ ರಿಜಿಸ್ಟ್ರಾರ್ ಹುದ್ದೆ ಕೊಡಿಸುವ ಆಮಿಷವೊಡ್ಡಿ 36 ಲಕ್ಷ ರೂ. ಪಡೆದು ವಂಚನೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ.

ಮರಿಯಪ್ಪನಪಾಳ್ಯದ ಪಿ.ಮಹೇಶ್ ಮೋಸಕ್ಕೆ ಒಳಗಾದವರು. ಆರೋಪಿಗಳಾದ ಡಿ.ಬದ್ರಿನಾಥ್ ಮತ್ತು ಪಲ್ಲವಿ ಎಂಬುವರ ವಿರುದ್ಧ ಎ್ಐಆರ್ ದಾಖಲಿಸಿ ತನಿಖೆ ಕೈಗೊಂಡಿರುವುದಾಗಿ ಜ್ಞಾನಭಾರತಿ ಪೊಲೀಸರು ತಿಳಿಸಿದ್ದಾರೆ.

2017ರಲ್ಲಿ ಮಹೇಶ್‌ಗೆ ಸ್ಫರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರ ನಡೆಸುತ್ತಿದ್ದ ಬದ್ರಿನಾಥ್‌ನ ಪರಿಚಯವಾಗಿತ್ತು. ಈ ವೇಳೆ 2016ರಲ್ಲಿ ಕೆಪಿಎಸ್‌ಸಿ ನಡೆಸಿದ ಸಬ್ ರಿಜಿಸ್ಟ್ರಾರ್ ಹುದ್ದೆಗೆ ಪರೀಕ್ಷೆ ಬರೆದಿದ್ದ ವಿಚಾರವನ್ನು ಮಹೇಶ್ ತಿಳಿಸಿದ್ದರು. ಆಗ ಬದ್ರಿನಾಥ್, 36 ಲಕ್ಷ ರೂ. ಕೊಟ್ಟರೆ ಕೆಲಸ ಕೊಡಿಸುವುದಾಗಿ ಆಮಿಷವೊಡ್ಡಿದ್ದ. ಅದಕ್ಕೆ ಒಪ್ಪಿದ ಮಹೇಶ್ 36 ಲಕ್ಷ ರೂ.ಗಳನ್ನು ಬದ್ರಿನಾಥ್ ಮತ್ತು ಪಲ್ಲವಿ ಎಂಬಾಕೆಗೆ ಹಂತ ಹಂತವಾಗಿ ಕೊಟ್ಟಿದ್ದರು. ಆದರೆ, ಅಂತಿಮ ಆಯ್ಕೆ ಪಟ್ಟಿಯಲ್ಲಿ ಮಹೇಶ್ ಹೆಸರು ಬರಲಿಲ್ಲ. ಈ ಬಗ್ಗೆ ಕೇಳಿದಾಗ ಬದ್ರಿನಾಥ್ ಸಬೂಬು ಹೇಳಿ ಕಾಲ ಕಳೆಯುತ್ತಿದ್ದ. ಹಣ ವಾಪಸ್ ಕೊಡುವಂತೆ ಒತ್ತಾಯ ಮಾಡಿದಾಗ 6 ಲಕ್ಷ ರೂ. ಕೊಟ್ಟು ಸುಮ್ಮನಾಗಿದ್ದಾರೆ. ಬಾಕಿ 30 ಲಕ್ಷ ರೂ. ಹಿಂದಿರುಗಿಸಿಲ್ಲ. ಹಣ ಕೇಳಿದಾಗ ಪ್ರಾಣ ಬೆದರಿಕೆ ಹಾಕುತ್ತಿದ್ದಾರೆ.

ಮಹೇಶ್ ದೂರಿನ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.