ಹುಣಸೂರು: ಈ ಬಾರಿಯ ಸ್ವಾತಂತ್ರೃ ದಿನಾಚರಣೆಯನ್ನು ಪ್ರತಿಭಾಪುರಸ್ಕಾರ ಮತ್ತು ಸಾಧಕರಿಗೆ ಸನ್ಮಾನದೊಂದಿಗೆ ಅರ್ಥಪೂರ್ಣವಾಗಿ ಆಚರಿಸಲು ನಿರ್ಧರಿಸಲಾಯಿತು.
ಇಲ್ಲಿನ ನಗರಸಭೆ ಸಭಾಂಗಣದಲ್ಲಿ ಮಂಗಳವಾರ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಆಯೋಜಿಸಿದ್ದ, ಪೂರ್ವಭಾವಿ ಸಭೆಯಲ್ಲಿ ಶಾಸಕ ಜಿ.ಡಿ.ಹರೀಶ್‌ಗೌಡ ಮಾತನಾಡಿ, ಪ್ರತಿಭಾಪುರಸ್ಕಾರದ ಮೂಲಕ ತಾಲೂಕಿನ ಎಸ್‌ಎಸ್‌ಎಲ್‌ಸಿ, ಪಿಯುಸಿ ಮತ್ತು ಪದವಿಯಲ್ಲಿ ವಿವಿಧ ವಿಷಯಗಳ ಟಾಪರ್‌ಗಳನ್ನು ಸನ್ಮಾನಿಸಲಾಗುವುದು ಎಂದರು. ಇದಕ್ಕಾಗಿ 8.5 ಲಕ್ಷ ರೂ.ಗಳನ್ನು ಸಂ್ವತವಾಗಿ ಭರಿಸಲಿದ್ದೇನೆ. ಟಾಪರ್‌ಗಳನ್ನು ಗುರುತಿಸುವ ಕಾರ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಿಂದ ನಡೆಯಲಿದೆ. ಅಲ್ಲದೆ, ಐಎಎಸ್ ಪರೀಕ್ಷೆಯನ್ನು ಯಶಸ್ವಿಯಾಗಿ ಸಂಪನ್ನಗೊಳಿಸಿರುವ ತಾಲೂಕಿನ ತಿಪ್ಪಲಾಪುರ ಗ್ರಾಮದ ಗ್ರಾಮೀಣ ಪ್ರತಿಭೆ ಲೇಖನ್ ಅವರನ್ನು ಸನ್ಮಾನಿಸಲಾಗುವುದು. ನಗರದ ಮುನೇಶ್ವರ ಕಾವಲ್ ಮೈದಾನದಲ್ಲಿ ಧ್ವಜಾರೋಹಣ, ವಿದ್ಯಾರ್ಥಿಗಳಿಂದ ಪಥಸಂಚಲನ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ. ಬೆಳಗ್ಗೆ ಮತ್ತು ಸಂಜೆ ನಡೆಯುವ ಕಾರ್ಯಕ್ರಮಗಳಿಗೆ ಬಹುಮಾನ, ಪಾರಿತೋಷಕದ ಖರ್ಚನ್ನು ನಾನೇ ವೈಯಕ್ತಿಕವಾಗಿ ಭರಿಸಲಿದ್ದೇನೆ. ಸ್ವಾತಂತ್ರೃ ದಿನದ ಮಹತ್ವವನ್ನು ವಿದ್ಯಾರ್ಥಿಗಳಲ್ಲಿ ಬೆಳೆಸುವ ನಿಟ್ಟಿನಲ್ಲಿ ಕಾರ್ಯಕ್ರಮ ಅತ್ಯಂತ ಪ್ರೇರಣಾಪೂರಕವಾಗಿ ಮೂಡಿಬರುವಂತೆ ಸಮಿತಿ ಕ್ರಮವಹಿಸಲಿದೆ ಎಂದರು.
ವಕೀಲ ಪುಟ್ಟರಾಜು ಮಾತನಾಡಿ, ಅಂದು ಬೆಳಗ್ಗೆ ಮುನೇಶ್ವರ ಕಾವಲ್ ಮೈದಾನದಲ್ಲಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮದ ವೇಳೆ ಕಾರ್ಯಕ್ರಮ ನಡೆಯುವ ಜಾಗದ ಸುತ್ತ ಬ್ಯಾರಿಕೇಡ್‌ಗಳನ್ನು ಅಳವಡಿಸಿ ಕಾರ್ಯಕ್ರಮ ಗೊಂದಲಗಳಿಲ್ಲದೇ ನಡೆಯುವಂತೆ ಕ್ರಮವಹಿಸಬೇಕೆಂದು ಕೋರಿದರು.
ಅಧಿಕಾರಿಗಳ ಗೈರಿಗೆ ಬೇಸರಗೊಂಡ ಶಾಸಕ: ಕಳೆದೊಂದು ವರ್ಷದಿಂದ ನಾನು ನೋಡುತ್ತಲೇ ಇದ್ದೇನೆ. ಕೆಡಿಪಿ ಸೇರಿದಂತೆ ಹಲವಾರು ಸಭೆಗಳಲ್ಲಿ ಪೊಲೀಸ್ ಇಲಾಖೆ ಅಧಿಕಾರಿಗಳು ಒಬ್ಬರೂ ಹಾಜರಾಗುತ್ತಿಲ್ಲ. ಅಲ್ಲದೆ, ಹಲವು ಇಲಾಖೆಗಳ ಅಧಿಕಾರಿಗಳು ಗೈರಾಗುತ್ತಿದ್ದಾರೆ. ಅಂತಹವರೆಲ್ಲರಿಗೂ ಕಾರಣ ಕೇಳಿ ನೋಟಿಸ್ ನೀಡಿ. ರಾಷ್ಟ್ರೀಯ ಹಬ್ಬಗಳ ಆಚರಣೆಯನ್ನೂ ಕಡೆಗಣಿಸುತ್ತಿರುವುದು ಸರಿಯಲ್ಲ. ತಹಸೀಲ್ದಾರ್ ಈ ಕುರಿತು ನೋಟಿಸ್ ಜಾರಿಮಾಡಿ ಉತ್ತರ ಪಡೆಯಿರಿ. ನಂತರ ನಾನು ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ಕ್ರಮವಹಿಸುತ್ತೇನೆಂದರು.
ಭಾವಚಿತ್ರ ಅಳವಡಿಕೆಯಲ್ಲಿ ಎಚ್ಚರವಹಿಸಿ: ಕಳೆದ ಬಾರಿ ಸ್ವಾತಂತ್ರೃ ದಿನಾಚರಣೆಯಂದು ದೇಶದ ಮಹನೀಯರ ಭಾವಚಿತ್ರಗಳನ್ನು ಇಟ್ಟು ಆಚರಣೆ ನಡೆಸುವ ಕುರಿತು ತಾಲೂಕಿನ ನಾಲ್ಕಾರು ಶಾಲೆಗಳಲ್ಲಿ ಗೊಂದಲ ಏರ್ಪಟ್ಟಿದೆ. ಈ ಬಾರಿ ಇಂತಹ ಅಪಚಾರಗಳು ಆಗದಿರುವಂತೆ ಶಿಕ್ಷಣ ಇಲಾಖೆ ಗಮನಹರಿಸಬೇಕೆಂದು ಮುಖಂಡ ಚಿಕ್ಕಸ್ವಾಮಿ ಕೋರಿದಾಗ, ರಾಜ್ಯ ಸರ್ಕಾರದ ನಿರ್ದೇಶನದಂತೆ ಅಧಿಕಾರಿಗಳು ಸೂಕ್ತ ಕ್ರಮವಹಿಸಬೇಕು. ತಪ್ಪಿದಲ್ಲಿ ಅವರ ವಿರುದ್ಧ ಶಿಸ್ತುಕ್ರಮ ಜರುಗಿಸಲಾಗುವುದು. ಶಿಷ್ಟಾಚಾರದ ಉಲ್ಲಂಘನೆಯಾಗದಂತೆ ಎಚ್ಚರವಹಿಸ ವಹಿಸಬೇಕೆಂದು ಅಧಿಕಾರಿಗಳಿಗೆ ಶಾಸಕ ಹರೀಶ್‌ಗೌಡ ಸೂಚಿಸಿದರು.
ಸಭೆಯಲ್ಲಿ ತಹಸೀಲ್ದಾರ್ ಮಂಜುನಾಥ್, ತಾ.ಪಂ.ಕಾರ್ಯ ನಿರ್ವಹಣಾಧಿಕಾರಿ ಬಿ.ಕೆ.ಮನು, ಪೌರಾಯುಕ್ತೆ ಕೆ.ಮಾನಸ, ಮುಖಂಡರಾದ ಚಿಕ್ಕಸ್ವಾಮಿ, ನಗರಸಭೆ ಸದಸ್ಯ ಸತೀಶ್ ಕುಮಾರ್, ದೊಡ್ಡಹೆಜ್ಜೂರು ರಮೇಶ್, ಚಿಕ್ಕಸ್ವಾಮಿ, ರಮೇಶ್ ಸೇರಿದಂತೆ ಅಧಿಕಾರಿಗಳು ಮತ್ತು ವಿವಿಧ ಸಂಘಟನೆಗಳ ಮುಖಂಡರು ಇದ್ದರು.
ಹುಣಸೂರು ನಗರಸಭಾ ಸಭಾಂಗಣದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಶಾಸಕ ಜಿ.ಡಿ.ಹರೀಶ್‌ಗೌಡ ಮಾತನಾಡಿದರು. ತಹಸೀಲ್ದಾರ್ ಮಂಜುನಾಥ್, ಇಒ ಬಿ.ಕೆ.ಮನು, ಪೌರಾಯುಕ್ತೆ ಕೆ.ಮಾನಸ ಇದ್ದರು.