ಹುಣಸೂರು: ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಆದರ್ಶಗಳನ್ನು ಪ್ರಚೋದನೆಯಾಗಿ ಬಳಸದೆ ಪ್ರೇರಣೆಯಾಗಿ ಅನುಸರಿಸುವ ಮೂಲಕ ಸದೃಢ ಮತ್ತು ಸಮಾನತೆಯ ಸಮಾಜ ನಿರ್ಮಾಣಕ್ಕೆ ಯುವ ಜನರು ಮುಂದಾಗಬೇಕು ಎಂದು ಶಾಸಕ ಎಚ್.ಪಿ.ಮಂಜುನಾಥ್ ಹೇಳಿದರು.
ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ರಾಜ್ಯ ಪ್ರಾಥಮಿಕ ಶಾಲಾ ಎಸ್ಸಿ, ಎಸ್ಟಿ ಶಿಕ್ಷಕರ ಸಂಘ ಹಾಗೂ ನೌಕರರ ಸಂಘದ ಹುಣಸೂರು ಘಟಕದಿಂದ ಶನಿವಾರ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ, ಬಡ್ತಿ ಮತ್ತು ನಿವೃತ್ತ ನೌಕರರಿಗೆ ಸನ್ಮಾನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಅಂಬೇಡ್ಕರ್ ದೇಶದ ಸಮಗ್ರತೆ, ಐಕ್ಯತೆ ಮತ್ತು ಸಮಾನತೆಯ ಪ್ರತೀಕವಾಗಿ ವಿಶ್ವವೇ ಮೆಚ್ಚುವಂಥ ಸಂವಿಧಾನ ನೀಡಿದರು ಎಂದು ತಿಳಿಸಿದರು.
ಸಂವಿಧಾನ ಆಶಯಗಳನ್ನು ಪ್ರತಿಮನೆಗೂ ತಲುಪಿಸುವ ಕಾರ್ಯ ಆಗಬೇಕಿದೆ. ಜೀವನ ಪೂರ್ತಿ ಅವರು ಶೋಷಣೆಗೊಳಗಾದರೂ ಯಾರ ವಿರುದ್ಧವೂ ಅಶಾಂತಿಯ, ವೈಮನಸ್ಯದ ಭಾವನೆ ಹೊರಹಾಕಲಿಲ್ಲ. ಬದಲಾಗಿ ಸಮಸಮಾಜದ ಕನಸನ್ನು ಸಂವಿಧಾನದ ಮೂಲಕ ನೀಡಿದರು. ಆ ಮೂಲಕ ಅವರು ಎಲ್ಲರ ಮನದಲ್ಲೂ ಶಾಶ್ವತವಾಗಿ ನೆಲೆಯೂರಿದರು ಎಂದರು.
ಮಾಜಿ ಸಚಿವ ಎಚ್.ಸಿ.ಮಹದೇವಪ್ಪ ಮಾತನಾಡಿ, ಶಿಕ್ಷಣ ದೇಶದ ಅಭಿವೃದ್ಧಿಯ ಕಣ್ಣಾಗಿದ್ದು, ಕೇಂದ್ರ ಸರ್ಕಾರದ ನೂತನ ಶಿಕ್ಷಣ ನೀತಿ ದೇಶದ ಶೋಷಿತ ಸಮಾಜವನ್ನು ಶಿಕ್ಷಣದಿಂದ ಮೂಲೆಗುಂಪಾಗಿಸುವ ಹುನ್ನಾರ ಹೊಂದಿದೆ ಎಂದು ಹೇಳಿದರು.
ಅಂಬೇಡ್ಕರ್ ತಮ್ಮ ಜೀವನವನ್ನು ಶಿಕ್ಷಣಕ್ಕಾಗಿಯೇ ಮೀಸಲಿಟ್ಟರು. ಶಿಕ್ಷಣ ವೈಜ್ಞಾನಿಕತೆ ಮತ್ತು ವೈಚಾರಿಕತೆಯನ್ನು ನೀಡಬೇಕಿದೆ. ಆದರೆ 1984ರಲ್ಲಿ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಜಾರಿಗೆ ತಂದಿದ್ದ ರಾಷ್ಟ್ರೀಯ ಶಿಕ್ಷಣ ನೀತಿಯನ್ನು 2020ರ ಮೋದಿ ಸರ್ಕಾರ ಬದಲಾಯಿಸಿ ತಂದಿರುವ ನೂತನ ಶಿಕ್ಷಣ ನೀತಿ ಇಂಥ ಎಲ್ಲ ಉದಾತ್ತ ಧ್ಯೇಯೋದ್ದೇಶಗಳನ್ನು ಹೊಸಕಿ ಹಾಕಿದೆ ಎಂದರು.
ಅಮೆರಿಕ ವಿಶ್ವವಿದ್ಯಾಲಯಕ್ಕೆ ಆಯ್ಕೆಯಾಗಬಲ್ಲ ವಿದ್ಯಾರ್ಥಿಗಳನ್ನು ರೂಪಿಸುತ್ತೇವೆಂಬ ಹುಂಬು ನಂಬಿಕೆಯಿಂದ ಈ ದೇಶದ ದಲಿತ, ರೈತ, ಶೋಷಿತ ಸಮಾಜವು ಉನ್ನತ ವ್ಯಾಸಂಗಕ್ಕೆ ಮುಖ ಮಾಡದಂತೆ ನೀತಿ ರೂಪಿಸಲಾಗಿದೆ. ನೂತನ ಶಿಕ್ಷಣ ನೀತಿ ಜಾರಿಯ ಕುರಿತು ಎಲ್ಲೂ ಚರ್ಚೆಯನ್ನೇ ಮಾಡಲು ಅವಕಾಶ ನೀಡಲಿಲ್ಲ. ಸಂಸತ್ತಿನಲ್ಲೂ ಅವಕಾಶ ನೀಡಲಿಲ್ಲ. ಪದವಿ ಕಾಲೇಜು ಸೇರಲು ಪ್ರವೇಶ ಪರೀಕ್ಷೆ ಎದುರಿಸಬೇಕೆನ್ನುವ ಶಿಕ್ಷಣ ನೀತಿ ಶೋಷಿತರನ್ನು ಶಿಕ್ಷಣದಿಂದ ಮತ್ತು ಉದ್ಯೋಗದಿಂದ ದೂರವಿರಿಸುವ ದುರುದ್ದೇಶ ಹೊಂದಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಉರಿಲಿಂಗಪೆದ್ದಿ ಮಠದ ಶ್ರೀ ಜ್ಞಾನಪ್ರಕಾಶಸ್ವಾಮಿ ಮಾತನಾಡಿದರು. 50ಕ್ಕೂ ಹೆಚ್ಚು ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. 18 ನಿವೃತ್ತ ಸರ್ಕಾರಿ ನೌಕರರು ಮತ್ತು 20 ಉನ್ನತ ಹುದ್ದೆಗೆ ಬಡ್ತಿ ಪಡೆದ ಸರ್ಕಾರಿ ನೌಕರರನ್ನು ಸನ್ಮಾನಿಸಲಾಯಿತು.
ಎಸ್ಸಿ, ಎಸ್ಟಿ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಸೊಣ್ಣಪ್ಪ, ನಗರಸಭಾಧ್ಯಕ್ಷೆ ಗೀತಾ ನಿಂಗರಾಜು, ದಲಿತ ಮುಖಂಡ ನಾಗರಾಜ ಮಲ್ಲಾಡಿ, ಹರಿಹರ ಆನಂದಸ್ವಾಮಿ, ಡಿ.ಕುಮಾರ್ ಇತರರು ಇದ್ದರು.