ಲಿಂಗದಹಳ್ಳಿ ದೇವಾಂಗ ಗಾಯತ್ರಿ ಮಹಿಳಾ ಸಮಾಜದ ಬೆಳ್ಳಿ ಹಬ್ಬ ಮತ್ತು ಹಳೆಯ ಪದಾಧಿಕಾರಿಗಳ ಬೀಳ್ಕೊಡುಗೆ ಸಮಾರಂಭವನ್ನು ವಾಣಿ ಶ್ರೀನಿವಾಸ್ ಉದ್ಘಾಟಿಸಿದರು. ಶಾರದಮ್ಮ, ಕೆ.ಆರ್.ನಾಗರಾಜ್ ಇತರರಿದ್ದರು. 
ನ್ಯೂಸ್

ಸದಸ್ಯರು ಒಗ್ಗೂಡಿದಲ್ಲಿ ಸಮಾಜದ ಪ್ರಗತಿ

ಲಿಂಗದಹಳ್ಳಿ: ಇಲ್ಲಿನ ದೇವಾಂಗ ಗಾಯತ್ರಿ ಮಹಿಳಾ ಸಮಾಜದ ಅಭಿವೃದ್ಧಿಗೆ ಪದಾಧಿಕಾರಿಗಳು ಹಾಗೂ ಸದಸ್ಯರ ಕಠಿಣ ಪರಿಶ್ರಮ ಹಾಗೂ ಸಮನ್ವಯ ಮುಖ್ಯ ಕಾರಣ ಎಂದು ಜಿ.ಎಚ್.ಶ್ರೀನಿವಾಸ್ ಜನಹಿತ ಸೇವಾ ಟ್ರಸ್ಟ್ ಅಧ್ಯಕ್ಷೆ ವಾಣಿ ಶ್ರೀನಿವಾಸ್ ಹೇಳಿದರು.

ಲಿಂಗದಹಳ್ಳಿ ಶ್ರೀ ರಾಮಾಂಜನೇಯ ಸಮುದಾಯ ಭವನದಲ್ಲಿ ಭಾನುವಾರ ನಡೆದ ದೇವಾಂಗ ಗಾಯತ್ರಿ ಮಹಿಳಾ ಸಮಾಜದ 25ನೇ ವರ್ಷದ ಬೆಳ್ಳಿ ಹಬ್ಬದ ಸಂಭ್ರಮ ಮತ್ತು ಸಮಾಜದ ಹಳೆಯ ಪದಾಧಿಕಾರಿಗಳ ಬೀಳ್ಕೊಡುಗೆ ಹಾಗೂ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಮಾಜಕ್ಕೆ ನೂತನವಾಗಿ ಆಯ್ಕೆಯಾಗಿರುವ ಪದಾಧಿಕಾರಿಗಳು ಎಲ್ಲರೂ ಒಗ್ಗೂಡಿ ದೇವಾಂಗ ಸಮಾಜದ ಅಭಿವೃದ್ಧಿಗೆ ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಎಂದು ಸಲಹೆ ನೀಡಿದರು.

ದೇವಾಂಗ ಗಾಯತ್ರಿ ಮಹಿಳಾ ಸಮಾಜದ ಮಾಜಿ ಅಧ್ಯಕ್ಷೆ ಶಾರದಮ್ಮ ಮಾತನಾಡಿ, ಸಮಾಜದ ಪದಾಧಿಕಾರಿಗಳು ನಿಸ್ವಾರ್ಥದಿಂದ ಕಾರ್ಯ ಚಟುವಟಿಕೆಗಳನ್ನು ಮುಂದುವರಿಸಿಕೊಂಡು ಹೋಗುವಂತೆ ಸೂಚಿಸಿದರು. ಮಹಿಳಾ ಸಮಾಜಕ್ಕೆ ಕೊಡುಗೆಯಾಗಿ 25 ಸಾವಿರ ರೂ.ಗಳ ಚೆಕ್ ವಿತರಿಸಿ ಕಾಲಕಾಲಕ್ಕೆ ಅಗತ್ಯ ಮಾರ್ಗದರ್ಶನ ನೀಡುವುದಾಗಿ ಭರವಸೆ ನೀಡಿದರು.

ಲಿಂಗದಹಳ್ಳಿ ಹೋಬಳಿ ದೇವಾಂಗ ಸಮಾಜದ ಅಧ್ಯಕ್ಷ ಕೆ.ಆರ್.ನಾಗರಾಜಪ್ಪ, ಮಾಜಿ ಅಧ್ಯಕ್ಷರಾದ ಬಾಲಕೃಷ್ಣಪ್ಪ, ಕೃಷ್ಣಮೂರ್ತಿ, ಶಿಕ್ಷಕ ನಾಗೇಶಪ್ಪ, ಶಾರದಮ್ಮ, ರತ್ನಮ್ಮ, ಶೋಭಾ ಪ್ರಕಾಶ್, ಕೆ.ಟಿ.ಶಂಕರಮ್ಮ ಇತರರಿದ್ದರು.