ನ್ಯೂಸ್

‘ಸತ್ಯವನ್ನೇ ಹೇಳುತ್ತೇನೆ’ ನಾಟಕ ಕೃತಿ ಬಿಡುಗಡೆ

ರಂಗಾಯಣದ ಮಾಜಿ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ಅವರು ಬರೆದಿರುವ ‘ಸತ್ಯವನ್ನೇ ಹೇಳುತ್ತೇನೆ’ ನಾಟಕ ಕೃತಿ ಬಿಡುಗಡೆ

ಒಂದೇ ದೃಷ್ಟಿಕೋನದ ವ್ಯಕ್ತಿಗಳು ರಚಿಸಿರುವ ಪಠ್ಯಪುಸ್ತಕಗಳನ್ನೇ ನಾವೆಲ್ಲರೂ ಬಾಲ್ಯದಿಂದಲೂ ಓದಿಕೊಂಡು ಬಂದಿದ್ದೇವೆ. ದೇಶದ ಸಮಗ್ರ ಇತಿಹಾಸದ ಬಗ್ಗೆ ತಿಳಿದುಕೊಳ್ಳಬೇಕಾದರೆ ಆರ್.ಸಿ.ಮಜುಂದಾರ್ ಶಾ ಅವರ ಪುಸ್ತಕವನ್ನು ಓದಬೇಕು ಎಂದು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದರು.

ನಗರದ ಕಲಾಮಂದಿರ ಆವರಣದ ಕಿರುರಂಗ ಮಂದಿರದಲ್ಲಿ ಶುಕ್ರವಾರ ಅಯೋಧ್ಯ ಪಬ್ಲಿಕೇಷನ್ ಪ್ರಕಟಿಸಿರುವ, ರಂಗಾಯಣದ ಮಾಜಿ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ಅವರು ಬರೆದಿರುವ ‘ಸತ್ಯವನ್ನೇ ಹೇಳುತ್ತೇನೆ’ ನಾಟಕ ಕೃತಿ ಬಿಡುಗಡೆಗೊಳಿಸಿ ಮಾತನಾಡಿದರು.

ಆರ್.ಸಿ.ಮಜುಂದಾರ್ ಶಾ ಅವರ ಪುಸ್ತಕದ ಬಗ್ಗೆ ತುಂಬ ಜನರಿಗೆ ಗೊತ್ತಿಲ್ಲ. ನಮ್ಮ ತಾತನ ಗ್ರಂಥಾಲಯದಲ್ಲಿ ಎರಡು ಸಂಪುಟ ಇದೆ. ಹಾಗಾಗಿ ನಾನು ಓದಲು ಸಾಧ್ಯವಾಯಿತು ಎಂದು ಹೇಳಿದರು.

ಇಂದು ಸಾಮಾಜಿಕ ಜಾಲತಾಣದಲ್ಲಿ ಒಂದು ವಿಷಯದ ಬಗ್ಗೆ ನೂರಾರು ಜನ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿರುತ್ತಾರೆ. ಆದರೆ, ಇದರಲ್ಲಿ ಯಾವುದು ಸತ್ಯ ಎಂಬುದನ್ನು ನಾವು ಮೊದಲು ಅರ್ಥಮಾಡಿಕೊಳ್ಳಬೇಕು. ಹಂಚಿಕೊಂಡ ಎಲ್ಲ ಅಭಿಪ್ರಾಯವೂ ಸತ್ಯ ಆಗಲ್ಲ. ಅದನ್ನು ನಾವು ಪರಾಮರ್ಶೆ ಮಾಡಬೇಕು ಎಂದರು.

ಇಂದು ಎಲ್ಲ ತಪ್ಪುಗಳನ್ನು ಸರಿ ಮಾಡುವುದು ಕಷ್ಟ. ಆದರೆ, ಅದು ಆಗಬೇಕು. ನೀವು ರಾಜಕಾರಣಕ್ಕೆ ಬಂದರೆ ಜನರಿಗೆ ಕೆಟ್ಟ ಅಭಿಪ್ರಾಯ ಬರುತ್ತದೆ ಎಂದು ಬಹಳಷ್ಟು ಮಂದಿ ನನಗೆ ಹೇಳಿದ್ದರು. ಆದರೆ, ಆ ಒಂದು ಭಯದಲ್ಲಿ ತಪ್ಪುಗಳನ್ನು ಸರಿಪಡಿಸದಿದ್ದರೆ ಮುಂದಿನ ಪೀಳಿಗೆಗೆ ನಾವು ಶ್ರೇಷ್ಠವಾದದ್ದನ್ನು ಏನನ್ನು ನೀಡಲು ಆಗುವುದಿಲ್ಲ. ಹಾಗಾಗಿ ಸರಿಯಾದ ಇತಿಹಾಸ ತಿಳಿಯೋಣ. ಅರ್ಧ ಸತ್ಯಗಳನ್ನು ಪೂರ್ಣಗೊಳಿಸೋಣ ಎಂದು ಆಶಿಸಿದರು.

ರಂಗಕರ್ಮಿ ಪ್ರಕಾಶ್ ಬೆಳವಾಡಿ ಮಾತನಾಡಿ, ಎಲ್ಲವನ್ನೂ ಒಪ್ಪುತ್ತೇನೆ ಅಥವಾ ಎಲ್ಲವನ್ನೂ ಒಪ್ಪುವುದಿಲ್ಲ ಎಂಬ ಧೋರಣೆ ಬೇಡ. ‘ಸತ್ಯವನ್ನೇ ಹೇಳುತ್ತೇನೆ’ ನಾಟಕವನ್ನು ಓದಿ. ಇಷ್ಟು ದಿನ ಕೊಟ್ಟಂತೆ ಇತಿಹಾಸ ಒಪ್ಪಿಕೊಂಡು ಬಂದಿದ್ದೇವೆ. ಇಂತಹ ಸಾಹಸಕ್ಕೆ ಕೈ ಹಾಕಬೇಕು. ನಮಗೆ ಪ್ರಶ್ನೆ ಮಾಡಲು ಬರಬೇಕು. ಪುಸ್ತಕದಲ್ಲಿ ಹಾಗೂ ಪ್ರದರ್ಶನದಲ್ಲಿ ವ್ಯತ್ಯಾಸವಿರುತ್ತದೆ. ಪರ್ವದಲ್ಲೂ ಈ ಅನುಭವವಾಗಿದೆ. ನಾಟಕದ ಆಶಯ ಪ್ರೇಕ್ಷಕ ವರ್ಗಕ್ಕೆ ತಟ್ಟುವ ರೀತಿ ಬೇರೆ ಇರುತ್ತದೆ ಎಂದರು.

ಕಾರ್ಯಪ್ಪ ಅವರು ಈ ಪುಸ್ತಕಕ್ಕೆ ವಿರೋಧ ಬರುತ್ತದೆ ಎಂದೆನಿಸಿದಾಗ ಪರ-ವಿರೋಧ ಚರ್ಚೆ ಆಗಲು ಬಿಡಬೇಕು. ಸಂವಾದ ಏರ್ಪಡಿಸಿ ವಿರೋಧ ಮಾಡುವವರನ್ನು ವೇದಿಕೆಗೆ ಕೂರಿಸಬೇಕು ಎಂದು ಹೇಳಿದರು.

ರಂಗಾಯಣದ ಮಾಜಿ ನಿರ್ದೇಶಕ ಅಡ್ಡಂಡ ಸಿ.ಕಾರ್ಯಪ್ಪ ಮಾತನಾಡಿ, ಈ ಪುಸ್ತಕದ ಪಾತ್ರಗಳಾಗಿರುವ ಎಲ್ಲ ನಾಯಕರ ಸಂಭಾಷಣೆಗೂ ಆಧಾರಗಳಿವೆ. ಅನೇಕ ಪುಸ್ತಕಗಳ ಅಧ್ಯಯನದಿಂದ ಈ ನಾಟಕ ಸಿದ್ಧಪಡಿಸಲಾಗಿದೆ. ಚರಿತ್ರೆ ಎಂದಿಗೂ ಭೂಗರ್ಭದಲ್ಲಿ ಅವಿತಿರಬಾರದು ಅದು ಸ್ಫೋಟಿಸಬೇಕು. ಸತ್ಯಚರಿತ್ರೆಯ ಅನಾವರಣವೇ ‘ಸತ್ಯವನ್ನೇ ಹೇಳುತ್ತೇನೆ’ ನಾಟಕವಾಗಿದೆ. ಈ ಪುಸ್ತಕದಲ್ಲಿ ಬರುವ ಆರು ಮಹನೀಯರು ಸತ್ಯವನ್ನೇ ಹೇಳಿದ್ದಾರೆ. 43 ಪುಸ್ತಕಗಳನ್ನು ಇದಕ್ಕಾಗಿ ಅಧ್ಯಯನ ಮಾಡಿದ್ದೇನೆ. ಚರಿತ್ರೆಯ ಅಂಶಗಳೇ ಇಲ್ಲಿವೆ. ನನ್ನದೇನು ಇಲ್ಲ. ಒಂದು ವೇಳೆ ಪುಸ್ತಕಕ್ಕೆ ಸಮಸ್ಯೆಯಾದರೆ ಅಷ್ಟೂ ಪುಸ್ತಕಗಳಿಗೆ ಸಮಸ್ಯೆಯಾಗಲಿದೆ ಎಂದರು.

ಶಾಸಕ ಶ್ರೀವತ್ಸ, ಡಾ.ಚಂದ್ರಶೇಖರ್, ಅನಿತಾ ಕಾರ್ಯಪ್ಪ, ಪುನೀತ್ ಕೆರೆಹಳ್ಳಿ, ಆರ್‌ಎಸ್‌ಎಸ್ ಅನಂತ ಕೃಷ್ಣ, ಅಕ್ಷಯ ರಾಜೇಂದ್ರ, ಮತ್ತಿತರರಿದ್ದರು.