ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ(ಮುಡಾ) ಪ್ರಕರಣ ಸಂಬಂಧ ನಾವು ನಿರೀಕ್ಷೆ ಮಾಡಿದಂತೆ ಸತ್ಯದ ಪರ ತೀರ್ಪು ಬಂದಿದೆ. ಸತ್ಯಕ್ಕೆ ಜಯ ಸಿಕ್ಕೇ ಸಿಗುತ್ತದೆ ಎನ್ನುವುದಕ್ಕೆ ನ್ಯಾಯಾಲಯದ ತೀರ್ಪು ಸಾಕ್ಷಿಯಾಗಿದೆ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ತಿಳಿಸಿದರು.
ಮಧ್ಯವರ್ತಿಗಳ ಮೂಲಕ ಸರ್ಕಾರ ಬೀಳಿಸುವ ಪ್ರಯತ್ನ ಮಾಡಲಾಗಿತ್ತು. ಜತೆಗೆ ಮುಡಾ ಹಗರಣ ಮುಂದಿಟ್ಟುಕೊಂಡು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ವಿನಾಕಾರಣ ಟೀಕಿಸುವ ಜತೆಗೆ ಅವರನ್ನು ಹಗರಣದಲ್ಲಿ ಸಿಲುಕಿಸಲು ಮುಂದಾಗಿದ್ದ ಬಿಜೆಪಿ-ಜೆಡಿಎಸ್ ನಾಯಕರಿಗೆ ಮುಖಭಂಗವಾಗಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಟೀಕಿಸಿದರು.
ಮುಡಾ ನಿವೇಶನ ಹಂಚಿಕೆ ಪ್ರಕರಣದಲ್ಲಿ ಸಿದ್ದರಾಮಯ್ಯ ಅವರ ಹಸ್ತಕ್ಷೇಪ ಇಲ್ಲ ಎಂಬುದು ನಮಗೆ ಗೊತ್ತಿತ್ತು. ನಮ್ಮ ನಿವೇಶನ ಕಿತ್ತುಕೊಂಡು ನಮಗೆ ಮೋಸ ಮಾಡುವ ಕೆಲಸ ಆಗಿತ್ತು. ಮಧ್ಯವರ್ತಿಗಳ ಮೂಲಕ ಸೈಟ್ ಕಿತ್ತುಕೊಳ್ಳಲು ಮುಂದಾಗಿದ್ದರು. ಸರ್ಕಾರ ಬೀಳಿಸಬೇಕು, ಸಿದ್ದರಾಮಯ್ಯ ಅವರನ್ನು ಅಧಿಕಾರದಿಂದ ಕೆಳಗಿಳಿಸುವುದೇ ಇವರ ಉದ್ದೇಶವಾಗಿತ್ತು ಎಂದು ದೂರಿದರು.
ಸ್ನೇಹಮಯಿ ಕೃಷ್ಣ ಕೂಲಿಗಾಗಿ ಕೆಲಸ ಮಾಡುತ್ತಿದ್ದಾರೆ. ಅವರಿಗೆ ಒಂದಿಷ್ಟು ಹಣ ಕೊಟ್ಟಿರುತ್ತಾರೆ. ಜತೆಗೆ ತನಿಖಾ ಸಂಸ್ಥೆಗೆ ಪ್ರಭಾವ ಬೀರಲು ಇಡಿ ಮುಂದಾಗಿದೆ. ಸಿದ್ದರಾಮಯ್ಯಗೆ ಕೆಟ್ಟ ಹೆಸರು ತರುವುದು ಇಡಿ ಉದ್ದೇಶ. ಇಡಿ ಅಧಿಕಾರಿಗಳು ಇಲ್ಲಿಗೆ ತನಿಖೆ ಸ್ಥಗಿತಗೊಳಿಸಬೇಕು ಎಂದು ಒತ್ತಾಯಿಸಿದರು.
ಸ್ನೇಹಮಯಿ ಕೃಷ್ಣ ಮೇಲ್ ಮಾಡಿದ ತಕ್ಷಣ ಎಫ್‌ಐಆರ್ ಮಾಡಲಾಗುತ್ತದೆ. ಒಂದು ತನಿಖಾ ಸಂಸ್ಥೆ ತನಿಖೆ ಮಾಡುವಾಗ ಮತ್ತೊಂದು ತನಿಖಾ ಸಂಸ್ಥೆ ತನಿಖೆ ಮಾಡಲು ಯಾವ ಕಾನೂನಿನಲ್ಲೂ ಅವಕಾಶ ಇಲ್ಲ. ಹೈಕೋರ್ಟ್‌ನಲ್ಲಿ ದೊಡ್ಡ ವಕೀಲರನ್ನು ಕರೆ ತಂದು ವಾದ ಮಾಡಿಸುತ್ತಾರೆ. ಅವರಿಗೆ ಫೀಸ್ ಕೊಡಲು ಹಣ ಎಲ್ಲಿಂದ ಬಂತು? ಮುಂದಿನ ದಿನಗಳಲ್ಲಿ ಅವರು ಸುಪ್ರೀಂ ಕೋರ್ಟ್ ಮೊರೆ ಹೋದರೆ ಅಲ್ಲಿಯೂ ನಾವು ಹೋರಾಟ ಮಾಡುತ್ತೇವೆ ಎಂದರು.
ಮುಡಾ ಸಭೆಯಲ್ಲಿ ತೆಗೆದುಕೊಂಡ ನಿರ್ಧಾರವನ್ನು ಸ್ವತಃ ಸಿಎಂ ತೆಗೆದುಕೊಂಡಿದ್ದರು ಎಂದು ಬಿಂಬಿಸಲು ಮುಂದಾಗಿದ್ದರು. ಬೆಂಗಳೂರಿನಿಂದ ಮೈಸೂರಿಗೆ ಪಾದಯಾತ್ರೆ ಮಾಡಿದ್ದರು. ಈಗ ನ್ಯಾಯಾಲಯದ ತೀರ್ಪು ಬಂದಿದೆ. ಬಿಜೆಪಿ-ಜೆಡಿಎಸ್ ನಾಯಕರು ನ್ಯಾಯಾಲಯದ ತೀರ್ಪಿನ ಬಳಿಕ ಪಶ್ಚಾತಾಪಕ್ಕಾಗಿ ಬೆಂಗಳೂರಿನಿಂದ ತಿರುಪತಿವರೆಗೆ ಪಾದಯಾತ್ರೆ ಮಾಡಲಿ ಎಂದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್, ಮುಡಾ ಮಾಜಿ ಅಧ್ಯಕ್ಷ ಎಚ್.ವಿ.ರಾಜೀವ್, ಮಾಜಿ ಮೇಯರ್ ಬಿ.ಎಲ್.ಭೈರಪ್ಪ, ಮುಖಂಡರಾದ ಬಿ.ಎಂ.ರಾಮು, ಶಿವಣ್ಣ ಇದ್ದರು.
ಈಗ ಸಿಕ್ಕಿರುವುದು ಆರಂಭದ ಗೆಲುವು, ಅಂತಿಮ ಗೆಲುವಲ್ಲ. ಸಿದ್ದರಾಮಯ್ಯ ವಿರುದ್ಧ ಮೈಸೂರಿನಿಂದಲೇ ಹೋರಾಟಗಳು ನಡೆಯುತ್ತಿವೆ. 135 ಶಾಸಕರ ಪೂರ್ಣ ಬಹುಮತದ ಸರ್ಕಾರ ಇದೆ. ಅದಾಗಿಯೂ ಸಿಎಂ ತವರು ಜಿಲ್ಲೆಯಲ್ಲೇ ಈ ರೀತಿ ಅವರನ್ನು ಸಿಲುಕಿಸುವ ಕೆಲಸ ಆಗುತ್ತಿದೆ. ಸಾಮಾನ್ಯರಲ್ಲಿ ಸಾಮಾನ್ಯ ವ್ಯಕ್ತಿಗಳು ತೇಜೋವಧೆ ಮಾಡುವ ಕೆಲಸ ಮಾಡುತ್ತಿದ್ದಾರೆ. ನಾವೆಲ್ಲರೂ ತುಂಬಾ ತಾಳ್ಮೆಯಿಂದ ಇದ್ದೇವೆ. ಇದೇ ವಿಚಾರ ಬೇರೆಯವರ ವಿಚಾರದಲ್ಲಿ, ಬೇರೆ ಜಿಲ್ಲೆಗಳಲ್ಲಿ ಆಗಿದ್ದರೆ ಸ್ನೇಹಮಯಿ ಕೃಷ್ಣ ಓಡಾಡಲು ಕಷ್ಟ ಆಗುತ್ತಿತ್ತು. ಒಂದು ಗನ್ ಮ್ಯಾನ್ ಇಲ್ಲದೆ ಎಲ್ಲಿ ಬೇಕು ಅಲ್ಲಿ ಓಡಾಡುತ್ತಿದ್ದಾರೆ. ಇನ್ನು ಕೆಲವೇ ದಿನಗಳಲ್ಲಿ ಸಿದ್ದರಾಮಯ್ಯ ಎಲ್ಲ ಆರೋಪಗಳಿಂದ ಮುಕ್ತವಾಗಲಿದ್ದಾರೆ. ಡಾ.ಬಿ.ಜೆ.ವಿಜಯಕುಮಾರ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ