ಬಾಳೆಹೊನ್ನೂರು ರಂಭಾಪುರಿ ಪೀಠದಲ್ಲಿ ಪೌರ್ಣಿಮೆ ಸಂದರ್ಭದಲ್ಲಿ ಶಿವದೀಕ್ಷಾ ಅಯ್ಯಚಾರ ದೀಕ್ಷೆ ಪಡೆದ ವಟುಗಳು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳ ಆಶೀರ್ವಾದ ಪಡೆದರು. 
ನ್ಯೂಸ್

ಸತ್ಯ, ಶುದ್ಧ ಕಾಯಕದಿಂದ ಜೀವನ ವಿಕಾಸ

ಬಾಳೆಹೊನ್ನೂರು: ಮಾನವೀಯ ಮೌಲ್ಯಗಳಿಲ್ಲದ ಜೀವನ ನಿರರ್ಥಕ. ಮೌಲ್ಯಾಧಾರಿತ ಸದ್ಗುಣವಂತರ ಬದುಕು ಆದರ್ಶವಾದುದು. ಸತ್ಯ, ಶುದ್ಧ ಕಾಯಕದಿಂದ ಜೀವನ ವಿಕಾಸಗೊಳ್ಳುತ್ತದೆ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಹೇಳಿದರು.

ರಂಭಾಪುರಿ ಪೀಠದಲ್ಲಿ ಶನಿವಾರ ನಡೆದ ಪೌರ್ಣಿಮೆ ಧರ್ಮ ಸಮಾರಂಭದ ಸಾನ್ನಿಧ್ಯವಹಿಸಿ ಆಶೀರ್ವಚನ ನೀಡಿದರು.

ಜೀವನ ಕೇವಲ ಹಣದಿಂದ ಸಾಗುವ ದೋಣಿಯಲ್ಲ. ಅದಕ್ಕೆ ಮಾನವೀಯತೆ ಎಂಬ ನಾವಿಕ ಅವಶ್ಯ. ಬದುಕು ಎಲ್ಲವನ್ನೂ ಕಲಿಸುತ್ತದೆ. ಆದರೆ ಮನುಷ್ಯನಿಗೆ ಕಲಿಯುವ ಮನಸ್ಸು ಇರಬೇಕಾಗುತ್ತದೆ ಎಂದರು.

ಕಷ್ಟಗಳು ನಮ್ಮನ್ನು ಇನ್ನಷ್ಟು ಗಟ್ಟಿಗೊಳಿಸುತ್ತವೆ. ಸಮಯಕ್ಕೆ ದುಡ್ಡಿಗಿಂತ ಹೆಚ್ಚು ಬೆಲೆ ಇದೆ. ಎಷ್ಟು ಬೇಕಾದರೂ ಹಣ ಸಂಪಾದಿಸಬಹುದು. ಆದರೆ ಸಮಯವನ್ನು ಕೊಂಡುಕೊಳ್ಳಲು ಸಾಧ್ಯವಿಲ್ಲ. ಜ್ಞಾನದಿಂದ ಮನುಷ್ಯನಿಗೆ ಅಧಿಕಾರ ದೊರೆಯಬಹುದಾದರೂ ಗೌರವ ಸಿಗಬೇಕೆಂದರೆ ವ್ಯಕ್ತಿತ್ವ ಇರಬೇಕು ಎಂದರು.

ಹಣ, ಹೆಸರುಗಳಿಕೆಗೆ ಗುದ್ದಾಡುವುದಕ್ಕಿಂತ ಮಾಡುವ ಕೆಲಸವನ್ನು ಶ್ರದ್ಧೆ, ಪ್ರಾಮಾಣಿಕತೆಯಿಂದ ಮಾಡಿದರೆ ಅದು ತಾನಾಗಿಯೇ ಲಭಿಸುತ್ತದೆ. ಅರಿತು ಬಾಳುವುದರಲ್ಲಿ ಸುಖ-ಶಾಂತಿಯಿದೆ. ಬದುಕಿನಲ್ಲಿ ಉತ್ಕರ್ಷತೆ ಮತ್ತು ಶ್ರೇಯಸ್ಸು ಮುಖ್ಯ ಎಂಬುದನ್ನು ಶ್ರೀ ಜಗದ್ಗುರು ರೇಣುಕಾಚಾರ್ಯರು ಸಿದ್ಧಾಂತ ಶಿಖಾಮಣಿಯಲ್ಲಿ ಬೋಧಿಸಿದ್ದಾರೆ ಎಂದರು.

ಸಮಾರಂಭದಲ್ಲಿ ಜಕ್ಕಲಿ ಹಿರೇಮಠದ ವಿಶ್ವಾರಾಧ್ಯ ಶಿವಾಚಾರ್ಯರು, ಹಾರನಹಳ್ಳಿ ಶಿವಯೋಗಿ ಶಿವಾಚಾರ್ಯರು, ನುಗ್ಗೇಹಳ್ಳಿ ಡಾ. ಮಹೇಶ್ವರ ಶಿವಾಚಾರ್ಯರು, ಚಿಕ್ಕಮಗಳೂರು ಚಂದ್ರಶೇಖರ ಶಿವಾಚಾರ್ಯರು ಗುರುವಂದನ ನುಡಿಗಳನ್ನಾಡಿದರು.

ಶಿವಮೊಗ್ಗದ ಮಹೇಶ್ವರಪ್ಪ, ಕೂಡ್ಲಿಗೆರೆ ಮಹೇಶ್ವರಪ್ಪ, ಮೈಸೂರು ಗಣೇಶ ಶಾಸಿ, ಬೆಳಗಾಲಪೇಟೆ, ಸಿದ್ಧಲಿಂಗಯ್ಯ ಶಾಸಿ, ಶ್ರೀಪೀಠದ ಸಂಪರ್ಕಾಧಿಕಾರಿ ಪ್ರಭುದೇವ ಕಲ್ಮಠ, ಹೊಸದುರ್ಗದ ಶಿವಲಿಂಗಪ್ಪ, ಕೆ.ಎಸ್.ಕಲ್ಮಠ ಇತರರಿದ್ದರು.

ಬೇರುಗಂಡಿ ಬೃಹನ್ಮಠದ ರೇಣುಕ ಮಹಂತ ಶಿವಾಚಾರ್ಯರು ವೀರಮಾಹೇಶ್ವರ ವಟುಗಳಿಗೆ ಶಿವದೀಕ್ಷಾ ಅಯ್ಯಚಾರ ದೀಕ್ಷೆ ನೀಡಿ ಆಶೀರ್ವದಿಸಿದರು. ಪ್ರಾತಃಕಾಲ ಶ್ರೀಪೀಠದ ಎಲ್ಲ ದೈವಗಳಿಗೆ ವಿಶೇಷ ಪೂಜೆ ಮತ್ತು ಹೂವಿನ ಅಲಂಕಾರ ಮಾಡಲಾಗಿತ್ತು.