ನ್ಯೂಸ್

ಸತೀಶ್ ಸೈಲ್ ಶಾಸಕತ್ವ ಅನರ್ಹಗೊಳಿಸಲಿ: ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಆಗ್ರಹ

ಬೆಂಗಳೂರು: ಬೇಲೇಕೆರೆ ಅದಿರು ನಾಪತ್ತೆ ಪ್ರಕರಣದಲ್ಲಿ ದೀರ್ಘ ಕಾಲ ಜೈಲು ಶಿಕ್ಷೆಗೆ ಗುರಿಯಾಗಿರುವ ಸತೀಶ್ ಸೈಲ್ ಶಾಸಕತ್ವ ಅನರ್ಹಗೊಳಿಸಬೇಕು ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಆಗ್ರಹಿಸಿದರು.

ಮಾಧ್ಯಮದವರೊಂದಿಗೆ ಶನಿವಾರ ಮಾತನಾಡಿದ ಅವರು, ಬೇಲೇಕೆರೆ ಅದಿರು ಅಕ್ರಮ ಸಾಗಾಟ ಪ್ರಕರಣದಲ್ಲಿ ನ್ಯಾಯಾಲಯ ಶಾಸಕ ಸತೀಶ್ ಸೈಲ್ ಗೆ 7 ವರ್ಷ ಜೈಲು ಶಿಕ್ಷೆ ವಿಧಿಸಿದೆ. ಈ ಹಿನ್ನೆಲೆಯಲ್ಲಿ ಅವರನ್ನು ಶಾಸಕ ಸ್ಥಾನದಿಂದ ವಜಾಗೊಳಿಸಬೇಕು ಎಂದು ವಿಧಾನಸಭೆ ಸಭಾಧ್ಯಕ್ಷರನ್ನು ಒತ್ತಾಯಿಸಿದರು.

ಕಾಂಗ್ರೆಸ್ ನಾಯಕರು ಕಳ್ಳ ಕಾಕರ ಪರ ನಿಂತಿದ್ದಾರೆ. ಅಂತೆಯೇ ಶಾಸಕ ಸತೀಶ್ ಸೈಲ್ ಅವರನ್ನು ಸಮರ್ಥಿಸಿಕೊಂಡಿದ್ದರು. ಕಳ್ಳರು, ವಂಚಕರನ್ನು ಕಾಂಗ್ರೆಸ್ ನವರು ಹೇಗೆ ಸಮರ್ಥಿಸಿಕೊಳ್ಳುತ್ತಾರೆ ಎಂಬುದಕ್ಕೆ ಇದು ಮತ್ತೊಂದು ನಿದರ್ಶನ. ಕಾಂಗ್ರೆಸ್ ಪಕ್ಷ ಭ್ರಷ್ಟರ ಪಕ್ಷ ಎಂಬುದಕ್ಕೆ ಈ ಪ್ರಕರಣ ಮತ್ತೊಂದು ಉದಾಹರಣೆ ಎಂದು ವಾಗ್ದಾಳಿ ಮಾಡಿದರು.

ವಕ್ಫ್ ಕಾನೂನು ತಿದ್ದುಪಡಿಗೆ ನಿರ್ಧಾರ

ವಕ್ಫ್ ಬೋರ್ಡ್‌ಗೆ ಹಕ್ಕುಗಳನ್ನು ನೀಡುವ ಕಾನೂನು ನಿಷ್ಪಕ್ಷಪಾತವಾಗಿಲ್ಲ. ಹಾಗಾಗಿ ಇದರ ತಿದ್ದುಪಡಿಗೆ ನರೇಂದ್ರ ಮೋದಿ ನೇತೃತ್ವದ ಸರ್ಕಾರ ನಿರ್ಧರಿಸಿದೆ ಎಂದು ತಿಳಿಸಿದರು.

ವಕ್ಫ್ ಮಂಡಳಿಯ ಅಕ್ರಮ ಭೂಸ್ವಾಧೀನಕ್ಕೆ ಅನೇಕ ಬಡ ಮುಸ್ಲಿಮರು ಕೂಡ ಬಲಿಯಾಗಿದ್ದಾರೆ. ವಿಜಯಪುರ ಜಿಲ್ಲೆಯ ರೈತರ ಜಮೀನಿನ ಪ್ರಕರಣ ಉದಾಹರಣೆಯಾಗಿದೆ. ಇಂತಹ ಹಲವಾರು ಸಂತ್ರಸ್ತರಿಗೆ ನ್ಯಾಯ ದೊರಕಿಸಿಕೊಡಲೆಂದು ನಮ್ಮ ಸರ್ಕಾರ ತಿದ್ದುಪಡಿ ಮಾಡಲು ನಿರ್ಧರಿಸಿದೆ ಎಂದು ಪ್ರಲ್ಹಾದ ಜೋಶಿ ಸ್ಪಷ್ಟಪಡಿಸಿದರು.