ಎನ್.ಆರ್.ಪುರ ತಾಲೂಕು ಭಾವಸಾರ ಕ್ಷತ್ರಿಯ ಸಮಾಜದ ಸಮುದಾಯ ಭವನ ನಿರ್ಮಾಣಕ್ಕೆ ಶಾಸಕ ಟಿ.ಡಿ.ರಾಜೇಗವಡ ಶಂಕುಸ್ಥಾಪನೆ ನೆರವೇರಿಸಿದರು. ಎಂ.ಶ್ರೀನಿವಾಸ್, ಸುರಯ್ಯಭಾನು, ಪ್ರಶಾಂತ್ ಎಲ್.ಶೆಟ್ಟಿ, ವೆಂಕಟೇಶ್, ರೀನಾ ಮೋಹನ್ ಇತರರಿದ್ದರು. 
ನ್ಯೂಸ್

ಸಣ್ಣ ಸಮುದಾಯದ ಏಳಿಗೆಗೆ ಬದ್ಧ

ಎನ್.ಆರ್.ಪುರ: ಸಣ್ಣ ಸಮುದಾಯಗಳನ್ನು ಗುರುತಿಸಿ ಅವುಗಳನ್ನು ಸಮಾಜದ ಮುಖ್ಯವಾಹಿನಿಗೆ ತಂದು ಅವರ ಏಳಿಗೆಗೆ ಶ್ರಮಿಸುವುದು ಎಲ್ಲರ ಕರ್ತವ್ಯ ಎಂದು ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ.ಶ್ರೀನಿವಾಸ್ ಹೇಳಿದರು.

ಪಟ್ಟಣದ ಸೇಂಟ್ ಜೋಸ್ೆ ಚರ್ಚ್ ಸಮೀಪದಲ್ಲಿ ಭಾವಸಾರ ಕ್ಷತ್ರಿಯ ಸಮಾಜದ ಸಮುದಾಯ ಭವನ ಕಾಮಗಾರಿಯ ಶಂಕುಸ್ಥಾಪನೆ, ಗುದ್ದಲಿಪೂಜೆ ನೆರವೇರಿಸಿ ಮಾತನಾಡಿ, ಭಾವಸಾರ ಕ್ಷತ್ರಿಯ ಸಮುದಾಯದವರು ಸ್ವತಃ 15 ಲಕ್ಷ ರೂ. ಒಟ್ಟುಗೂಡಿಸಿಕೊಂಡು ನಿವೇಶನ ಖರೀದಿಸಿದ್ದಾರೆ. ನಾನು ಗುದ್ದಲಿಪೂಜೆ ನೆರವೇರಿಸಿದ ಈ ಸಮುದಾಯ ಭವನ ಶೀಘ್ರ ನಿರ್ಮಾಣವಾಗಬೇಕು. ಈ ನಿಟ್ಟಿನಲ್ಲಿ ಎಲ್ಲ ರೀತಿಯ ಸಹಕಾರ ನೀಡಲಾಗುವುದು ಎಂದರು.

ಸಿಎಂ ಸಿದ್ದರಾಮಯ್ಯ ಅವರು ರಾಜ್ಯದಲ್ಲಿ ಎಲ್ಲ ಸಮುದಾಯಗಳನ್ನೂ ಗುರುತಿಸಿ ಅವುಗಳ ಪ್ರಗತಿಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದಾರೆ. ಚುನಾವಣೆ ಸಂದರ್ಭದಲ್ಲಿ ನೀವು ಸಹಕಾರ ನೀಡಿದ್ದೀರಿ. ಹೀಗಾಗಿ ನಿಮ್ಮ ಸಮಾಜಕ್ಕೆ ಸದಾ ಚಿರಋಣಿ ಎಂದು ಹೇಳಿದರು.

ಪಪಂ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಶಾಂತ್ ಎಲ್. ಶೆಟ್ಟಿ ಮಾತನಾಡಿ, ಭಾವಸಾರ ಕ್ಷತ್ರಿಯ ಸಮಾಜದ ಕುಟುಂಬದವರು ಈ ಊರಿನ ಮೂಲ ನಿವಾಸಿಗಳಾಗಿದ್ದಾರೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದಲ್ಲಿ ನಿಮ್ಮ ಸಮುದಾಯಕ್ಕೆ ಸಮುದಾಯ ಭವನ ನಿರ್ಮಾಣ ಮಾಡಿಕೊಡುವ ಭರವಸೆ ನೀಡಿದ್ದೆವು. ಅದರಂತೆ ಸಮಾಜ ಕಲ್ಯಾಣ ಇಲಾಖೆ ಹಿಂದುಳಿದ ವರ್ಗಗಳ ಕಲ್ಯಾಣ ನಿಧಿಯಿಂದ ಸಮುದಾಯ ಭವನ ನಿರ್ಮಾಣಕ್ಕಾಗಿ 25 ಲಕ್ಷ ರೂ. ಅನುದಾನ ಮಂಜೂರು ಮಾಡಿಕೊಡುವ ಮೂಲಕ ಕೊಟ್ಟ ಭರವಸೆ ಈಡೇರಿಸಿದ ಆತ್ಮತೃಪ್ತಿ ನಮಗಿದೆ ಎಂದರು.

ಪಪಂ ಅಧ್ಯಕ್ಷೆ ಸುರಯ್ಯಭಾನು ಮಾತನಾಡಿ, ಎಂ.ಶ್ರೀನಿವಾಸ್ ಅವರು 25 ಲಕ್ಷ ರೂ. ಅನುದಾನ ಕೊಡಿಸಿದ್ದಾರೆ. ಸಮುದಾಯ ಭವನ ನಿರ್ಮಾಣಕ್ಕೆ ಇನ್ನಷ್ಟು ಸಹಾಯ ಮಾಡುವ ಮನೋಭಾವ ಅವರಲ್ಲಿದೆ ಎಂದರು. ಭಾವಸಾರ ಕ್ಷತ್ರಿಯ ಸಮಾಜದ ಅಧ್ಯಕ್ಷ ವೆಂಕಟೇಶ್,ಮಹಿಳಾ ಸಮಾಜದ ಅಧ್ಯಕ್ಷೆ ರೀನಾ ಮೋಹನ್, ಸಮುದಾಯದ ಮುಖಂಡರು, ಭಾವಸಾರ ಕ್ಷತ್ರಿಯ ಯುವ ಸಮಾಜದ ಪದಾಧಿಕಾರಿಗಳಿದ್ದರು.