ನ್ಯೂಸ್

ಸಚಿವರ ಖಾತೆಗಳ ಬದಲಾವಣೆ ಅಸಮಾಧಾನ, ಸಂಜೆ ವೇಳೆಗೆ ಶಮನ

ಬೆಂಗಳೂರು: ಹೊಸಬರಿಗೆ ಖಾತೆಗಳ ಹಂಚಿಕೆಗಳ ಹಂಚಿಕೆ, ಹಲವು ಸಚಿವರ ಖಾತೆಗಳ ಬದಲಾವಣೆಯ ನಂತರದ ಎಲ್ಲ ಬೆಳವಣಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಗೊತ್ತಿದೆ. ಈಗಾಗಲೇ ಕೆಲವರೊಂದಿಗೆ ಮಾತನಾಡಿದ್ದು, ಸಂಜೆ ವೇಳೆಗೆ ಎಲ್ಲವೂ ತಿಳಿಯಾಗಲಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ವಿಶ್ವಾಸ ವ್ಯಕ್ತಪಡಿಸಿದರು.
ವಿಧಾನ ಸೌಧ ಬಳಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾರ್ಯಾರ ಮನಸ್ಸಿನಲ್ಲಿ ಏನಿದೆ, ಯಾರಿಗೆ ಅಸಮಾಧಾನವಾಗಿದೆ ಎನ್ನುವುದೂ ಸಿಎಂ ಗೆ ಗೊತ್ತು. ಕೆಲವರೊಂದಿಗೆ ಈಗಾಗಲೇ ಮಾತನಾಡಿದ್ದು, ತುಮಕೂರಿನಿಂದ ಮರಳಿದ ಬಳಿಕ ಉಳಿದವರ ಜತೆಗೆ ಮಾತನಾಡಿ ಎಲ್ಲವನ್ನೂ ಸರಿಪಡಿಸಲಿದ್ದಾರೆ ಎಂದರು.
ಹೆಚ್ಚುವರಿ ಖಾತೆ ನಾನೇನೂ ಕೇಳಿದ್ದಿಲ್ಲ, ಹೆಚ್ಚುವರಿ ಖಾತೆ ಎನ್ನವುದಕ್ಕಿಂತ ಹೆಚ್ಚುವರಿ ಜವಾಬ್ದಾರಿ ಸಿಎಂ ನೀಡಿದ್ದು, ಸಮರ್ಥವಾಗಿ ನಿಭಾಯಿಸುವೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆಯನ್ನು ಹೊಂದಿರುವ ಬೊಮ್ಮಾಯಿ ಹೇಳಿದರು.
ಕ್ಯಾಪ್ಟನ್ ನಿರ್ಧಾರ ಒಪ್ಪಿ ಗೌರವಿಸ್ಬೇಕು
ಖಾತೆ ಬದಲಾವಣೆಯಿಂದ ಯಾವುದೇ ಅಸಮಾಧಾನವಿಲ್ಲ. ಸಿಎಂ ನಮ್ಮ ಕ್ಯಾಪ್ಟನ್ ಅವರ ನಿರ್ಧಾರವನ್ನು ಒಪ್ಪಿ ಗೌರವಿಸಬೇಕು ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ ಎಂದು ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದರು.
ನನ್ನನ್ನು ವಿಶ್ವಾಸಕ್ಕೆ ತೆಗೆದುಕೊಂಡು ಖಾತೆ ಬದಲಾಯಿಸಿದ್ದಾರೆ. ಉಳಿದವರ ನೋವು, ಬೇಸರ‌ದ ಬಗ್ಗೆ ಏನನ್ನೂ ಹೇಳಲು ಬಯಸುವುದಿಲ್ಲ. ಅಸಮಾಧಾನ,‌ ಅತೃಪ್ತಿ ಇರೋದು ನಿಜ, ಪ್ರಮುಖ ನಿರ್ಧಾರ ಕೈಗೊಂಡ ವೇಳೆ ಇವೆಲ್ಲ ಸಹಜವೆಂದು ಆನಂದ್ ಸಿಂಗ್ ಹೇಳಿದರು.