ನ್ಯೂಸ್

ಸಚಿವ ಸಂಪುಟ ಪುರ್ನರಚನೆ ಹೈಕಮಾಂಡ್‌ಗೆ ಬಿಟ್ಟದ್ದು

ಎಲ್ಲ ಶಾಸಕರಿಗೂ ಸಚಿವರಾಗಬೇಕೆಂಬ ಆಸೆ ಇರುತ್ತದೆ. ಯಾರು ಸಚಿವರಾಗಬೇಕು ಎಂಬುದನ್ನು ಅಂತಿಮವಾಗಿ ಹೈಕಮಾಂಡ್ ಹಾಗೂ ಮುಖ್ಯಮಂತ್ರಿಗಳು ನಿರ್ಧಾರ ಮಾಡುತ್ತಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಹೇಳಿದರು.

ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ಸಚಿವ ಸಂಪುಟ ಮರುರಚನೆ, ಮುಖ್ಯಮಂತ್ರಿ ಮತ್ತು ಹೈಕಮಾಂಡ್‌ಗೆ ಬಿಟ್ಟ ವಿಚಾರ. ಅದರ ಬಗ್ಗೆ ನಾನು ಮತ್ತು ಮುನಿಯಪ್ಪ ನಿರ್ಧಾರ ಮಾಡೋಕೆ ಆಗುತ್ತಾ ಎಂದು ಪ್ರಶ್ನಿಸಿದರು.

ಮುಂದಿನ ನಾಯಕತ್ವದ ಬಗ್ಗೆ ಡಾ. ಯತೀಂದ್ರ ಸಿದ್ದರಾಮಯ್ಯ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿ, ಅವರ ಹೇಳಿಕೆಯಲ್ಲಿನ ಯಾವ ಹುನ್ನಾರವೂ ನನಗೆ ಗೊತ್ತಿಲ್ಲ. ಅದು ಮುಗಿದುಹೋದ ಕತೆಯಾಗಿದೆ. ನಮ್ಮ ಪಕ್ಷದಲ್ಲಿ ಯಾವುದೇ ಅಸಮಾಧಾನವಿಲ್ಲ. ಯಾವ ಆಕ್ಷೇಪಗಳು ಇಲ್ಲ ಎಂದರು.

ಆಹಾರ ಇಲಾಖೆ ಸಚಿವ ಮುನಿಯಪ್ಪ ಅವರು ಬಡ ಕುಟುಂಬ ಗುರುತಿಸಿ ಅಂತ್ಯೋದಯ ಪಡಿತರ ಚೀಟಿ ನೀಡುವ ಕೆಲಸ ಮಾಡುತ್ತಿದ್ದಾರೆ. 10 ಕೆ.ಜಿ. ಅಕ್ಕಿ ಕೊಡುವ ಕೆಲಸವನ್ನು ಸಮರ್ಪಕವಾಗಿ ಮಾಡುತ್ತಿದ್ದಾರೆ. ಕೆಲವೆಡೆ ಅಕ್ಕಿ ಮಾರಾಟ ಮಾಡುತ್ತಿರುವುದು ಗಮನಕ್ಕೆ ಬಂದ ಹಿನ್ನೆಲೆ ಸರ್ಕಾರ ಅಕ್ಕಿ ಜತೆಗೆ ಪಡಿತರ ಕಿಟ್ ನೀಡಲು ತಯಾರಿ ನಡೆಸಿದೆ ಎಂದರು.

ಹಿಂದೆ ಅಕ್ಕಿ ಜತೆಗೆ ಬೇಳೆ, ಎಣ್ಣೆ, ಸಕ್ಕರೆ, ಉಪ್ಪು ಸೇರಿದಂತೆ ಅನೇಕ ಸಾಮಗ್ರಿ ನೀಡಲಾಗುತ್ತಿತ್ತು. ಮತ್ತೆ ಅದನ್ನು ನೀಡಲು ಕ್ಯಾಬಿನೆಟ್ ನಲ್ಲಿ ತೀರ್ಮಾನಿಸಲಾಗಿದೆ ಎಂದು ಹೇಳಿದರು.