ನ್ಯೂಸ್

ಸಚಿವ ಆನಂದ ಸಿಂಗ್ ಬಳ್ಳಾರಿಗೆ ಬಂದರೆ ಹುಷಾರ್ ಎಂದು ಎಚ್ಚರಿಕೆ

ಬಳ್ಳಾರಿ:
ರಾಜ್ಯದಲ್ಲಿ ದೊಡ್ಡದಾದ ಬೆಳಗಾವಿ ಜಿಲ್ಲೆ ವಿಭಜನೆ ಮಾಡದೆ ಸರ್ಕಾರ
ಬಳ್ಳಾರಿ ಜಿಲ್ಲೆಯನ್ನು ವಿಭಜಿಸಿರುವುದು ಖಂಡನೀಯ ಎಂದು ಅಖಂಡ ಬಳ್ಳಾರಿ ಜಿಲ್ಲಾ ಹೋರಾಟ ಸಮಿತಿ ಮುಖಂಡ ಕುಡತಿನಿ ಶ್ರೀನಿವಾಸ ಹೇಳಿದರು.
ಜಿಲ್ಲೆಗಳನ್ನು ವಿಭಜಿಸುವುದಾದರೆ ತುಮಕೂರು, ಶಿವಮೊಗ್ಗ ಜಿಲ್ಲೆಗಳನ್ನು ಕೂಡ ವಿಭಜಿಸಲಿ. ರಿಯಲ್ ಎಸ್ಟೇಟ್ ಕಾರಣಕ್ಕೆ ಜಿಲ್ಲೆ ವಿಭಜನೆ ಮಾಡಲಾಗುತ್ತಿದೆ. ಬಳ್ಳಾರಿ
ಜಿಲ್ಲೆ ವಿಭಜನೆಯಿಂದ ಆನಂದ ಸಿಂಗ್ ಕುಟುಂಬದವರಿಗೆ ಮಾತ್ರ ಸಂತೋಷವಾಗಿದೆ. ಆನಂದ ಸಿಂಗ್ ಬಳ್ಳಾರಿಗೆ ಬಂದರೆ ಘೆರಾವ್ ಹಾಕಲಾಗುವುದು ಎಂದು ಗುರುವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಪ್ರತ್ಯೇಕ ಜಿಲ್ಲೆಯಾಗಿರುವ ಕೊಪ್ಪಳ, ಯಾದಗಿರಿ ಅಭಿವೃದ್ಧಿಯಾಗಿಲ್ಲ. ಆದರೆ, ಸಚಿವ ಶ್ರೀರಾಮುಲು ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವರಾಗುವುದಕ್ಕಾಗಿ ಜಿಲ್ಲೆ ವಿಭಜನೆ ಪರವಾಗಿದ್ದಾರೆ. ಬಳ್ಳಾರಿ, ಸಿರಗುಪ್ಪ, ಸಂಡೂರು, ಕಂಪ್ಲಿ ಶಾಸಕರು ಅಖಂಡ ಜಿಲ್ಲೆಗಾಗಿ ಹೋರಾಟಕ್ಕೆ ಮುಂದಾಗಬೇಕು. ಶಾಸಕರನ್ನು ಭೇಟಿ ಮಾಡಿ ಹೋರಾಟಕ್ಕೆ ಮುಂದಾಗುವಂತೆ ಮನವಿ ಮಾಡಲಾಗುವುದು. ಶಾಸಕ ಸೋಮಶೇಖರ ರೆಡ್ಡಿ ಅಖಂಡ ಜಿಲ್ಲೆಯ ಹೋರಾಟದ ನೇತೃತ್ವ ವಹಿಸಿಕೊಳ್ಳಬೇಕು.
ಸೋಮವಾರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಗುವುದು. ಗುರುವಾರ ಬಳ್ಳಾರಿ ಬಂದ್ ಗೆ ಚಿಂತನೆ ನಡೆದಿದೆ. ಹೋರಾಟವನ್ನು ಬೆಂಬಲಿಸದ ಶಾಸಕರ ಮನೆ ಮುಂದೆ ಧರಣಿ ನಡೆಸಲಾಗುವುದು.
ಜಿಲ್ಲೆ ವಿಭಜನೆಯಾದರೆ ಬಳ್ಳಾರಿ ಜನರು ನೀರಿಗಾಗಿ ಹೊಸಪೇಟೆಯ ಅಧಿಕಾರಿಗಳ ಮುಂದೆ ಕೈಯೊಡ್ಡಿ ನಿಲ್ಲಬೇಕಾಗುತ್ತದೆ. ಜನಪರ ಚಿಂತನೆಗಳಿಗಿಂತ ರಾಜಕೀಯವೇ ಜಿಲ್ಲೆ ವಿಭಜನೆಗೆ ಪ್ರಮುಖ ಕಾರಣವಾಗಿದೆ. ಮುಖ್ಯಮಂತ್ರಿ ವಿಭಜನೆ ಕೈಬಿಟ್ಟಿರುವುದಾಗಿ ಹೇಳಿದ್ದರಿಂದ ನಾವು ಹೋರಾಟ ಕೈಬಿಟ್ಟಿದ್ದೆವು ಎಂದು ಕುಡತಿನಿ ಶ್ರೀನಿವಾಸ ಹೇಳಿದರು.
ತುಂಗಭದ್ರಾ ರೈತಸಂಘದ ಅಧ್ಯಕ್ಷ ಪುರುಷೋತ್ತಮ ಗೌಡ ದರೂರು ಮಾತನಾಡಿ,
ಸರ್ಕಾರ ದಿಢೀರನೆ ವಿಜಯನಗರ ಜಿಲ್ಲೆ ಘೋಷಿಸಿದೆ. ಮುಖ್ಯಮಂತ್ರಿ ಯಡಿಯೂರಪ್ಪ ಅಧಿಕಾರ ಉಳಿಸಿಕೊಳ್ಳಲು ಜಿಲ್ಲೆ ವಿಭಜನೆಗೆ ಮುಂದಾಗಿದ್ದಾರೆ ಎಂದು ಆರೋಪಿಸಿದರು.
ವಿವಿಧ ಸಂಘಟನೆಗಳ ಮುಖಂಡರಾದ ಚಾನಾಳ್ ಶೇಖರ್, ಬಸವರಾಜ ಬಿಸಿಲಹಳ್ಳಿ,
ಟಪಾಲ್ ಗಣೇಶ, ಅಂಜಿನಿ ಕೊಳಗಲ್ಲು, ಪಂಪಾಪತಿ, ಮೋಹನಬಾಬು, ಸಿಂಗಾಪುರ ನಾಗರಾಜ ಹಾಗೂ ಇತರರು ಇದ್ದರು.