ಬಾಳೆಹೊನ್ನೂರು: ಜಗದಲ್ಲಿ ಒಳ್ಳೆಯದು ಕೆಟ್ಟದ್ದು ಎರಡೂ ಇವೆ. ನೋಡುವ ದೃಷ್ಟಿಯನ್ನು ಅವಲಂಬಿಸಿರುತ್ತದೆ. ಸಕಲ ಧರ್ಮಕ್ಕೂ ದಯೆ ಮತ್ತು ಮಾನವೀಯತೆ ಮುಕುಟಪ್ರಾಯವಾಗಿದೆ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಹೇಳಿದರು.
ರಂಭಾಪುರಿ ಪೀಠದಲ್ಲಿ ಬುಧವಾರ ನಡೆದ ಪೌರ್ಣಿಮೆ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಸಮಾಜದ ಕಷ್ಟ ಸುಖಗಳನ್ನು ಚಿಂತಿಸಿ ಅವುಗಳನ್ನು ಪರಿಹಾರ ಮಾಡುವ ಕಾರ್ಯದಲ್ಲಿ ಪ್ರವೃತ್ತರಾಗಿರುವುದೇ ನಿಜವಾದ ಧರ್ಮ. ಜೀವನಾಧಾರಕ್ಕೆ ನೀರು, ಅನ್ನ, ಗಾಳಿ ಮತ್ತು ಒಳ್ಳೆಯ ಮಾತು ಮುಖ್ಯ. ಸತ್ಯ, ಸಂಸ್ಕೃತಿ ಗೌರವಿಸದೆ ಹೋದರೆ ಜೀವನ ನಾಶಗೊಳ್ಳುತ್ತದೆ ಎಂದರು.
ಜೀವ ಹೋಗುವ ಈ ದೇಹ, ನಾಶವಾಗುವ ಈ ಸಂಪತ್ತು ಮತ್ತು ಮಾಸಿ ಹೋಗುವ ಸೌಂದರ್ಯ ನೆಚ್ಚದೆ ಸತ್ಯ, ಶುದ್ಧ ಧರ್ಮ ಮಾರ್ಗದಲ್ಲಿ ನಡೆಯುವುದರಿಂದ ಜೀವನದಲ್ಲಿ ಸಕಲ ಸಂಪತ್ತು, ಶಾಂತಿ ದೊರಕುವುದೆಂದು ಶ್ರೀ ಜಗದ್ಗುರು ರೇಣುಕಾಚಾರ್ಯರು ಜೀವನ ಸಿದ್ಧಾಂತದಲ್ಲಿ ಬೋಧಿಸಿದ್ದಾರೆ. ನಾವು ಏನು ಪಡೆದಿದ್ದೇವೆ ಎನ್ನುವುದಕ್ಕಿಂತ ಹೇಗೆ ದುಡಿದಿದ್ದೇವೆ ಎಂಬುದು ಮುಖ್ಯ. ಏನು ಗಳಿಸಿದ್ದೇವೆ ಎನ್ನುವುದಕ್ಕಿಂತ ಹೇಗೆ ಬೆಳೆದಿದ್ದೇವೆ ಎಂಬುದು ಮುಖ್ಯ. ಅರಿತು ಬಾಳುವುದರಿಂದ ಬಾಳು ವಿಕಾಸಗೊಳ್ಳುವುದು ಎಂದರು.
13 ವೀರಮಾಹೇಶ್ವರ ವಟುಗಳಿಗೆ ಶಿವದೀಕ್ಷಾ ಮತ್ತು ಅಯ್ಯಚಾರ ನಡೆಯಿತು. ಸಮಾರಂಭದಲ್ಲಿ ನೆಗಳೂರು, ಆಲಮೇಲ, ಸೋನಪೇಟೆ, ವೆಂಕಟಬೆನ್ನೂರು ಶ್ರೀಗಳು, ಬಳ್ಳಾರಿ ಮಹಲಿಂಗಯ್ಯ, ಪ್ರಭುಸ್ವಾಮಿ ಮತ್ತಿತರರಿದ್ದರು.