ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ಕುವೆಂಪುನಗರದ ವತಿಯಿಂದ ಚಾಮುಂಡಿಬೆಟ್ಟ ವಲಯದ ಹಡಜನ ಕಾರ್ಯಕ್ಷೇತ್ರದ ಸಂಸ್ಕೃತಿ ಜ್ಞಾನವಿಕಾಸ ಕೇಂದ್ರದ ಪ್ರಥಮ ವಾರ್ಷಿಕೋತ್ಸವ ಕಾರ್ಯಕ್ರಮ ಗುರುವಾರ ನೆರವೇರಿತು.
ಕಾರ್ಯಕ್ರಮವನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷ ನರಸಿಂಹಮೂರ್ತಿ ಉದ್ಘಾಟಿಸಿದರು. ಬಳಿಕ ಮಾತನಾಡಿ, ಮಹಿಳಾ ಜ್ಞಾನವಿಕಾಸ ಕಾರ್ಯಕ್ರಮ ಒಂದು ವಿಶೇಷ ಕಾರ್ಯಕ್ರಮವಾಗಿದೆ. ಮಹಿಳಾ ಜ್ಞಾನ ವಿಕಾಸ ಕಾರ್ಯಕ್ರಮದಲ್ಲಿ ದುರ್ಬಲ ವರ್ಗದ ಮಹಿಳೆಯರನ್ನು ಮಹಿಳಾ ಸಬಲೀಕರಣದ ಮೂಲಕ ಉತ್ತೇಜನ ನೀಡಲಾಗುತ್ತಿದೆ ಎಂದರು.
ಸಂಪನ್ಮೂಲ ವ್ಯಕ್ತಿ ಸಿದ್ದಪ್ಪ ಮಹಿಳೆಯರ ಹಕ್ಕು ಮತ್ತು ಕಾನೂನು ವಿಷಯದ ಬಗ್ಗೆ ಮಾಹಿತಿ ನೀಡಿದರು.
ಕೇಂದ್ರದ ಸದಸ್ಯರಿಗೆ ಬಾಲ್ ಪಾಸಿಂಗ್, ಹಣೆಗೆ ಸ್ಟಿಕ್ಕರ್ ಅಂಟಿಸುವ ಸ್ಪರ್ಧೆ , ರಂಗೋಲಿ ಸ್ಪರ್ಧೆ, ಹೂಗುಚ್ಛ ಸ್ಪರ್ಧೆ ಸೇರಿ ನಾನಾ ಸ್ಪರ್ಧೆ ಆಯೋಜಿಸಲಾಗಿತ್ತು. ಜತೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರವೇರಿದವು.
ಹಾಲಿನ ಡೇರಿ ಅಧ್ಯಕ್ಷೆ ಚನ್ನಮ್ಮ, ಮುಖಂಡರಾದ ಮಹದೇವಪ್ಪ, ಬಸವರಾಜ್, ವಲಯದ ಮೇಲ್ವಿಚಾರಕ ದಿನೇಶ್, ಜ್ಞಾನವಿಕಾಸ ಸಮನ್ವಯಾಧಿಕಾರಿ ಗೀತಾ, ನಿರ್ಮಲಾ ಇತರರಿದ್ದರು.