ಶಿವಮೊಗ್ಗ: ಸಂಸ್ಕೃತ ಭಾಷೆ ಕೇವಲ ಬ್ರಾಹ್ಮಣರ ಸ್ವತ್ತಲ್ಲ. ಅದು ಇಡೀ ದೇಶದ ಸಂಪತ್ತು. ಸಂಸ್ಕೃತ ಸನಾತನ ಧರ್ಮದ ಧ್ಯೋತಕವಾಗಿದೆ ಎಂದು ಶಾಸಕ ಕೆ.ಎಸ್.ಈಶ್ವರಪ್ಪ ಬಣ್ಣಿಸಿದರು.
ನಗರದ ಕಸ್ತೂರ ಬಾ ಬಾಲಿಕಾ ಪದವಿಪೂರ್ವ ಕಾಲೇಜಿನಲ್ಲಿ ಭಾನುವಾರ ಕರ್ನಾಟಕ ರಾಜ್ಯ ಪ್ರೌಢಶಾಲಾ ಸಂಸ್ಕೃತಾಧ್ಯಾಪಕ ಸಂಘದ ಜಿಲ್ಲಾ ಘಟಕದಿಂದ ತರುಣೋದಯ ಸಂಸ್ಕೃತ ಸೇವಾಸಂಸ್ಥೆಯ ಸಹಯೋಗದಲ್ಲಿ ಆಯೋಜಿಸಿದ್ದ ಸಂಸ್ಕೃತ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಮಾತನಾಡಿ, ಸಂಸ್ಕೃತ ಒಬ್ಬರಿಗೆ ಸಂಬಂಧಿಸಿದ್ದಲ್ಲ. ಸಂಸ್ಕೃತ ಭಾರತದ ಶಕ್ತಿಯಾಗಬೇಕಿದೆ ಎಂದರು.
ಸಂಸ್ಕೃತ ವ್ಯಕ್ತಿಗಳಿಗೆ ಸಂಸ್ಕೃತಿಯನ್ನು ತಿಳಿಸಿಕೊಡುವ ಮಾಧ್ಯಮವಾಗಿದೆ. ಸಂಸ್ಕೃತ ಕಲಿತವರು ಸಮಾಜದಲ್ಲಿ ಮಾರ್ಗದರ್ಶಕರೆಂಬ ಅಭಿಪ್ರಾಯವಿದೆ. ಸಂಸ್ಕೃತದಿಂದಲೇ ಮಕ್ಕಳಿಗೆ ಸಂಸ್ಕಾರ ಸಿಗುತ್ತಿದೆ. ಆದರೂ ಸಮಾಜದಲ್ಲಿ ಸಂಸ್ಕಾರ ಪಡೆದ ವ್ಯಕ್ತಿಗಳು ಮಾಡುತ್ತಿರುವ ಕೆಲಸಗಳ ಬಗ್ಗೆ ಪ್ರಚಾರ ಸಿಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಮುಂದಿನ ದಿನಗಳಲ್ಲಿ ಯೋಗ ಮಾದರಿ ಸಂಸ್ಕೃತಕ್ಕೂ ವಿಶ್ವದಲ್ಲಿ ಉನ್ನತ ಸ್ಥಾನ ಸಿಕ್ಕೆ ಸಿಗುತ್ತದೆ. ಇದರಲ್ಲಿ ಯಾವುದೇ ಅನುಮಾನವಿಲ್ಲ. ಎಂಟು ವರ್ಷಗಳ ಹಿಂದೆ ಯೋಗ ಬಗ್ಗೆ ಅಷ್ಟಾಗಿ ಜಾಗೃತಿ ಇರಲಿಲ್ಲ. ಆದರೆ ನರೇಂದ್ರ ಮೋದಿ ಅವರು ಪ್ರಧಾನಮಂತ್ರಿ ಆದ ಬಳಿಕ ಯೋಗಕ್ಕೆ ರಾಷ್ಟ್ರಮನ್ನಣೆ ಸಿಕ್ಕಿತು. ಪ್ರಸ್ತುತ 192 ರಾಷ್ಟ್ರಗಳಲ್ಲಿ ಯೋಗವನ್ನು ಜನರು ಅಭ್ಯಾಸ ಮಾಡುವಂತಾಗಿದೆ ಎಂದರು.
ಎನ್‌ಇಎಸ್ ನಿರ್ದೇಶಕ ಟಿ.ಅಶ್ವತ್ಥನಾರಾಯಣ ಶೆಟ್ಟಿ, ಸಂಘದ ಅಧ್ಯಕ್ಷ ವಿದ್ವಾನ್ ನಾರಾಯಣ ಭಟ್ಟ, ಶಿವಮೊಗ್ಗ ವಿಪ್ರ ಯುವ ಪರಿಷತ್ ಕಾರ್ಯದರ್ಶಿ ಸಂತೋಷ್ ಭಾರದ್ವಾಜ್, ಸಂಸ್ಕೃತ ಶಾಲೆ ಅಧ್ಯಾಪಕ ಎಚ್.ಎಸ್.ಬಾಲಕೃಷ್ಣ, ಆ.ನ.ವಿಜಯೇಂದ್ರ ರಾವ್ ಮಾತನಾಡಿದರು. ಸಂಘದ ಕಾರ್ಯದರ್ಶಿ ಸುಮಂಗಲಾ ಹೆಗಡೆ, ಸಂಸ್ಕೃತ ಭಾರತಿ ಜಿಲ್ಲಾ ಸಂಯೋಜಕ ಟಿ.ವಿ.ನರಸಿಂಹಮೂರ್ತಿ, ಶಿವಮೊಗ್ಗ ಸಂಸ್ಕೃತ ಭಾರತಿ ಪ್ರಾಂತಗಣ ಸದಸ್ಯ ಶ್ರೀನಿಧಿ ಮತ್ತೂರು, ವಾಸವಿ ಅಕಾಡೆಮಿ ಟ್ರಸ್ಟ್ ಕಾರ್ಯದರ್ಶಿ ಎಸ್.ಕೆ.ಶೇಷಾಚಲ ಇದ್ದರು.