ಶೃಂಗೇರಿ: ಸಂಸ್ಕೃತ ಭಾಷೆಯ ಸಂಸ್ಕಾರವು ಎಲ್ಲ ಭಾರತೀಯರಲ್ಲೂ ಸುಪ್ತ ರೂಪದಲ್ಲಿದೆ. ಅದಕ್ಕೆ ಮೂಲ ಕಾರಣ ವ್ಯಕ್ತಿಯಲ್ಲಿ ಅಂತರ್ಗತವಾದ ಸಂಸ್ಕಾರ ಎಂದು ಸಂಸ್ಕೃತ ವಿದ್ವಾಂಸ ಗಿರಿಧರ ಶಾಸ್ತ್ರೀ ಹೇಳಿದರು. ಶೃಂಗೇರಿಯ ಆರ್ಷ ವಿದ್ಯಾಕೇಂದ್ರದಲ್ಲಿ ಭಾನುವಾರ ನಡೆದ ಸಂಸ್ಕೃತ ಸಂಭಾಷಣಾ ಶಿಬಿರದ ಸಮಾರೋಪದಲ್ಲಿ ಮಾತನಾಡಿದರು.
ಸಂಸ್ಕೃತವನ್ನು ಕಲಿಯದಿರುವ ಒಬ್ಬ ಭಾರತೀಯನು ಸಂಸ್ಕೃತ ಭಾಷೆಯ ಸರಳ ವಾಕ್ಯವೊಂದನ್ನು ಕೇಳಿದ ಕೂಡಲೇ ಅದರ ಆಶಯವನ್ನು ಅರಿಯುತ್ತಾನೆ. ಅದಕ್ಕೆ ಪೂರಕವಾಗಿ ಸಂಭಾಷಣಾ ತರಗತಿಗಳನ್ನು ಏರ್ಪಡಿಸಬೇಕು. ಪ್ರಾಚೀನ ಭಾಷೆಯಾದ ಸಂಸ್ಕೃತ ಜನಸಾಮಾನ್ಯರನ್ನು ತಲುಪಬೇಕು ಎಂದರು.
ಸಂಸ್ಕೃತ ಭಾರತಿ ಹಲವು ವರ್ಷಗಳಿಂದ ಸಂಸ್ಕೃತ ಸಂಭಾಷಣಾ ಶಿಬಿರಗಳನ್ನು ನಡೆಸಿ ಜ್ಞಾನವನ್ನು ಸಮಾಜಕ್ಕೆ ನೀಡುತ್ತಿರುವುದು ಸ್ತುತ್ಯರ್ಹ. ಶೃಂಗೇರಿಯಲ್ಲಿ ಅನೇಕ ಸಂಸ್ಕೃತ ವಿದ್ವಾಂಸರು ಸಂಸ್ಕೃತದ ಪ್ರಚಾರ ಕಾರ್ಯದಲ್ಲಿ ಉತ್ಸುಕರಾಗಿದ್ದಾರೆ. ಎಲ್ಲರೂ ಸಂಸ್ಕೃತ ಭಾಷೆಯ ಸ್ವಾರಸ್ಯವನ್ನು ಅರಿತು ಅದರಲ್ಲಿ ಅಡಗಿದ ಜ್ಞಾನವನ್ನು ತಮ್ಮದಾಗಿಸಿಕೊಳ್ಳಬೇಕು ಎಂದರು.
ಶೃಂಗೇರಿ ಕೇಂದ್ರೀಯ ಸಂಸ್ಕೃತ ವಿಶ್ವವಿದ್ಯಾಲಯದ ಭಾರತೀತೀರ್ಥ ಶಾಸ ಸಮುತ್ಕರ್ಷ ಕೇಂದ್ರದ ಪ್ರಾಧ್ಯಾಪಕ ಪ್ರೊ. ವೆಂಕಟೇಶ ತಾತಾಚಾರ್ಯ ಮಾತನಾಡಿ, ಮಕ್ಕಳಿಗೆ ಪಾಠ ಮಾಡುವುದು ಮನಸ್ಸಿಗೆ ಬಹಳ ಸಂತೋಷ ಕೊಡುತ್ತದೆ. ಮಕ್ಕಳ ಮನಸ್ಸು ಬಹಳ ಮೃದು. ಹಾಗಾಗಿ ಅವರು ವಿದ್ಯೆಯನ್ನು ಬೇಗ ಕಲಿಯುತ್ತಾರೆ. ವಿದ್ಯೆಯೊಂದಿಗೆ ಅವರಿಗೆ ಉತ್ತಮ ಸಂಸ್ಕಾರವನ್ನೂ ನೀಡಬೇಕು. ಗುರುಗಳ ಮೇಲೆ ವಿಶ್ವಾಸವಿಟ್ಟು ಪಾಲಕರು ಮಕ್ಕಳನ್ನು ಕಳಿಸಿರುತ್ತಾರೆ. ಮಕ್ಕಳು ಮುಂದೆ ಜೀವನದಲ್ಲಿ ತಪ್ಪು ಮಾಡಿದರೆ ಆ ದೋಷ ಗುರುಗಳಿಗೆ ಬರುತ್ತದೆ ಎಂದು ಶಾಸಗಳಲ್ಲಿ ಹೇಳಿದೆ ಎಂದು ಹೇಳಿದರು.
ನೃತ್ಯ ವಿದುಷಿ ಸುನೀತಾ ನವೀನ್ ಗೌಡ ಮಾತನಾಡಿ, ಸಂಸ್ಕೃತ ಸಂಸ್ಕಾರ ನೀಡುವ ಭಾಷೆ. ಭಾರತೀಯ ಕಲೆಗಳಿಗೆ ಸಂಬಂಧಪಟ್ಟ ಎಲ್ಲ ಗ್ರಂಥಗಳೂ ಸಂಸ್ಕೃತದಲ್ಲೇ ಇವೆ. ಉದಾಹರಣೆಗೆ ನಾಟ್ಯಾಭ್ಯಾಸದ ಆಕರ ಗ್ರಂಥವಾದ ಭರತನ ನಾಟ್ಯ ಶಾಸವು ಸಂಸ್ಕೃತದಲ್ಲಿದೆ. ಧಾರ್ಮಿಕ ಗ್ರಂಥಗಳು ಸಂಸ್ಕೃತ ಭಾಷೆಯಲ್ಲಿವೆ. ಅವುಗಳ ನಿಜವಾದ ಆಶಯವು ಭಾಷಾಂತರ ಗ್ರಂಥಗಳಿಂದ ತಿಳಿಯುವುದಿಲ್ಲ. ಹಾಗಾಗಿ ಮೂಲಗ್ರಂಥಗಳ ತಿರುಳನ್ನು ಅರಿಯಲು ಸಂಸ್ಕೃತ ಜ್ಞಾನವು ಅತ್ಯವಶ್ಯ. ಸಂಸ್ಕೃತ ಪದಗಳು ಅರ್ಥಗಾಂಭೀರ್ಯ ಹೊಂದಿವೆ ಎಂದರು.
ಶಿಬಿರಾರ್ಥಿಗಳು ಸಂಸ್ಕೃತದಲ್ಲಿ ವಿಶಿಷ್ಟ ಕಾರ್ಯಕ್ರಮಗಳನ್ನು ಪ್ರದರ್ಶಿಸಿದರು. ಶಿಬಿರದ ಶಿಕ್ಷಕಿಯರಾದ ಶ್ರೀವಿದ್ಯಾ ಹಾಗೂ ಶಾರದಾ ಅವರನ್ನು ಗೌರವಿಸಲಾಯಿತು. ಜ್ಯೋತಿ ಕಾಕತ್ಕರ್, ಮಹೇಶ ಕಾಕತ್ಕರ್, ಗಿರಿಧರ ಆಚಾರ್ಯ, ರೋಹಿಣಿ ಉಪಸ್ಥಿತರಿದ್ದರು.