ಸಾಂಸ್ಕೃತಿಕ ಶ್ರೀಮಂತಿಕೆ ಹೊಂದಿರುವ ಸಂಸ್ಕೃತ ಭಾಷೆಯನ್ನು ಉಳಿಸಿ, ಬೆಳೆಸಬೇಕು ಎಂದು ಊಟಿ ರಸ್ತೆಯ ಜೆಎಸ್‌ಎಸ್ ಕಾಲೇಜಿನ ಮುಖ್ಯ ಕಾರ್ಯನಿರ್ವಾಹಕ ಪ್ರೊ.ಬಿ.ವಿ.ಸಾಂಬಶಿವಯ್ಯ ಹೇಳಿದರು.
ಡಾ.ಶ್ರೀ ಶಿವರಾತ್ರಿ ರಾಜೇಂದ್ರ ಸ್ವಾಮೀಜಿ ಸಂಸ್ಕೃತ ಸಂಶೋಧನಾ ಕೇಂದ್ರದಲ್ಲಿ ಶುಕ್ರವಾರ ಆಯೋಜಿಸಿದ್ದ ‘ಒಂದು ತಿಂಗಳ ಸಂಸ್ಕೃತ ಭಾಷಾ ಕೌಶಲ ವರ್ಧನಾ ವಸತಿ ತರಬೇತಿ ಶಿಬಿರ’ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.
ಭಾರತದ ಪ್ರಾದೇಶಿಕ ಭಾಷೆಗಳ ಮೇಲೆ ಸಂಸ್ಕೃತ ಪ್ರಭಾವ ಸಾಕಷ್ಟು ಆಗಿದೆ. ಕನ್ನಡ ಸಾಹಿತ್ಯದ ವಿಷಯದಲ್ಲೂ ಇದು ಸತ್ಯವಾದ ಮಾತು. ಕನ್ನಡ ಪಂಡಿತರು ಎಂದರೆ ಅವರು ಸಂಸ್ಕೃತವನ್ನು ಚೆನ್ನಾಗಿ ತಿಳಿದವರೇ ಆಗಿದ್ದರು. ಪಂಪನಿಂದ ಕುವೆಂಪುವರೆಗೂ ಎಲ್ಲರೂ ಸಂಸ್ಕೃತ ಪಂಡಿತರೆ. ಅವರು ಸಂಸ್ಕೃತವನ್ನು ಸಿದ್ಧಿಸಿಕೊಂಡು ಕನ್ನಡವನ್ನು ಶ್ರೀಮಂತಗೊಳಿಸಿದರು. ಬಳಿಕ ಸಂಸ್ಕೃತ ಸಮಾಜದಿಂದ ಕಣ್ಮರೆಯಾಗ ತೊಡಗಿತು. ಆದರೆ ಬ್ರಿಟಿಷರ ಆಳ್ವಿಕೆಯಲ್ಲೂ ಕೆಲವರು ಸಂಸ್ಕೃತ ಕಲಿತರು. ಸದ್ಯಕ್ಕೆ ಸಂಸ್ಕೃತವನ್ನು ಮಾತಾಡುವ ಭಾಷೆಯಾಗಿ ಉಪಯೋಗಿಸುವುದು ತೀರ ಕಡಿಮೆಯಾಗಿದೆ. ಸಂಸ್ಕೃತವನ್ನು ಉಳಿಸಲು ಇಂತಹ ಶಿಬಿರಗಳು ಪೂರಕ ಎಂದರು.
ಸಂಸ್ಕೃತ ಹುಟ್ಟಿದಾಗಿನಿಂದಲೂ ಪರಿಪೂರ್ಣ ಭಾಷೆಯಾಗಿದೆ. 10 ಸಾವಿರ ವರ್ಷ ಇತಿಹಾಸವನ್ನು ಹೊಂದಿದ್ದು, ಜಗತ್ತಿನ ಅನೇಕ ಭಾಷೆಗಳು ಇದರ ಪ್ರಭಾವಕ್ಕೆ ಒಳಗಾಗಿರುವುದನ್ನು ಕಾಣಬಹುದು. ಸಂಸ್ಕೃತ ಭಾಷೆಯಲ್ಲಿ ಅಪಾರ ಪ್ರಮಾಣದ ಸಾಹಿತ್ಯ ರಚನೆಯಾಗಿದೆ. ಇದು ಇಂಡೋ- ಯೂರೋಪಿಯನ್ ಭಾಷಾ ಬಳಗಕ್ಕೆ ಸೇರಿರುವ ಭಾಷೆಯಾಗಿದೆ ಎಂದರು.
ಇದು ಭಾರತದ ಶಾಸ್ತ್ರೀಯ ಭಾಷೆಯಾಗಿದ್ದು, ಭಾರತದಲ್ಲಿ ಸಂಸ್ಕೃತ ಭಾಷೆ ಹೊಂದಿರುವ ಸ್ಥಾನವನ್ನು ಯೂರೋಪಿನಲ್ಲಿ ಲ್ಯಾಟಿನ್ ಮತ್ತು ಗ್ರೀಕ್ ಭಾಷೆಗಳು ಹೊಂದಿವೆ. ಇದು ಭಾರತದ 22 ಅಧಿಕೃತ ಭಾಷೆಗಳಲ್ಲಿ ಒಂದು. ಪುರಾತನ ಭಾರತೀಯ ಸಂಸ್ಕೃತಿ, ಸಾಹಿತ್ಯ, ವಿಜ್ಞಾನ ಹಾಗೂ ತತ್ವಶಾಸ್ತ್ರಗಳಲ್ಲಿ ವಿಫಲವಾಗಿ ಬಳಸಿರುವ ಭಾಷೆ ಇದಾಗಿದೆ. ಸಂಸ್ಕೃತವನ್ನು ನೂರಾರು ಕವಿ, ಸಾಹಿತಿಗಳು, ದಾರ್ಶನಿಕರು ಶ್ರೀಮಂತಗೊಳಿಸಿದ್ದಾರೆ. ವಾಲ್ಮೀಕಿ ಮುನಿಗಳು ರಾಮಾಯಣವನ್ನು ರಚಿಸಿದರು. ನಂತರ ವ್ಯಾಸ ಮಹರ್ಷಿ ಮಹಾಭಾರತವನ್ನು ರಚಿಸಿದರು. ಇವರಿಬ್ಬರು ಸಂಸ್ಕೃತದ ಮೂಲ ಕವಿಗಳು. ಕಾಳಿದಾಸ ಸಂಸ್ಕೃತ ಆದಿ ಕವಿಯಾಗಿದ್ದಾರೆ. ಹಿಂದು, ಬೌದ್ಧ, ಜೈನ ಧರ್ಮಗಳ ಪಾರಂಪರಿಕ ಭಾಷೆಯೂ ಇದಾಗಿದೆ ಎಂದರು.
ನಮ್ಮ ಸಂಸ್ಕೃತ ಸಂಶೋಧನಾ ಕೇಂದ್ರವು ಪುಸ್ತಕ ಪ್ರಕಟಣೆ, ಕಾರ್ಯಾಗಾರ, ತರಬೇತಿ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬಂದಿದೆ. ಇದುವರೆಗೂ ಮೂರು ಗ್ರಂಥಗಳನ್ನು ಪ್ರಕಟಣೆ ಮಾಡಲಾಗಿದ್ದು, ಮತ್ತೆರಡು ಗ್ರಂಥಗಳು ಪ್ರಕಟಣೆಗೆ ಸಿದ್ಧವಾಗಿವೆ ಎಂದರು.
ಸಂಸ್ಕೃತ ಸಂಶೋಧನಾ ಕೇಂದ್ರಕ್ಕೆ ನವದೆಹಲಿಯ ಕೇಂದ್ರೀಯ ಸಂಸ್ಕೃತ ವಿಶ್ವವಿದ್ಯಾಲಯವು ಅಷ್ಟಾದಶೀ ಯೋಜನೆಯ ಅಡಿಯಲ್ಲಿ ವಿದ್ಯಾರ್ಥಿಗಳಿಗೆ ಒಂದು ತಿಂಗಳ ಸಂಸ್ಕೃತ ಭಾಷಾ ಕೌಶಲ ವರ್ಧನಾ ವಸತಿ ತರಬೇತಿ ಶಿಬಿರ ಆಯೋಜಿಸಲಾಗಿದೆ. ಶಿಬಿರಕ್ಕೆ 50 ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ ಎಂದರು.
ಕಂದೂರು ಮಠದ ಶ್ರೀ ಶರತ್‌ಚಂದ್ರ ಸ್ವಾಮೀಜಿ ಕಾರ್ಯಕ್ರಮ ಉದ್ಘಾಟಿಸಿದರು. ರಾಷ್ಟ್ರಪ್ರಶಸ್ತಿ ಪುರಸ್ಕೃತ ವಿದ್ವಾನ್ ಎಚ್.ವಿ.ನಾಗರಾಜರಾವ್, ಕಾಲೇಜು ಶಿಕ್ಷಣ ಇಲಾಖೆ ವಿಶ್ರಾಂತ ಹೆಚ್ಚುವರಿ ನಿರ್ದೇಶಕ ಪ್ರೊ.ಟಿ.ಎನ್.ಪ್ರಭಾಕರ, ಡಾ.ಬಿ.ಪಿ.ಷಡಕ್ಷರಿ, ಡಾ.ಎಂ.ಎಸ್.ಕೋಮಲಾ ಇತರರಿದ್ದರು.