ನ್ಯೂಸ್

ಸಂಸದರ ಪ್ರದೇಶಾಭಿವೃದ್ಧಿ ನಿಧಿ ಪುನರಾರಂಭ: ಸಂಸದರಿಗೆ ಈ ವರ್ಷಕ್ಕೆ 2 ಕೋಟಿ ರೂ. ಅನುದಾನ..

ನವದೆಹಲಿ: ಕೋವಿಡ್ ಸಂಕಷ್ಟದ ಕಾರಣ ಸ್ಥಗಿತಗೊಂಡಿದ್ದ ಸಂಸದರ ಪ್ರದೇಶಾಭಿವೃದ್ಧಿ ನಿಧಿ (ಎಂಪಿಲ್ಯಾಡ್) ಯೋಜನೆಗೆ ಮರುಚಾಲನೆ ನೀಡಲು ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಬುಧವಾರ ತೀರ್ವನಿಸಿದೆ. ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಠಾಕೂರ್ ಸಂಪುಟ ಸಭೆಯ ನಿರ್ಧಾರಗಳ ಮಾಹಿತಿ ನೀಡಿದ್ದು, ಈ ಯೋಜನೆಯು 2025-26ರ ತನಕ ಮುಂದುವರಿಯಲಿದೆ. ಈ ವರ್ಷದ ಮಟ್ಟಿಗೆ ಅಂದರೆ 2021-22ನೇ ಹಣಕಾಸು ವರ್ಷದ ಉಳಿದ ಭಾಗಕ್ಕೆ ಅನ್ವಯವಾಗುವಂತೆ ಪ್ರತಿ ಸಂಸದರಿಗೆ ಎಂಪಿಲ್ಯಾಡ್ ಮೂಲಕ ತಲಾ 2 ಕೋಟಿ ರೂಪಾಯಿ ಏಕ ಕಂತಿನಲ್ಲಿ ಹಂಚಿಕೆಯಾಗಲಿದೆ. 2022-23ರಿಂದ 2025-26ರ ತನಕ ಪ್ರತಿ ವರ್ಷ ಪ್ರತಿ ಸಂಸದರಿಗೆ ಎಂಪಿಲ್ಯಾಡ್​ಗೆ 5 ಕೋಟಿ ರೂಪಾಯಿ ಹಂಚಿಕೆಯಾಗಲಿದೆ. ಇದನ್ನು 2.5 ಕೋಟಿ ರೂಪಾಯಿಯ ಎರಡು ಕಂತುಗಳಲ್ಲಿ ಸರ್ಕಾರ ಹಂಚಿಕೆ ಮಾಡಲಿದೆ ಎಂದು ತಿಳಿಸಿದರು.

ಕಳೆದ ವರ್ಷ ಏಪ್ರಿಲ್​ನಲ್ಲಿ ಅಮಾನತು: ಕೋವಿಡ್ ಸಂಕಷ್ಟ ಹಿನ್ನೆಲೆಯಲ್ಲಿ ಕಳೆದ ವರ್ಷ ಏಪ್ರಿಲ್​ನಲ್ಲಿ ಸರ್ಕಾರ ಎಂಪಿಲ್ಯಾಡ್ ಯೋಜನೆಯನ್ನು 2020-21 ಮತ್ತು 2021-22ರ ಮಟ್ಟಿಗೆ ಅಮಾನತುಗೊಳಿಸಿತ್ತು. ಆರೋಗ್ಯ ಮೂಲಸೌಕರ್ಯ ಮತ್ತು ಕೋವಿಡ್ ಸಂಕಷ್ಟ ಪರಿಹಾರ ಕಾರ್ಯಕ್ಕೆ ನಿಧಿಯ ಅವಶ್ಯಕತೆ ಇರುವ ಕಾರಣ ಈ ಕ್ರಮ ತೆಗೆದುಕೊಳ್ಳುತ್ತಿರುವುದಾಗಿ ಕೇಂದ್ರ ಸರ್ಕಾರ ಘೋಷಿಸಿತ್ತು.

ಏನಿದು ಯೋಜನೆ?

  • ಲೋಕಸಭೆ ಮತ್ತು ರಾಜ್ಯಸಭೆ ಸದಸ್ಯರಿಗೆ (ನಾಮನಿರ್ದೇಶಿತರು ಸೇರಿ) ಅವರು ಪ್ರತಿನಿಧಿಸುವ ಕ್ಷೇತ್ರದ ಪ್ರದೇಶಾಭಿವೃದ್ಧಿಗೆ ಪ್ರತಿವರ್ಷ 5 ಕೋಟಿ ರೂಪಾಯಿ ಅನುದಾನ ಒದಗಿಸುವ ಯೋಜನೆ ಇದು
  • ಕೇಂದ್ರ ಸರ್ಕಾರ ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಯೋಜನೆಗೆ 1.7 ಲಕ್ಷ ಕೋಟಿ ರೂ. ಪ್ಯಾಕೇಜ್ ಘೋಷಿಸಿತ್ತು. ಇದರ 4.5% ಅಂದರೆ 7,800 ಕೋಟಿ ರೂಪಾಯಿಯನ್ನು ಎಂಪಿಲ್ಯಾಡ್ ಯೋಜನೆ ಸ್ಥಗಿತಗೊಳಿಸಿದ್ದರಿಂದ ಸಿಕ್ಕಿತ್ತು.
  • 1993ರ ಡಿಸೆಂಬರ್ 23ರಂದು ಅಂದಿನ ಪ್ರಧಾನಿ ಪಿ.ವಿ.ನರಸಿಂಹ ರಾವ್ ಈ ಯೋಜನೆ ಘೋಷಿಸಿದ್ದರು.
  • 2018ರಲ್ಲಿ ಈ ಯೋಜನೆ ಮುಂದು ವರಿಕೆಗೆ ಸರ್ಕಾರ ಒಪ್ಪಿಗೆ ನೀಡಿದಾಗ, ಕುಡಿಯುವ ನೀರು, ಶಿಕ್ಷಣ, ಸಾರ್ವಜನಿಕ ಆರೋಗ್ಯ, ನೈರ್ಮಲ್ಯ, ರಸ್ತೆ ನಿರ್ಮಾಣ ಮುಂತಾದವುಗಳಿಗೆ ಎಂಪಿಲ್ಯಾಡ್ ನಿಧಿ ಬಳಸುವಂತೆ ಸೂಚನೆ ನೀಡಿತ್ತು.
  • 2017ರ ತನಕ 19 ಲಕ್ಷದಷ್ಟು ಪ್ರಾಜೆಕ್ಟ್ ಗಳಿಗೆ 45,000 ಕೋಟಿ ರೂಪಾಯಿ ಅನುದಾನ ಎಂಪಿಲ್ಯಾಡ್ ಯೋಜನೆ ಮೂಲಕ ಬಿಡುಗಡೆಯಾಗಿದೆ.

15ಕ್ಕೆ ಜನಜಾತೀಯ ಗೌರವ ದಿನ: ಬುಡಕಟ್ಟು ನಾಯಕ, ಸ್ವಾತಂತ್ರ್ಯ ಹೋರಾಟಗಾರ ಬಿರ್ಸಾ ಮುಂಡಾ ಅವರ ಜಯಂತಿಯನ್ನು ‘ಜನಜಾತೀಯ ಗೌರವ ದಿನ’ ಎಂದು ಆಚರಿಸುವ ಪ್ರಸ್ತಾವನೆಯನ್ನು ಕೇಂದ್ರ ಸಚಿವ ಸಂಪುಟ ಅಂಗೀಕರಿಸಿದೆ. ಬಿರ್ಸಾ ಮುಂಡಾ ಅವರು ಭಾರತದ ಇತಿಹಾಸ ಮತ್ತು ಸಂಸ್ಕೃತಿಯಲ್ಲಿ ಬುಡಕಟ್ಟು ಜನಾಂಗಕ್ಕೆ ನೀಡಿದ ಕೊಡುಗೆಯನ್ನು ಗೌರವಿಸುವ ಸಲುವಾಗಿ ಸರ್ಕಾರ ಈ ತೀರ್ಮಾನ ತೆಗೆದುಕೊಂಡಿದೆ. ಈ ಬಾರಿ 15ರಿಂದ 22ರ ತನಕ ಒಂದು ವಾರದ ಕಾರ್ಯಕ್ರಮವನ್ನು ಸರ್ಕಾರ ಆಯೋಜಿಸಲಿದೆ.

ಎಥನಾಲ್ ಬೆಲೆ ಏರಿಕೆ: ಪೆಟ್ರೋಲ್​ಗೆ ಸೇರಿಸುವ ಎಥನಾಲ್​ಗೆ ಪ್ರತಿ ಲೀಟರಿಗೆ 1.47 ರೂಪಾಯಿ ಏರಿಕೆ ಮಾಡುವ ತೀರ್ವನವನ್ನು ಸರ್ಕಾರ ಪ್ರಕಟಿಸಿದೆ. 2021-22ರ ಮಾರುಕಟ್ಟೆ ವರ್ಷ ಡಿಸೆಂಬರ್​ನಿಂದ ಆರಂಭವಾಗುತ್ತಿದ್ದು, ಅಲ್ಲಿಂದಲೇ ಇದು ಚಾಲ್ತಿಗೆ ಬರಲಿದೆ. 2025ರ ವೇಳೆಗೆ 20% ಡೋಪಿಂಗ್ ಗುರಿ ಸಾಧಿಸುವ ನಿಟ್ಟಿನಲ್ಲಿ ಈ ಕ್ರಮವನ್ನು ಅದು ತೆಗೆದುಕೊಂಡಿದೆ. ಪೆಟ್ರೋಲ್​ನಲ್ಲಿ ಗರಿಷ್ಠ ಪ್ರಮಾಣದ ಎಥನಾಲ್ ಸೇರಿಸುವುದರಿಂದ ಭಾರತದ ತೈಲ ಆಮದು ಬಿಲ್ ಕಡಿಮೆಯಾಗಲಿದೆ. ಅಲ್ಲದೆ, ಕಬ್ಬು ಬೆಳೆಗಾರರಿಗೆ ಮತ್ತು ಸಕ್ಕರೆ ಕಾರ್ಖನೆಗಳಿಗೆ ಪ್ರಯೋಜನವಾಗಲಿದೆ.

ಎಷ್ಟು ಏರಿಕೆ?: ಕಬ್ಬಿನಹಾಲಿನಿಂದ ತೆಗೆದ ಎಥನಾಲ್​ಗೆ ಲೀಟರ್​ಗೆ 62.65 ರೂ. ಇದ್ದು, ಡಿಸೆಂಬರ್​ನಲ್ಲಿ ಇದು 63.45 ರೂ. ಆಗಲಿದೆ. ಸಿ-ಹೆವಿ ಮೊಲಾಸಸ್​ನಿಂದ ತೆಗೆದ ಎಥನಾಲ್​ಗೆ ಲೀಟರ್​ಗೆ 45.69 ರೂ. ಇದ್ದು, 46.66 ರೂಪಾಯಿ, ಬಿ-ಹೆವಿ ಎಥನಾಲ್​ಗೆ 57.61 ರೂ. ಇದ್ದದ್ದು 59.08 ರೂಪಾಯಿ ಆಗಲಿದೆ. ಪ್ರಸಕ್ತ ಮಾರುಕಟ್ಟೆ ವರ್ಷದಲ್ಲಿ ಪೆಟ್ರೋಲ್ ಜತೆಗೆ ಎಥನಾಲ್ ಸೇರಿಸುವ ಪ್ರಮಾಣ ಶೇಕಡ 8 ಆಗಿದ್ದು, ಮುಂದಿನ ವರ್ಷ (ಡಿಸೆಂಬರ್-ನವೆಂಬರ್) ಇದು ಶೇಕಡ 10 ತಲುಪಲಿದೆ.

ಆಹಾರಧಾನ್ಯಕ್ಕೆ ಸೆಣಬಿನ ಚೀಲ: ಆಹಾರಧಾನ್ಯಗಳ ಪ್ಯಾಕಿಂಗ್​ಗೆ ಶೇಕಡ 100ರಷ್ಟು ಸೆಣಬಿನ ಚೀಲವನ್ನೇ ಬಳಸಬೇಕು. ಸಕ್ಕರೆ ಪ್ಯಾಕಿಂಗ್​ನಲ್ಲಿ ಶೇಕಡ 20 ಸೆಣಬಿನ ಚೀಲ ಬಳಕೆ ಮಾಡಬೇಕು ಎಂಬ ಪ್ರಸ್ತಾವನೆಯನ್ನು ಕೇಂದ್ರ ಸಚಿವ ಸಂಪುಟ ಅಂಗೀಕರಿಸಿದೆ. 1987ರ ಜೆಪಿಎಂ ಕಾಯ್ದೆ ಪ್ರಕಾರ ಈ ತೀರ್ಮಾನ ಪ್ರಕಟಿಸಲಾಗಿದೆ. ಆತ್ಮನಿರ್ಭರ ಭಾರತ ಯೋಜನೆ ಪ್ರಕಾರ, ಕಚ್ಚಾ ಸೆಣಬು ಮತ್ತು ಸೆಣಬಿನ ಪ್ಯಾಕಿಂಗ್ ವಸ್ತುಗಳ ದೇಶೀಯ ಉತ್ಪಾದನೆ ಹೆಚ್ಚಿಸುವ ಉದ್ದೇಶದಿಂದ ಈ ಉಪಕ್ರಮವನ್ನು ಸರ್ಕಾರ ಬೆಂಬಲಿಸಿದೆ. ಪ್ಯಾಕಿಂಗ್​ನಲ್ಲಿ ಸೆಣಬಿನ ಪ್ಯಾಕೇಜಿಂಗ್​ಗೆ ಮೀಸಲು ಒದಗಿಸಿದ ಕಾರಣ ದೇಶದಲ್ಲಿ ಉತ್ಪಾದಿಸಲ್ಪಟ್ಟ ಶೇಕಡ 66.57 ಸೆಣಬಿನ ವಸ್ತು ಬಳಕೆಯಾಗಿವೆ. ಈ ನಿರ್ಣಯದಿಂದ ಜ್ಯೂಟ್ ಮಿಲ್ ಮತ್ತು ಆನ್ಸಿಲರಿ ಘಟಕಗಳಲ್ಲಿ ಕೆಲಸ ಮಾಡುವ 3.7 ಲಕ್ಷ ಕಾರ್ವಿುಕರಿಗೆ ಅನುಕೂಲವಾಗಲಿದೆ.

ಹತ್ತಿ ವ್ಯವಹಾರಕ್ಕೆ 17,409 ಕೋಟಿ ರೂ.: ಏಳು ಹತ್ತಿ ಬೆಳೆ ಋತುಗಳಿಗೆ ಅನ್ವಯಿಸುವಂತೆ (2014-15ರಿಂದ ಆರಂಭಿಸಿ 2020-21ರ ಅವಧಿ) ಹತ್ತಿ ಸಂಗ್ರಹಣೆಗಾಗಿ 17,409 ಕೋಟಿ ರೂಪಾಯಿಯ ಬದ್ಧತಾ ಬೆಂಬಲ ಬೆಲೆಯ ಕಾಟನ್ ಕಾರ್ಪೆರೇಷನ್ ಆಫ್ ಇಂಡಿಯಾ (ಸಿಸಿಐ) ಪ್ರಸ್ತಾವನೆಯನ್ನು ಕೇಂದ್ರ ಸಚಿವ ಸಂಪುಟ ಅನುಮೋದಿಸಿದೆ. ಕನಿಷ್ಠ ಬೆಂಬಲ ಬೆಲೆ ವ್ಯವಹಾರದಲ್ಲಿ ಈ ಅವಧಿಯಲ್ಲಿ ನಷ್ಟ ಭರ್ತಿಗಾಗಿ ನೀಡಿರುವ ವೆಚ್ಚ ಇದಾಗಿದೆ.