ನ್ಯೂಸ್

ಸಂಸದ ಡಿ.ಕೆ.ಸುರೇಶ್ ನಡೆಗೆ ಆಕ್ರೋಶ: ಕೆಎಸ್‌ಆರ್‌ಟಿಸಿ ವೃತ್ತದಲ್ಲಿ ಬಿಜೆಪಿ ಪ್ರತಿಭಟನೆ

ಕೋಲಾರ: ರಾಮನಗರದಲ್ಲಿ ಸೋಮವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪಾಲ್ಗೊಂಡಿದ್ದ ಸಭೆಯಲ್ಲಿ ಐಟಿ, ಬಿಟಿ ಮತ್ತು ಉನ್ನತ ಶಿಕ್ಷಣ ಸಚಿವ ಡಾ.ಅಶ್ವತ್ಥ ನಾರಾಯಣ ಅವರ ಭಾಷಣಕ್ಕೆ ಅಡ್ಡಿಪಡಿಸಿದ ಸಂಸದ ಡಿ.ಕೆ.ಸುರೇಶ್, ಎಂಎಲ್‌ಸಿ ರವಿ ಹಾಗೂ ಕಾಂಗ್ರೆಸ್ ಬೆಂಬಲಿಗರ ವಿರುದ್ಧ ನಗರದ ಕೆಎಸ್‌ಆರ್‌ಟಿಸಿ ವೃತ್ತದಲ್ಲಿ ಬಿಜೆಪಿಯಿಂದ ಪ್ರತಿಭಟನೆ ನಡೆಯಿತು.

ಬಿಜೆಪಿ ಜಿಲ್ಲಾಧ್ಯಕ್ಷ ಡಾ.ಕೆ.ಎನ್.ವೇಣುಗೋಪಾಲ್ ಪ್ರತಿಭಟನೆ ನೇತೃತ್ವ ವಹಿಸಿ ಮಾತನಾಡಿ, ಸಂಸದ ಡಿ.ಕೆ.ಶಿವಕುಮಾರ್ ಘನತೆ ಗೌರವ ಮರೆತು ಅನಾಗರಿಕರಂತೆ ವರ್ತಿಸಿರುವುದು ಖಂಡನೀಯ, ಸಚಿವ ಡಾ.ಅಶ್ವತ್ಥನಾರಾಯಣ ಪ್ರಸ್ತಾವಿಕ ಭಾಷಣ ಮಾಡುವಾಗ ಕೆಲವರು ಅನಗತ್ಯ ಘೋಷಣೆ ಕೂಗಿದ್ದರಿಂದ ಸಚಿವರು ಅಸಮಾಧಾನ ವ್ಯಕ್ತಪಡಿಸಿದರು. ತಾಳ್ಮೆ ಕಳೆದುಕೊಂಡ ಡಿ.ಕೆ.ಸುರೇಶ್ ಪೋಡಿಯಂ ಬಳಿ ಧಾವಿಸಿ ಬಂದು ಅನುಚಿತವಾಗಿ ವರ್ತಿಸಿದ್ದಾರೆ. ಕಾಂಗ್ರೆಸ್ ಎಂಎಲ್‌ಸಿ ರವಿ ಸಚಿವರ ಮೇಲೆ ಹಲ್ಲೆಗೆ ಯತ್ನಿಸಿದ್ದು ಪ್ರಜಾತಂತ್ರ ವ್ಯವಸ್ಥೆಯ ಕಗ್ಗೊಲೆ ಎಂದು ಟೀಕಿಸಿದರು.

ಸುರೇಶ್ ಜನರಲ್ಲಿ ಕ್ಷಮೆಯಾಚಿಸಬೇಕು, ಇನ್ನು ಮುಂದೆ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಎಚ್ಚರಿಕೆಯಿಂದ ವರ್ತಿಸಬೇಕೆಂದು ಒತ್ತಾಯಿಸಿದರು.

ಕೋಲಾರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಓಂಶಕ್ತಿ ಚಲಪತಿ, ಜಿಲ್ಲಾ ಕೋರ್ ಕಮಿಟಿ ಸದಸ್ಯ ವಿಜಯಕುಮಾರ್, ಪ್ರಧಾನ ಕಾರ್ಯದಶಿಗಳಾದ ಸಿ.ಡಿ.ರಾಮಚಂದ್ರ, ಕೃಷ್ಣಮೂರ್ತಿ, ಕೋಲಾರ ನಗರ ಘಟಕ ಅಧ್ಯಕ್ಷ ತಿಮ್ಮರಾಯಪ್ಪ, ಜಿಲ್ಲಾ ಬಿಜೆಪಿ ಕಾರ್ಯಾಲಯ ಕಾರ್ಯದರ್ಶಿ ರಾಜೇಶ್ ಸಿಂಗ್, ಮಹಿಳಾ ಮೋರ್ಚಾ ಸಮಿತಿ ಸದಸ್ಯೆ ಮಮತಾ ಇನ್ನಿತರರು ಭಾಗವಹಿಸಿದ್ದರು.

ಸಚಿವರ ಗಮನಕ್ಕೆ: ಕರೊನಾ ನಿರ್ವಹಣೆಗಾಗಿ ಜಿಲ್ಲೆಯ ಉಸ್ತುವಾರಿ ಹೊತ್ತಿರುವ ಸಚಿವ ಮುನಿರತ್ನ ಮಕ್ಕಳಿಗೆ ಕರೊನಾ ಲಸಿಕೆ ಹಾಕುವ ಕಾರ್ಯಕ್ರಮಕ್ಕೆ ಗೈರಾಗಿರುವ ಬಗ್ಗೆ ಜನರಿಂದ ವ್ಯಕ್ತವಾಗಿರುವ ಅಸಮಾಧಾನವನ್ನು ಅವರ ಗಮನಕ್ಕೆ ತರುತ್ತೇವೆ, ಜಿಲ್ಲೆಯ ಅಭಿವೃದ್ಧಿಗೆ ಹೆಚ್ಚಿನ ಗಮನ ಹರಿಸಬೇಕೆಂದು ಮನವಿ ಮಾಡುತ್ತೇವೆ ಎಂದು ಜಿಲ್ಲಾ ಮಾಧ್ಯಮ ವಕ್ತಾರ ಹಾಗೂ ಕೋರ್ ಕಮಿಟಿ ಸದಸ್ಯ ಎಸ್.ಬಿ.ಮುನಿವೆಂಕಟಪ್ಪ ತಿಳಿಸಿದರು.