ನ್ಯೂಸ್

ಸಂಸದ ಡಾ.ಕೆ.ಸುಧಾಕರ್ ಪತ್ನಿ ಡಿಜಿಟಲ್ ಅರೆಸ್ಟ್ : 14 ಲಕ್ಷ ಹಣ ದೋಚಿದ್ದ ವಂಚಕರು

ಬೆಂಗಳೂರು: ಮಾಜಿ ಸಚಿವ ಹಾಗೂ ಚಿಕ್ಕಬಳ್ಳಾಪುರ ಕ್ಷೇತ್ರದ ಬಿಜೆಪಿ ಸಂಸದ ಡಾ.ಕೆ.ಸುಧಾಕರ್ ಪತ್ನಿಗೆ ಡಿಜಿಟಲ್ ಅರೆಸ್ಟ್ ಮಾಡಿರುವ ವಂಚಕರು ಬರೋಬ್ಬರಿ 14 ಲಕ್ಷ ರೂ. ಹಣ ದೋಚಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

ಸಂಸದ ಡಾ.ಕೆ ಸುಧಾಕರ್ ಅವರ ಪತ್ನಿ ಡಾ.ಪ್ರೀತಿ ವಂಚನೆಗೊಳಗಾದವರು. ಆ.೨೬ ರಂದು ಈ ಪ್ರಕರಣ ನಡೆದಿತ್ತು. ತಾನು ವಂಚನೆಗೊಳಗಾಗಿರುವುದನ್ನು ಅರಿತ ಪ್ರೀತಿ ಅವರು ಕೂಡಲೇ ಈ ಸಂಬಂಧ ಪಶ್ಚಿಮ ವಿಭಾಗದ ಸಿಎಎನ್ ಠಾಣೆಯ ಪ್ರಕರಣ ದಾಖಲಿಸಿದ್ದರು. ತನಿಖೆ ಕೈಗೊಂಡ ಪೊಲೀಸರು ವಂಚಕರ ಬ್ಯಾಂಕ್ ಖಾತೆ ಫ್ರೀಜ್ ಮಾಡಿಸಿ ದೂರುದಾರರಿಗೆ ಹಣ ವಾಪಸ್ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಪಶ್ಚಿಮ ವಿಭಾಗದ ಡಿಸಿಪಿ ಗಿರೀಶ್ ತಿಳಿಸಿದ್ದಾರೆ.

ವಂಚನೆ ಹೇಗೆ?

ಆ.೨೬ರ ಬೆಳಗ್ಗೆ ೯.೩೦ ಕ್ಕೆ ಪ್ರೀತಿ ಅವರ ಮೊಬೈಲ್ ನಂಬರ್‌ಗೆ ಕರೆ ಮಾಡಿದ್ದ ಅಪರಿಚಿತನೊಬ್ಬ ನಾನು ಸೈಬರ್ ಕ್ರೈಂ ಇಲಾಖೆಯಿಂದ ಮಾತನಾಡುತ್ತಿದ್ದೇನೆ. ನಿಮ್ಮ ಗುರುತಿನ ದಾಖಲೆಗಳನ್ನು ಸದ್ಭತ್‌ಖಾನ್ ಎನ್ನುವ ವ್ಯಕ್ತಿ ಉಪಯೋಗಿಸಿಕೊಂಡು ನಿಮ್ಮ ಹೆಸರಿನಲ್ಲಿ ಕ್ರೇಡಿಟ್ ಕಾರ್ಡ್ ಮಾಡಿಸಿ ಅದನ್ನು ಬಳಸಿಕೊಂಡು ವಿಯೇಟ್ನಾಂ, ಕಾಂಬೋಡಿಯಾ, ಲಾವೋಸ್ ದೇಶಗಳಿಗೆ ಜನರನ್ನು ಕಳುಹಿಸಿ, ಅವರನ್ನು ಕಾನೂನು ಬಾಹಿರ ಚಟುವಟಿಕೆಯಲ್ಲಿ ತೊಡಗಿಸಿದ್ದ ಈ ಹಿನ್ನೆಲೆಯಲ್ಲಿ ಆತನನ್ನು ಬಂಧಿಸಲಾಗಿದೆ. ಆತ ಅರೆಸ್ಟ್ ಆಗಿರುವ ೆಟೋವನ್ನು ದೂರುದಾರರಿಗೆ ಕಳುಹಿಸಿದ್ದರು. ನೀವು ಮೇಲಾಧಿಕಾರಿಗಳ ಜತೆ ಮಾತನಾಡಬೇಕೆಂದು ಹೇಳಿ ದೂರುದಾರರಿಗೆ ವಾಟ್ಸ್‌ಆ್ಯಪ್ ವಿಡಿಯೋ ಕಾಲ್ ಮಾಡಿ ಮುಂಬೈ ಸೈಬರ್ ಕ್ರೈಂ ಇಲಾಖೆಯಿಂದ ತಾವು ಮಾತನಾಡುತ್ತಿರುವುದಾಗಿ ಹೇಳಿದ್ದರು. ಪೊಲೀಸರ ವೇಷದಲ್ಲಿ ವಂಚಕರು ನಿಮ್ಮ ಹಣವನ್ನು ಪರಿಶೀಲನೆ ಮಾಡಬೇಕು, ನಿಮ್ಮ ಹಣ ಮತ್ತು ನಿಮ್ಮ ಬ್ಯಾಂಕ್ ಖಾತೆಗಳು ಕಾನೂನುಬಾಹಿರವಾಗಿದ್ದು, ನಿಮ್ಮ ಹಣವನ್ನು ಆರ್‌ಬಿಐಗೆ ವೆರಿಫಿಕೇಷನ್‌ಗೆ ಕಳುಹಿಸಿ ವಾಪಸ್ ೪೫ ನಿಮಿಷದಲ್ಲಿ ನಿಮ್ಮ ಖಾತೆಗೆ ಹಣವನ್ನು ವಾಪಸ್ ವರ್ಗಾವಣೆ ಮಾಡುತ್ತೇವೆ ಎಂದು ಹೇಳಿದ್ದರು. ವಂಚಕರ ಮಾತನ್ನು ನಂಬಿದ್ದ ದೂರುದಾರರು ತಮ್ಮ ಖಾತೆಯಿಂದ ಒಟ್ಟು ೧೪ ಲಕ್ಷ ರೂ. ಹಣವನ್ನು ಅವರು ನೀಡಿದ್ದ ಬ್ಯಾಂಕ್ ಖಾತೆಗೆ ಆರ್‌ಟಿಜಿಎಸ್ ಮುಖಾಂತರ ವರ್ಗಾವಣೆ ಮಾಡಿದ್ದರು. ಬಸವೇಶ್ವರ ನಗರದಲ್ಲಿ ಡಿಜಿಟಲ್ ಅರೆಸ್ಟ್ ಆಗಿದ್ದರು ಎಂದು ತಿಳಿದುಬಂದಿದೆ.

ದೂರುದಾರರ ಹಣ ಉಳಿಸಿದ ಗೋಲ್ಡನ್ ಅವರ್:

ಬಳಿಕ ತಾನು ಮೋಸ ಹೋಗಿರುವುದನ್ನು ಅರಿತ ಪ್ರೀತಿ ಅವರು ತಡ ಮಾಡದೇ ಪಶ್ಚಿಮ ವಿಭಾಗದ ಸೈಬರ್ ಠಾಣೆಗೆ ತೆರಳಿ ದೂರು ನೀಡಿದ್ದರು. ಪೊಲೀಸರ ಸಮ್ಮುಖದಲ್ಲಿಯೇ ಜತೆಗೆ ಸೈಬರ್ ಕ್ರೈಂ ಸಹಾಯವಾಣಿಯಾದ ೧೯೩೦ನಲ್ಲಿಯೂ ಪ್ರೀತಿ ಅವರು ದೂರು ದಾಖಲಿಸಿದ್ದರು. ಗೋಲ್ಡನ್ ಅವರ್‌ನಲ್ಲಿ (ಘಟನೆ ನಡೆದ ಕೆಲವೇ ಗಂಟೆಯಲ್ಲಿ) ದೂರು ನೀಡಿದ್ದರಿಂದ ಕೂಡಲೇ ಕಾರ್ಯ ಪ್ರವೃತ್ತರಾದ ಪೊಲೀಸರು ವಂಚಕರ ಖಾತೆಯನ್ನು ಪತ್ತೆ ಹಚ್ಚಿ ಖಾತೆಯಲ್ಲಿದ್ದ ಹಣವನ್ನು ಫ್ರೀಜ್ ಮಾಡಿಸಿದ್ದರು. ಬಳಿಕ ನ್ಯಾಯಾಲಯ ಅನುಮತಿ ಪಡೆದು ದೂರುದಾರರಿಗೆ ಹಣ ವಾಪಸ್ ಕೊಡಿಸಿದ್ದಾರೆ.

ಡಿಜಿಟಲ್ ಅರೆಸ್ಟ್ ಬಗ್ಗೆ ಎಚ್ಚರವಹಿಸಿ!

ಸಾರ್ವಜನಿಕರಿಗೆ ಅಪರಿಚಿತ ವ್ಯಕ್ತಿಗಳಿಂದ ವಿಡಿಯೋ ಕರೆಗಳು ಬರಬಹುದು. ನಾವು ಮುಂಬೈ ಸೈಬರ್ ಪೊಲೀಸರು ಎಂದು ಹೇಳಿ ಪರಿಚಯಿಸಿಕೊಂಡು, ನಿಮ್ಮ ಬ್ಯಾಂಕ್ ಖಾತೆಗೆ ಅಕ್ರಮ ಹಣ ಸಂದಾಯವಾಗಿದೆ. ನಿಮ್ಮನ್ನು ಅರೆಸ್ಟ್ ಮಾಡಬೇಕಾಗುತ್ತದೆ ಎಂದು ಹೆದರಿಸಿ ಪೊಲೀಸರ ವೇಷದಲ್ಲಿರುವ ವ್ಯಕ್ತಿಗಳು ನಿಮ್ಮನ್ನು ಬೆದರಿಸಿಬಹುದು. ನಿಮ್ಮನ್ನು ಅರೆಸ್ಟ್ ಮಾಡಬಾರದು ಎಂದಾದರೆ ನಾವು ಸೂಚಿಸಿದ ಖಾತೆಗೆ ಹಣ ಹಾಕಿ ಎಂದು ಬೇಡಿಕೆ ಇಡಬಹುದು. ಆ ಹಣವನ್ನು ಆರ್‌ಬಿಐಯಿಂದ ಪರಿಶೀಲನೆ ನಡೆಸಿ ಬಳಿಕ ಅದನ್ನು ನಿಮ್ಮ ಖಾತೆಗೆ ವಾಪಸ್ ಕಳುಹಿಸುತ್ತೇವೆ ಎಂದು ಸುಳ್ಳು ಹೇಳಬಹುದು.ಈ ರೀತಿಯ ವ್ಯಕ್ತಿಗಳ ಕರೆಗಳನ್ನು ನಂಬಿ ಅಥವಾ ಭಯಪಟ್ಟುಕೊಂಡು ಹಣ ವರ್ಗಾವಣೆ ಮಾಡಬೇಡಿ. ಒಂದು ಹಣ ವೇಳೆ ವರ್ಗಾವಣೆ ಮಾಡಿದರೆ ಆ ರೀತಿಯ ಹಣ ರಿಕವರಿ ಮಾಡುವುದು ತುಂಬಾ ಕಷ್ಟವಾಗಬಹುದು. ಆರೋಪಿಗಳು ದೇಶದ ಯಾವುದೋ ಒಂದು ಜಾಗದಲ್ಲಿ ಕುಳಿತು ಈ ರೀತಿಯ ಕೃತ್ಯ ಎಸಗುತ್ತಿರುತ್ತಾರೆ. ಆರೋಪಿಗಳ ಮಾಹಿತಿ ಮತ್ತು ಸ್ಥಳ ಪತ್ತೆ ಹಚ್ಚುವುದು ಸವಾಲಿನ ಕೆಲಸವಾಗಿದೆ. ಹೀಗಾಗಿ ಸಾರ್ವಜರ್ನಿಕರು ಡಿಜಿಟಲ್ ಅರೆಸ್ಟ್ ಬಗ್ಗೆ ಎಚ್ಚರವಹಿಸಿಬೇಕು. ಜತೆಗೆ ವೈಯಕ್ತಿಕ ಮಾಹಿತಿ ಮತ್ತು ಓಟಿಪಿ ಕೇಳಿದ್ದಾಗ ಅದನ್ನು ಪರಿಚಯವಿಲ್ಲದ ವ್ಯಕ್ತಿಗಳೊಂದಿಗೆ ಹಂಚಿಕೊಳ್ಳಬೇಡಿ ಎಂದು ಪಶ್ಚಿಮ ವಿಭಾಗದ ಡಿಸಿಪಿ ಗಿರೀಶ್ ಮನವಿ ಮಾಡಿದ್ದಾರೆ.