ನ್ಯೂಸ್

ಸಂವಿಧಾನದಷ್ಟೇ ರಾಮಾಯಣ, ಮಹಾಭಾರತವೂ ಮುಖ್ಯ

ಚಿತ್ರದುರ್ಗ: ರಾಮಲಲ್ಲಾ ದರ್ಶನಕ್ಕಾಗಿ ಕರ್ನಾಟಕದ 35 ಸಾವಿರ ರಾಮಭಕ್ತರನ್ನು ಕಳುಹಿಸಲಾಗುತ್ತಿದ್ದು, ನೀವುಗಳೇ ಪುಣ್ಯವಂತರು. ದೇಶದ ಅನೇಕ ಕ್ಯಾಬಿನೆಟ್ ಸಚಿವರಿಗೂ ಈ ಸೌಭಾಗ್ಯ ಇನ್ನೂ ಲಭಿಸಿಲ್ಲ ಎಂದು ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಹೇಳಿದರು.

ಚಿತ್ರದುರ್ಗದಿಂದ ಅಯೋಧ್ಯಗೆ ಹೊರಟಿರುವ ಜಿಲ್ಲೆಯ 415 ರಾಮಭಕ್ತರಿಗೆ ಭಾನುವಾರ ರೈಲ್ವೆ ನಿಲ್ದಾಣದಲ್ಲಿ ಹಮ್ಮಿಕೊಂಡಿದ್ದ ರಾಮನ ದರ್ಶನ ಅಭಿಯಾನ ಉದ್ಘಾಟಿಸಿ ಮಾತನಾಡಿದರು.

500 ವರ್ಷಗಳ ಹೋರಾಟದ ಫಲವಾಗಿ ಶ್ರೀರಾಮಮಂದಿರ ಲೋಕಾರ್ಪಣೆಗೊಂಡು ಅಸಂಖ್ಯಾತ ಭಕ್ತರನ್ನು ಸೆಳೆಯುತ್ತಿದೆ. ಪ್ರಧಾನಿ ನರೇಂದ್ರಮೋದಿ ಅವರ ಆಪೇಕ್ಷೆಯಂತೆ ಸ್ವಾಮಿಯ ದರ್ಶನಕ್ಕೆ ರಾಷ್ಟ್ರದ ಮೂಲೆ-ಮೂಲೆಗಳಿಂದ ತೆರಳುತ್ತಿರುವ ಭಕ್ತರಿಗೆ ಅವಕಾಶ ಮಾಡಿಕೊಡಲಾಗಿದೆ. ಇದಕ್ಕೆ ರೈಲ್ವೆ ಇಲಾಖೆ ಅಗತ್ಯ ಸಹಕಾರ ನೀಡಿರುವುದು ಸ್ವಾಗತಾರ್ಹ ಎಂದರು.

ರಾಮ ಮಂದಿರಕ್ಕಾಗಿ ಹೋರಾಟ ಮಾತ್ರವಲ್ಲ, ಹಲವರ ಪ್ರಾಣ ತ್ಯಾಗವಾಗಿದೆ. ಅಯೋಧ್ಯೆ, ಕಾಶಿ, ಮಥುರೆ ಭಾರತದ ಬಹುಸಂಖ್ಯಾತರ ಆಸ್ಮಿತೆಯಾಗಿದೆ. ರಾಮರಾಜ್ಯ ನಿರ್ಮಾಣ ಆಗಬೇಕೆಂಬುದು ಕೋಟ್ಯಾಂತರ ಜನರ ಕನಸಾಗಿದ್ದು, ಆ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಶ್ರಮಿಸಲಿದೆ ಎಂದು ತಿಳಿಸಿದರು.

ವಿಶ್ವವೇ ಭಾರತದತ್ತ ಮುಖ ಮಾಡುತ್ತಿದ್ದು, ಸಾಧನೆಗೆ ವೇಗ ನೀಡಲಾಗಿದೆ. ದೇಶದಲ್ಲಿ ಸಂವಿಧಾನದಷ್ಟೇ ರಾಮಾಯಣ, ಮಹಾಭಾರತ ಕೂಡ ಮುಖ್ಯ. ಈ ಪವಿತ್ರ ಗ್ರಂಥಗಳು ಹಿಂದುಗಳ ಜೀವನ ಪದ್ಧತಿಯಾಗಿದೆ. ಹೀಗಾಗಿ ಬಹುಸಂಖ್ಯಾತರಿಗೆ ಇತರೆ ಧರ್ಮೀಯರು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

ಮಾಜಿ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಮಾತನಾಡಿ, ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣದ ಕನಸು ಪ್ರಧಾನಿ ಮೋದಿ ಅವರಿಂದಾಗಿ ನನಸಾಗಿದೆ. ಭವ್ಯ ಮಂದಿರ ಪರಿಪೂರ್ಣಗೊಂಡ ನಂತರ ಇದರ ಖ್ಯಾತಿ ವಿಶ್ವಕ್ಕೆ ಪಸರಿಸಲಿದೆ ಎಂದು ಅಭಿಪ್ರಾಯಪಟ್ಟರು.

ರಾಷ್ಟ್ರ ಅಷ್ಟೇ ಅಲ್ಲದೆ, ವಿದೇಶಗಳಲ್ಲಿರುವ ಭಾರತೀಯರು ಸ್ವಾಮಿ ದರ್ಶನಕ್ಕೆ ದಾಂಗುಡಿ ಇಡುತ್ತಿದ್ದಾರೆ. ಈವರೆಗೂ ಕೋಟಿಗೂ ಅಧಿಕ ಭಕ್ತರು ವೀಕ್ಷಿಸಿದ್ದಾರೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮೋದಿ ನೇತೃತ್ವದ ಎನ್‌ಡಿಎ ಒಕ್ಕೂಟ 400ಕ್ಕೂ ಹೆಚ್ಚು ಸ್ಥಾನ ಗಳಿಸಿ, ಮತ್ತೊಮ್ಮೆ ಕೇಂದ್ರದಲ್ಲಿ ಅಧಿಕಾರಕ್ಕೆ ಬರುವ ವಿಶ್ವಾಸವಿದೆ ಎಂದರು.

ಎಂಎಲ್ಸಿ ಕೆ.ಎಸ್.ನವೀನ್ ಮಾತನಾಡಿ, ಶ್ರೀರಾಮನ ದರ್ಶನಕ್ಕೆ ಹಲವರು ಹಾತೋರೆಯುತ್ತಿದ್ದಾರೆ. ಜಿಲ್ಲೆಯಿಂದ ಹೊರಟವರಿಗೆ ಉತ್ತಮ ದರ್ಶನವಾಗಲಿ. ಹಿಂದಿರುಗಿದ ಬಳಿಕ ಕನಿಷ್ಠ 500 ಮನೆಗೆ ಪ್ರಸಾದ ವಿತರಿಸಲಾಗುವುದು. ಸ್ವಾಮಿಯ ತತ್ವಾದರ್ಶ ಅಳವಡಿಸಿಕೊಂಡಲ್ಲಿ ಉತ್ತಮ ಸಮಾಜ ನಿರ್ಮಿಸಬಹುದು ಎಂದರು.

ಅಭಿಯಾನದ ಸಂಚಾಲಕ ಜಗದೀಶ್ ಹಿರೇಮನಿ ಮಾತನಾಡಿ, ರಾಮನ ದರ್ಶನಕ್ಕಾಗಿಯೇ ಕೇಂದ್ರ ಸರ್ಕಾರ ವಿಶೇಷ ರೈಲುಗಳ ವ್ಯವಸ್ಥೆ ಕಲ್ಪಿಸಿದೆ. ರಾಜ್ಯದಿಂದ ಪ್ರಥಮವಾಗಿ ತುಮಕೂರಿನಲ್ಲಿ ಚಾಲನೆ ನೀಡಲಾಯಿತು. ಈಗ ಚಿತ್ರದುರ್ಗದಿಂದ ಕಳುಹಿಸಿ ಕೊಡಲಾಗುತ್ತಿದೆ. ಭಾರತ ಹಿಂದುತ್ವ ಸೇರಿ ಭಾವೈಕ್ಯತೆಯ ಮೇಲೆ ರೂಪುಗೊಳ್ಳುತ್ತಿದೆ ಎಂದು ಹೇಳಿದರು.

ಮಾಜಿ ಶಾಸಕ ನೇರ್ಲಗುಂಟೆ ತಿಪ್ಪೇಸ್ವಾಮಿ, ರೈಲ್ವೆ ಇಲಾಖೆ ಡಿಆರ್‌ಎಂ ಶಿಲ್ಪಾ ಅಗರ್‌ವಾಲ್, ಬಿಜೆಪಿ ಜಿಲ್ಲಾಧ್ಯಕ್ಷ ಎ.ಮುರಳಿ, ಪ್ರಧಾನ ಕಾರ್ಯದರ್ಶಿಗಳಾದ ಸುರೇಶ್ ಸಿದ್ದಾಪುರ, ಸಂಪತ್, ಮುಖಂಡರಾದ ರವಿಚಂದನ್, ವಿಜಯೇಂದ್ರ, ಮೋಹನ್, ಶಿವಣ್ಣಾಚಾರ್, ನಾಗರಾಜ್ ಬೇದ್ರೇ, ದಗ್ಗೆ ಶಿವಪ್ರಕಾಶ್ ಇತರರಿದ್ದರು.