ನಂಜನಗೂಡಿನಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಯುವಕ ಸಂಘಗಳ ಒಕ್ಕೂಟದಿಂದ ಆಯೋಜಿಸಿದ್ದ ಅಂಬೇಡ್ಕರ್ ಜಯಂತ್ಯುತ್ಸವ ಪ್ರಯುಕ್ತ ಆಯೋಜಿಸಿದ್ದ ಮೆರವಣಿಗೆಯನ್ನು ಶಾಸಕ ದರ್ಶನ್ ಧ್ರುವನಾರಾಯಣ್ ಬುಧವಾರ ಉದ್ಘಾಟಿಸಿದರು. ಸುನೀಲ್ ಬೋಸ್, ಡಾ.ಯತೀಂದ್ರ ಸಿದ್ದರಾಮಯ್ಯ, ಕಳಲೆ ಕೇಶವಮೂರ್ತಿ ಇತರರಿದ್ದರು. 
ನ್ಯೂಸ್

ಸಂವಿಧಾನ ಮಹತ್ವ ಸಾರುವ ಮೆರವಣಿಗೆಗೆ ಚಾಲನೆ

ನಂಜನಗೂಡು: ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರ 113ನೇ ಜಯಂತಿಯನ್ನು ಸಂವಿಧಾನದ ಮಹತ್ವವನ್ನು ಜನರಿಗೆ ತಿಳಿಸಿಕೊಡುವ ಮೂಲಕ ನಂಜನಗೂಡಿನಲ್ಲಿ ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದೆ ಎಂದು ಶಾಸಕ ದರ್ಶನ್ ಧ್ರುವನಾರಾಯಣ್ ಹೇಳಿದರು.

ನಗರದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಯುವಕ ಸಂಘಗಳ ಒಕ್ಕೂಟದಿಂದ ಬುಧವಾರ ಆಯೋಜಿಸಿದ್ದ ಅಂಬೇಡ್ಕರ್ ಜಯಂತ್ಯುತ್ಸವ ಪ್ರಯುಕ್ತ ನಗರದ ಸರ್ಕಾರಿ ಬಾಲಕರ ಪದವಿಪೂರ್ವ ಕಾಲೇಜು ಮುಂಭಾಗದಿಂದ ಹೊರಟ ಆಕರ್ಷಕ ಮೆರವಣಿಗೆ ಉದ್ಘಾಟಿಸಿ ಮಾತನಾಡಿದರು.

ಸಂಸದ ಸುನೀಲ್ ಬೋಸ್, ವಿಧಾನಪರಿಷತ್ ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯ, ಶಾಸಕರಾದ ಅನಿಲ್ ಚಿಕ್ಕಮಾದು, ದರ್ಶನ್ ಧ್ರುವನಾರಾಯಣ್ ಬಾಬಾ ಸಾಹೇಬರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ’ಸಮಾನತೆಯೆಡೆಗೆ ನಮ್ಮ ನಡಿಗೆ’ ಪಾದಯಾತ್ರೆಗೆ ಚಾಲನೆ ನೀಡಿದರು.

ಮೆರವಣಿಗೆಯಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಭಾವಚಿತ್ರದೊಂದಿಗೆ, ಸಂವಿಧಾನ, ಕಾನೂನು ಅರಿವು ಹಾಗೂ ಸಾಮಾಜಿಕ ಜಾಗೃತಿಯನ್ನು ಬಿಂಬಿಸುವ ಸ್ತಬ್ಧಚಿತ್ರಗಳು ಸಾಗುವ ಮೂಲಕ ಆಕರ್ಷಣೆ ಹೆಚ್ಚಿಸಿದವು. ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜು ಮುಂಭಾಗದಿಂದ ಹೊರಟ ಆಕರ್ಷಕ ಮೆರವಣಿಗೆ ಆರ್‌ಪಿ. ರಸ್ತೆ, ಬಜಾರ್ ರಸ್ತೆ ಮೂಲಕ ಸಾಗಿ ಶ್ರೀಕಂಠೇಶ್ವರ ಸ್ವಾಮಿ ದೇವಾಲಯದ ಬಳಿ ನಿರ್ಮಿಸಲಾಗಿದ್ದ ವೇದಿಕೆ ಸಮೀಪ ಮುಕ್ತಾಯಗೊಂಡಿತು.

ಮೆರವಣಿಗೆ ಹೊರಟ ವೇಳೆ ಮಾಜಿ ಶಾಸಕರಾದ ಕಳಲೆ ಕೇಶವಮೂರ್ತಿ, ಬಿ.ಹರ್ಷವರ್ಧನ್, ರಾಜ್ಯ ಕಾಂಪೋಸ್ಟ್ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಎಸ್.ಮಹದೇವಯ್ಯ, ವಾಲ್ಮೀಕಿ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಎಸ್.ಸಿ.ಬಸವರಾಜು, ಡಾ.ಶಿವರಾಮ್ ಸೇರಿದಂತೆ ಡಾ.ಬಿ.ಆರ್.ಅಂಬೇಡ್ಕರ್ ಯುವ ಸಂಘದ ಪದಾಧಿಕಾರಿಗಳು ಹಾಗೂ ದಲಿತ ಸಂಘಟನೆಗಳ ಮುಖಂಡರು ಭಾಗಿಯಾಗಿದ್ದರು.