ಯಳಂದೂರು ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಭವನದ ಮುಂಭಾಗದಲ್ಲಿರುವ ಅಂಬೇಡ್ಕರ್ ಪುತ್ಥಳಿಗೆ ಶುಕ್ರವಾರ ಪುಷ್ಪಾರ್ಚನೆ ಮಾಡುವ ಮೂಲಕ ಸಂವಿಧಾನ ಪೀಠಿಕೆ ಓದು ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಶಾಸಕ ಎ.ಆರ್.ಕೃಷ್ಣಮೂರ್ತಿ, ತಹಸೀಲ್ದಾರ್ ಜಯಪ್ರಕಾಶ್, ಪಪಂ ಇಒ ಮಹೇಶ್‌ಕುಮಾರ್ ಇತರರಿದ್ದರು. 
ನ್ಯೂಸ್

ಸಂವಿಧಾನ ಪೀಠಿಕೆಯೇ ನಮ್ಮ ಜೀವಾಳ

ಯಳಂದೂರು: ಸಂವಿಧಾನ ಪೀಠಿಕೆಯಲ್ಲಿರುವ ಅಂಶಗಳೇ ನಮ್ಮೆಲ್ಲರ ಜೀವಾಳವಾಗಿದ್ದು ಇಡೀ ದೇಶದ ಹೆಮ್ಮೆ ನಮ್ಮ ಸಂವಿಧಾನ. ಎಲ್ಲರೂ ಇದನ್ನು ಗೌರವಿಸಬೇಕು ಎಂದು ಶಾಸಕ ಎ.ಆರ್.ಕೃಷ್ಣಮೂರ್ತಿ ಕರೆ ನೀಡಿದರು.

ಪಟ್ಟಣದ ಡಾ.ಬಿ.ಆರ್. ಅಂಬೇಡ್ಕರ್ ಭವನದ ಮುಂಭಾಗದಲ್ಲಿ ಶುಕ್ರವಾರ ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನದ ಅಂಗವಾಗಿ ಹಮ್ಮಿಕೊಂಡಿದ್ದ ಸಂವಿಧಾನ ಪೀಠಿಕೆ ಓದುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಭಾರತದ ಸಂವಿಧಾನದ ಪೀಠಿಕೆ ಓದುವ ಬೃಹತ್ ಕಾರ್ಯಕ್ರಮ ಆಯೋಜಿಸಲು ರಾಜ್ಯ ಸರ್ಕಾರ ನಿರ್ಧರಿಸಿದ್ದು, ಇದೊಂದು ಐತಿಹಾಸಿಕ ಕ್ಷಣವಾಗಿದೆ. ಅಂಬೇಡ್ಕರ್ ವಿರಚಿತ ಸಂವಿಧಾನ ನಮ್ಮ ರಾಷ್ಟ್ರದ ಹೆಮ್ಮೆ. ಇಡೀ ವಿಶ್ವವೇ ನಮ್ಮ ಸಂವಿಧಾನಕ್ಕೆ ಗೌರವ ನೀಡುವಂತೆ ಇದರ ರಚನೆಯಾಗಿದೆ. ಇದರ ಪೀಠಿಕೆಯನ್ನು ಸರ್ಕಾರಿ ಕಾರ್ಯಕ್ರಮವಾಗಿ ರೂಪಿಸಿದ್ದು 2.25 ಕೋಟಿ ಜನರು ಆನ್‌ಲೈನ್‌ನಲ್ಲಿ ಇದನ್ನು ನೋಂದಣಿ ಮಾಡಿಕೊಂಡಿರುವುದು ಇದೊಂದು ದಾಖಲೆಯಾಗಲಿದೆ ಎಂದರು.

ಅಧಿಕಾರಿಗಳು, ವಿದ್ಯಾರ್ಥಿಗಳಿಂದ ಸಂವಿಧಾನ ಓದು: ನಂತರ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಹಮ್ಮಿಕೊಂಡಿದ್ದ ಸಂವಿಧಾನ ಓದು ಕಾರ್ಯಕ್ರಮದಲ್ಲಿ ನೂರಾರು ಸಂಖ್ಯೆಯಲ್ಲಿ ಶಾಲಾ ಕಾಲೇಜಿನ ವಿದ್ಯಾರ್ಥಿಗಳು, ವಿವಿಧ ಇಲಾಖೆಯ ಅಧಿಕಾರಿಗಳು ಪೀಠಿಕೆಯನ್ನು ಓದಿದರು. ಉಪನ್ಯಾಸಕಿ ಶ್ವೇತಾ ಸಂವಿಧಾನ ಪೀಠಿಕೆಯ ಅರ್ಥವನ್ನು ಮಕ್ಕಳಿಗೆ ಬೋಧಿಸಿದರು.

ತಹಸೀಲ್ದಾರ್ ಜಯಪ್ರಕಾಶ್, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ರಾಜೇಶ್, ಪಪಂ ಮುಖ್ಯಾಧಿಕಾರಿ ಮಹೇಶ್‌ಕುಮಾರ್, ಪಿಎಸ್‌ಐ ಚಂದ್ರಹಾಸನಾಯಕ್, ಪಶು ಇಲಾಖೆಯ ಸಹಾಯಕ ನಿರ್ದೇಶಕ ಶಿವರಾಜು ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ರಾಜು, ಪಪಂ ಸದಸ್ಯರಾದ ಮಹೇಶ್, ವೈ.ಜಿ.ರಂಗನಾಥ, ಪ್ರಭಾವತಿ, ಮಂಜು, ಜಿಪಂ ಮಾಜಿ ಉಪಾಧ್ಯಕ್ಷ ಜೆ. ಯೋಗೇಶ್ ನರೇಗಾ ವ್ಯವಸ್ಥಾಪಕ ಗಂಗಾಧರ್, ರೇವಣ್ಣ, ಯರಿಯೂರು ರಾಜಣ್ಣ, ಮಲ್ಲು, ಮುನವ್ವರ್ ಬೇಗ್, ಚಕ್ರವರ್ತಿ ಇತರರಿದ್ದರು.