ಕಡೂರು: ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು ತತ್ವದಡಿಯಲ್ಲಿ ರಚನೆಯಾಗಿರುವ ದೇಶದ ಸಂವಿಧಾನದ ರಕ್ಷಣೆ ನಮ್ಮೆಲ್ಲರ ಮೇಲಿದೆ ಎಂದು ಶಾಸಕ ಕೆ.ಎಸ್.ಆನಂದ್ ತಿಳಿಸಿದರು.
ಪಟ್ಟಣದ ಅಂಬೇಡ್ಕರ್ ಕ್ರೀಡಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿ, ಭಾರತದ ಸಂವಿಧಾನ ಪವಿತ್ರ ಗ್ರಂಥ. ಇಂತಹ ಸಂವಿಧಾನವನ್ನು ಬದಲಾವಣೆ ಮಾಡುವುದಾಗಿ ಕೆಲವರು ಹೇಳುತ್ತಿದ್ದು, ಅಂಥವರ ಮಾತಿಗೆ ಬೆಲೆ ನೀಡದೆ ವಿದ್ಯಾರ್ಥಿಗಳು, ಯುವಜನರು ಸಂವಿಧಾನವನ್ನು ಉಳಿಸುವ ಕೆಲಸ ಮಾಡಬೇಕು ಎಂದರು.
ಪುರಸಭಾಧ್ಯಕ್ಷ ಭಂಡಾರಿ ಶ್ರೀನಿವಾಸ್ ಮಾತನಾಡಿ, ಎಂತಹ ಸವಾಲುಗಳು ಬಂದರೂ ಪ್ರಜಾಪ್ರಭುತ್ವದ ನೆಲೆಗಟ್ಟು ಗಟ್ಟಿಯಾಗಿ ನಿಂತಿದೆ. ವೈವಿಧ್ಯತೆಯಲ್ಲಿ ಏಕತೆ ಹೊಂದಿರುವ ದೇಶದಲ್ಲಿ ಅನೇಕ ಜಾತಿ, ಮತ, ಧರ್ಮ ಹಾಗೂ ಭಾಷೆಗಳ ಜನರಿದ್ದರೂ ಇಲ್ಲಿ ಮತೀಯಭಾವ, ಪ್ರತ್ಯೇಕತೆ ಹಾಗೂ ಮೂಲಭೂತ ವಾದಗಳಿಗೆ ಅವಕಾಶವಿಲ್ಲ ಎಂದು ಹೇಳಿದರು.
ನಮ್ಮ ಸಂವಿಧಾನದ ಪ್ರಸ್ತಾವನೆಯಲ್ಲಿ ದೇಶದ ಜನಜೀವನದ ಆಶೋತ್ತರಗಳು ಅಡಗಿದೆ. ಅತ್ಯುತ್ತಮ ಸಂವಿಧಾನ ರೂಪುಗೊಳ್ಳಲು ಕಾರಣರಾದ ಅಂಬೇಡ್ಕರ್ ಅವರು ಸಮಾನತೆ, ಸಹಬಾಳ್ವೆ ಹಾಗೂ ಸಾಮಾಜಿಕ ನ್ಯಾಯವನ್ನು ಎತ್ತಿ ಹಿಡಿದಿದ್ದಾರೆ. ಜ.26 ದೇಶಪ್ರೇಮಿ ಸಂಗೊಳ್ಳಿರಾಯಣ್ಣ ಹುತಾತ್ಮರಾದ ದಿನವಾಗಿದ್ದು ಅವರ ತ್ಯಾಗ, ಬಲಿದಾನ ಯುವಜನರಿಗೆ ಸ್ಫೂರ್ತಿಯಾಗಬೇಕಿದೆ ಎಂದರು.
25ಕ್ಕೂ ಹೆಚ್ಚು ಶಾಲಾ ಮಕ್ಕಳಿಂದ ಹಾಗೂ ನಿವೃತ್ತ ಸೈನಿಕರು ಪಥಸಂಚಲನ ನಡೆಸಿದರು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಸನ್ಮಾನಿಸಲಾಯಿತು. ಪ್ರಭಾರ ತಹಸೀಲ್ದಾರ್ ಎನ್.ಆರ್.ಮಂಜುನಾಥ ಸ್ವಾಮಿ, ತಾಪಂ ಇಒ ಸಿ.ಆರ್.ಪ್ರವೀಣ್, ಸಿಪಿಐ ರಫೀಕ್, ಬಿಇಒ ಸಿದ್ಧರಾಜನಾಯ್ಕ, ಮುಖ್ಯಾಧಿಕಾರಿ ಕೆ.ಎಸ್.ಮಂಜುನಾಥ್, ಪಿಡಬ್ಲುೃಡಿ ಎಇಇ ಬಸವರಾಜನಾಯ್ಕ, ಕೆಡಿಪಿ ಸದಸ್ಯ ಗುಮ್ಮನಹಳ್ಳಿ ಅಶೋಕ್, ಗ್ಯಾರಂಟಿ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಆಸಂಧಿ ಕಲ್ಲೇಶ್ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.