ದೇಸಿರಂಗ ಸಾಂಸ್ಕೃತಿಕ ಟ್ರಸ್ಟ್ ವತಿಯಿಂದ ಜೂನ್ 22ರಂದು ಬೆಳಗ್ಗೆ 10.30ಕ್ಕೆ ರಂಗಾಯಣದ ಆವರಣದ ಬಿ.ವಿ.ಕಾರಂತ ರಂಗಚಾವಡಿಯಲ್ಲಿ ವಿಚಾರವಾದಿ, ಪ್ರಗತಿಪರ ಚಿಂತಕ ಪ್ರೊ.ಕೆ.ರಾಮದಾಸರ ನೆನಪಿನಲಿ ಸಂವಾದ, ಪುಸ್ತಕ ಬಿಡುಗಡೆ ಹಾಗೂ ಲೇಖನ ಪ್ರಶಸ್ತಿ ಪ್ರದಾನ ಸಮಾರಂಭ ಆಯೋಜಿಸಲಾಗಿದೆ ಎಂದು ಸಂಸ್ಥೆಯ ಅಧ್ಯಕ್ಷ ಕೃಷ್ಣ ಜನಮನ ತಿಳಿಸಿದರು.
ಪ್ರೊ.ಕೆ.ರಾಮದಾಸ್ ಅವರು ಈ ನಾಡು ಕಂಡ ಪ್ರಾಮಾಣಿಕವಾದ ಸಾಮಾಜಿಕ ಚಿಂತಕರಲ್ಲಿ ಒಬ್ಬರಾಗಿದ್ದರು. ಇವರ ನೆನಪಿನಲ್ಲಿ ಪ್ರತಿ ವರ್ಷ ಈ ರೀತಿಯ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಅಂದು ಹಿರಿಯ ಪತ್ರಕರ್ತ ದಿನೇಶ್ ಅಮೀನ್ ಮಟ್ಟು ಕಾರ್ಯಕ್ರಮ ಉದ್ಘಾಟಿಸುವರು. ಸಂವಾದ ಮತ್ತು ಮೇಷ್ಟ್ರ ನೆನಪು ಕಾರ್ಯಕ್ರಮದಲ್ಲಿ ಪ್ರಮುಖರಾದ ಎಲಿಯೂರು ಧನಂಜಯ, ಬಾಬುರಾಜ್, ಉಗ್ರ ನರಸಿಂಹೇಗೌಡ, ಶಿವು ಹೊಸಹಳ್ಳಿ, ಸ್ಟ್ಯಾನ್ಲಿ ಮೊದಲಾದವರು ಪಾಲ್ಗೊಳ್ಳುವರು. ರಾಜಕಾರಣದಲ್ಲಿ ನೈತಿಕತೆ ಎಂಬ ಪುಸ್ತಕವನ್ನು ಹಿರಿಯ ಹೋರಾಟಗಾರ ಆರ್.ಪಿ.ವೆಂಕಟೇಶಮೂರ್ತಿ ಬಿಡುಗಡೆಗೊಳಿಸುವರು ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಹಿಂದು ಸಮಾಜದಲ್ಲಿನ ಮೂಢನಂಬಿಕೆ ದೇಶದ ಪ್ರಗತಿಗೆ ಪೂರಕವೇ ಅಥವಾ ಮಾರಕವೇ ವಿಷಯ ಕುರಿತು ಲೇಖನ ಆಹ್ವಾನಿಸಲಾಗಿತ್ತು. ಇವುಗಳಲ್ಲಿನ ಮೂರು ಉತ್ತಮ ಲೇಖನಗಳ ಲೇಖಕರಿಗೆ ಚಿಂತಕ ರುದ್ರಪ್ಪ ಹನಗವಾಡಿ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಪ್ರಗತಿಪರ ಚಿಂತಕ ಪ್ರೊ.ಕಾಳೇಗೌಡ ನಾಗವಾರ, ಡಾ.ದಿನಮಣಿ, ಎಲಿಯೂರು ಧನಂಜಯ, ಕುಮಾರಸ್ವಾಮಿ ಹಾಜರಿದ್ದರು.