ಹನಗೋಡು: ಕೇರಳದ ಸಂಸ್ಕೃತಿ ಮತ್ತು ಸಾಂಪ್ರದಾಯಿಕ ಓಣಂ ಹಬ್ಬವನ್ನು ಇಲ್ಲಿನ ಕೇರಳಿಗರು ಸಂತಸ ಸಡಗರದಿಂದ ಆಚರಿಸಿದರು.
ಹೋಬಳಿ ಸೇರಿದಂತೆ ಇತರ ಗ್ರಾಮಗಳಲ್ಲಿ ನೆಲೆಸಿರುವ ಕೇರಳಿಗರು ತಮ್ಮ ಸಂಸ್ಕೃತಿ ಮತ್ತು ಸಂಪ್ರದಾಯದಂತೆ ಮನೆಯ ಮುಂದಿನ ಅಂಗಳದಲ್ಲಿ ಹೂವಿನ ರಂಗೋಲಿ (ಪೂಕಳಂ) ನಡುವೆ ಬೆಳಗುವ ಹಣತೆ ಇಟ್ಟು, ಸುಣ್ಣ ಬಣ್ಣ ಬಳಿದು ಶುಭ್ರವಾಗಿ ಕಂಗೊಳಿಸುವಂತೆ ಮಾಡಿದ್ದರು.
ಕೃಷಿಯ ಹಿನ್ನೆಲೆಯಲ್ಲಿ ಆಚರಿಸಲ್ಪಡುವ ಈ ಹಬ್ಬ ಗಾಳಿ, ಮಳೆಯಲ್ಲಿ ದುಡಿದು ಬೆಂಡಾದ ಜೀವಗಳಿಗೆ ಸಂತಸ ಸಂಭ್ರಮಿಸುವ ಓಣಂ ಹಬ್ಬವಾಗಿದ್ದು, ಬಲಿ ರಾಜನು ಓಣಂ ಹಬ್ಬದ ದಿನದಂದು ತನ್ನ ಪ್ರಜೆಗಳನ್ನು ಭೇಟಿ ಮಾಡಲು ಮತ್ತು ಅವರ ಎಲ್ಲ ತೊಂದರೆಗಳನ್ನು ತೊಡೆದು ಹಾಕಲು ಬರುತ್ತಾನೆ ಎಂಬ ನಂಬಿಕೆಯಿರುವ ಹಬ್ಬವಾಗಿದೆ. ಇದರೊಂದಿಗೆ ಕೃಷಿಕರು ತಮ್ಮ ಕೃಷಿಯಲ್ಲಿ ಉತ್ತಮ ಫಸಲು ಮತ್ತು ಇಳುವರಿಗಾಗಿ ಈ ಓಣಂ ಹಬ್ಬವನ್ನು ಆಚರಿಸಲಾಗುತ್ತದೆ. ಇದನ್ನು ಸುಗ್ಗಿಯ ಹಬ್ಬ ಎಂದು ಕರೆಯಲ್ಪಡುವ ಹಬ್ಬವು ಕಳೆದೆರಡು ವರ್ಷಗಳಿಂದ ಕರೊನಾದಿಂದ ಕಂಗೆಟ್ಟಿದ ಜನತೆ ಈ ಬಾರಿ ಯಾವುದೇ ಅಡೆತಡೆ ಇಲ್ಲದೆ ಮಳೆಯ ಆರ್ಭಟದ ನಡುವೆ ಕೃಷಿ ಚಟುವಟಿಕೆ ಮುಗಿಸಿ ಸಂಭ್ರಮಿಸಿದರು.