ನ್ಯೂಸ್

ಸಂಬಂಧ ಬೆಸೆಯಲು ನವೀಕೃತ ವೆಬ್‌ಸೈಟ್

ನೂತನ ಸಂಬಂಧಗಳನ್ನು ಬೆಸೆಯಲು ಆಯ್ಕೆಗಳಿಗೆ ಅವಕಾಶ ಕಲ್ಪಿಸಲು ನವೀಕೃತ ವೆಬ್‌ಸೈಟ್‌ನ್ನು ಸಿದ್ಧಪಡಿಸಲಾಗಿದೆ ಎಂದು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಹೇಳಿದರು.

ಜೆಎಸ್‌ಎಸ್ ಆಸ್ಪತ್ರೆಯ ಶ್ರೀ ರಾಜೇಂದ್ರ ಶತಮಾನೋತ್ಸವ ಸಭಾಂಗಣದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಜೆಎಸ್‌ಎಸ್‌ವಿವಾಹ ವೇದಿಕೆಯ ನವೀಕೃತ ವೆಬ್‌ಸೈಟ್‌ನ್ನು ಅನಾವರಣಗೊಳಿಸಿ ಮಾತನಾಡಿದರು.

ಜೆಎಸ್‌ಎಸ್ ವಿವಾಹ ವೇದಿಕೆ ಮೂವತ್ತು ವರ್ಷಗಳಿಂದ ನಿರಂತರವಾಗಿ ಕಾರ್ಯ ನಿರ್ವಹಿಸುತ್ತಿದೆ. ಮೈಸೂರು, ಬೆಂಗಳೂರುಗಳಲ್ಲಿ ವಧು-ವರರ ಸಮಾವೇಶಗಳನ್ನು ಏರ್ಪಡಿಸಿಕೊಂಡು ಬರಲಾಗುತ್ತಿದೆ. ಚಾಮರಾಜನಗರದಲ್ಲಿ ಸದ್ಯದಲ್ಲಿಯೇ ವ್ಯವಸ್ಥೆ ಮಾಡಲಾಗುತ್ತಿದೆ. ವಿವಾಹದ ಆಯ್ಕೆಯ ವಿಧಾನಗಳು ಕಾಲಮಾನಕ್ಕೆ ತಕ್ಕಂತೆ ಬದಲಾಗುತ್ತಿರುತ್ತವೆ. ಇಂದಿನ ದಿನಮಾನದಲ್ಲಿ ಸಮಾನ ಮನಸ್ಕರು ಮತ್ತು ಸಮಾನ ಆಲೋಚನೆಗಳನ್ನು ಹೊಂದಿರುವವರನ್ನು ಸಂಗಾತಿಗಳಾಗಿ ಪಡೆಯಲು ಇಚ್ಛಿಸುತ್ತಾರೆ. ಬದಲಾದ ಕಾಲಘಟ್ಟದಲ್ಲಿ ಆನ್‌ಲೈನ್ ವಿವಾಹ ವೇದಿಕೆಯ ಜಾಲತಾಣಗಳ ಸಹಾಯದೊಂದಿಗೆ ವಿವಾಹಗಳು ನಿಶ್ಚಯಗೊಳ್ಳುತ್ತಿವೆ. ಜೆಎಸ್‌ಎಸ್ ವಿವಾಹ ವೇದಿಕೆಯ ನವೀಕೃತ ವೆಬ್‌ಸೈಟ್‌ನಲ್ಲಿ ತಂತ್ರಜ್ಞಾನವನ್ನು ಬಳಸಿಕೊಂಡು ಎಲ್ಲ ತರಹದ ಅವಕಾಶಗಳನ್ನು ನೀಡಲಾಗಿದೆ. ಈ ವೆಬ್‌ಸೈಟ್‌ನ್ನು ಕನ್ನಡ, ತಮಿಳು, ತೆಲಗು ಮತ್ತು ಹಿಂದಿ ಭಾಷೆಗಳಿಗೂ ಸಹ ಅನುವಾದಗೊಳಿಸಿ ಗ್ರಾಮಾಂತರ ಪ್ರದೇಶಗಳಿಗೂ ತಲುಪುವಂತೆ ಮಾಡಲು ಸೂಚಿಸಲಾಗಿದೆ ಎಂದು ಹೇಳಿದರು.

ಕಾರ್ಯನಿರ್ವಾಹಕ ಕಾರ್ಯದರ್ಶಿ ಡಾ.ಸಿ.ಜಿ.ಬೆಟಸೂರಮಠ, ಕುಲಪತಿ ಡಾ.ಎಚ್.ಬಸವನಗೌಡಪ್ಪ, ಸಿ.ಶಿವಶಂಕರ್ ಮಾತನಾಡಿದರು. ಜೆಎಸ್‌ಎಸ್ ಮಹಾವಿದ್ಯಾಪೀಠದ ಕಾರ್ಯದರ್ಶಿ ಎಸ್.ಪಿ.ಮಂಜುನಾಥ್, ನಿರ್ದೇಶಕ ಆರ್.ಮಹೇಶ್ ಇತರರಿದ್ದರು.