ನ್ಯೂಸ್

ಸಂಪೂರ್ಣ ಸಾಕ್ಷರತೆ ಸಾಧಿಸಲು ಶ್ರಮಿಸೋಣ

ಹುಣಸೂರು: ತಾಲೂಕಿನಲ್ಲಿ 2011ರ ಜನಗಣತಿ ಪ್ರಕಾರ ಸಾಕ್ಷರತೆ ಪ್ರಮಾಣ ಶೇ.67.02 ಆಗಿದ್ದು, ಶೇ.100 ಸಾಕ್ಷರತೆಗಾಗಿ ಎಲ್ಲರೂ ಶ್ರಮಿಸೋಣ ಎಂದು ತಾಲೂಕು ಸಾಕ್ಷರತಾ ನೋಡಲ್ ಅಧಿಕಾರಿ ಕೆ.ಸಂತೋಷ್‌ಕುಮಾರ್ ಮನವಿ ಮಾಡಿದರು.

ನಗರದ ಕ್ಷೇತ್ರ ಸಮನ್ವಯಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಸಾಕ್ಷರತಾ ಸ್ವಯಂ ಬೋಧಕರಿಗೆ ಎರಡು ದಿನಗಳ ತರಬೇತಿ ಕಾರ್ಯಾಗಾರದಲ್ಲಿ ಸಾಕ್ಷರತಾ ಕರಪತ್ರಗಳನ್ನು ಬಿಡುಗಡೆಗೊಳಿಸಿ ಮಾತನಾಡಿದರು.

ಮೈಸೂರು ಜಿಲ್ಲೆಯು 2011ರ ಜನಗಣತಿ ಪ್ರಕಾರ 65.38 ಸಾಕ್ಷರತೆಯನ್ನು ಹೊಂದಿದೆ. ಹುಣಸೂರು ತಾಲೂಕು 67.02 ಸಾಕ್ಷರತೆ ಹೊಂದಿದ್ದು, ಪ್ರತಿಶತ ಪ್ರಗತಿ ಸಾಧಿಸಲು ಸಾಧ್ಯವಾಗದಿರುವುದು ನಮ್ಮೆಲ್ಲರಿಗೂ ಸವಾಲಾಗಿದೆ. ಚಂದ್ರಯಾನ-3 ಯೋಜನೆ ಕೈಗೊಂಡ ನಾವು ಇಂದಿಗೂ ಶೇ.100 ಸಾಕ್ಷರತೆ ಸಾಧಿಸದಿರುವುದು ವಿಷಾದನೀಯ. ಶಿಕ್ಷಣ ಇಲಾಖೆ ಜತೆಗೆ ಎಲ್ಲ ಜನಪ್ರತಿನಿಧಿಗಳು, ಸ್ವಯಂ ಬೋಧಕರು, ಯುವ ವಿದ್ಯಾವಂತರು, ಸಂಘ-ಸಂಸ್ಥೆಗಳು ಹಾಗೂ ನಾಗರಿಕ ಸಮಾಜ ಕೈ ಜೋಡಿಸಿ ಸಂಪೂರ್ಣ ಸಾಕ್ಷರತಾ ತಾಲೂಕು ಮಾಡಲು ಸಹಕರಿಸುವಂತೆ ಮನವಿ ಮಾಡಿದರು.

ಈ ಯೋಜನೆಯ ಮೂಲಕ ಹರವೆ, ಗಾವಡಗೆರೆ, ಚಲ್ಲಹಳ್ಳಿ ಗ್ರಾಮ ಪಂಚಾಯಿತಿಗಳ ಹರವೆ, ಹರವೆ ರಾಮೇನಹಳ್ಳಿ, ಹರವೆ ಕಲ್ಲಹಳ್ಳಿ, ಚಿಟ್ಟಿಕ್ಯಾತನಹಳ್ಳಿ, ಚಲ್ಲಹಳ್ಳಿ, ಬೆಂಕಿಪುರ, ತಿಪ್ಪೂರು, ಮಹದೇವಪುರ, ಗೋಹಳ್ಳಿ, ಹಳ್ಳಿಕೆರೆ, ಗಾವಡಗೆರೆ, ತೊಂಡಾಳು, ಹುಲ್ಯಾಳು ಗ್ರಾಮಗಳಲ್ಲಿ 1067 ಅನಕ್ಷರಸ್ಥರನ್ನು ಗುರುತಿಸಲಾಗಿದೆ. ಇವರಿಗೆ 53 ಸ್ವಯಂಬೋಧಕರ ಮೂಲಕ ಕಲಿಕಾ ಕೇಂದ್ರಗಳಲ್ಲಿ ಬೆಳಗ್ಗೆ ಮತ್ತು ಸಂಜೆ ಹಾಗೂ ಬಿಡುವಿನ ವೇಳೆಯಲ್ಲಿ ತರಗತಿ ನಡೆಸಲಾಗುತ್ತಿದೆ. ಆಗಸ್ಟ್ 6 ರಂದು ಅನಕ್ಷರಸ್ಥ ಕಲಿಕಾರ್ಥಿಗಳ ಮೌಲ್ಯಮಾಪನ ಕಾರ್ ಆಯೋಜನೆಗೊಂಡಿದೆ ಎಂದು ವಿವರಿಸಿದರು.

ಗ್ರಾಮದ ಸರ್ಕಾರಿ ಶಾಲೆಗಳಲ್ಲಿ ಮೌಲ್ಯಮಾಪನ ಕೇಂದ್ರ ಸ್ಥಾಪಿಸಿದ್ದು, ಬೆಳಗ್ಗೆ 8.30 ರಿಂದ ಸಂಜೆ 5.30ರವರೆಗೆ ಪರೀಕ್ಷಾರ್ಥಿಗಳು ಮೂರು ಅವಧಿಯಲ್ಲಿ ಅನುಕೂಲವಾದ ಸಮಯದಲ್ಲಿ ಬಂದು ಪರೀಕ್ಷೆ ಬರೆಯಬಹುದು. ಉತ್ತೀರ್ಣರಾದ ಎಲ್ಲರಿಗೂ ಪ್ರಮಾಣ ಪತ್ರ ನೀಡಲಾಗುವುದು. ನವ ಭಾರತ ಸಾಕ್ಷರತಾ ಕಾರ್ಯಕ್ರಮ (ಕೆಎಂಐಪಿ) ಮತ್ತು ಲಿಂಕ್ ಡಾಕ್ಯುಮೆಂಟ್ ಕಾರ್ಯಕ್ರಮಗಳ ಮೂಲಕ ತಾಲೂಕಿನ 13 ಗ್ರಾಮಗಳು ಮತ್ತು ಹುಣಸೂರು ಪಟ್ಟಣವನ್ನು ಆಯ್ಕೆ ಮಾಡಿ, ಕಲಿಕಾ ಕೇಂದ್ರಗಳ ಮೂಲಕ ಸಾಕ್ಷರತಾ ಕಾರ್ಯಕ್ರಮ ನಡೆಸಲಾಗುತ್ತಿದೆ ಎಂದು ತಿಳಿಸಿದರು.
ರಾಜ್ಯ ಸಾಕ್ಷರತಾ ಸಂಪನ್ಮೂಲ ವ್ಯಕ್ತಿಗಳಾದ ಸಿ.ಎಸ್.ಮಹೇಶ್, ಡಾ.ಮಾದುಪ್ರಸಾದ್, ಬಿಆರ್‌ಪಿ ಎಂ.ನಂದೀಶ್, ಬಿ.ಪ್ರತಿಮಾ, ಸುಷ್ಮಾ ಹಾಗೂ ಬಿ.ಐ.ಇ.ಆರ್.ಟಿ. ಸೋಮಶೇಖರ್, ತ್ರಿನೇಶ, ಎಚ್.ಜೆ.ಪ್ರಭಾಕರ, ಎಚ್.ಪಿ.ವೀರಭದ್ರಪ್ಪ ಹಾಜರಿದ್ದರು.