ನ್ಯೂಸ್

ಸಂಪಾದಕೀಯ | ಸಂಯಮ ಪ್ರದರ್ಶಿಸಬೇಕು; ಶಾಂತಿ, ಸೌಹಾರ್ದಕ್ಕೆ ಧಕ್ಕೆ ಆಗದಿರಲಿ

ಹಿಜಾಬ್ ಪರ-ವಿರೋಧ ಅಭಿಪ್ರಾಯಗಳಿಂದಾಗಿ ರಾಜ್ಯದಲ್ಲಿ ಕೆಲ ದಿನಗಳಿಂದ ನಡೆಯುತ್ತಿರುವ ವಿದ್ಯಮಾನಗಳು ಗೊತ್ತೇ ಇವೆ. ಈ ನಡುವೆ, ಶಿವಮೊಗ್ಗದಲ್ಲಿ ಬಜರಂಗದಳ ಕಾರ್ಯಕರ್ತನ ಹತ್ಯೆ ನಡೆದಿದ್ದು, ನಗರ ಪ್ರಕ್ಷುಬ್ಧವಾಗಿದೆ. ಇಂಥ ಸೂಕ್ಷ್ಮ ಸಂದರ್ಭದಲ್ಲಿ ರಾಜಕೀಯ ಪಕ್ಷಗಳು, ಸಂಘಸಂಸ್ಥೆಗಳು ಮತ್ತು ಜನಸಾಮಾನ್ಯರು- ಹೀಗೆ ಎಲ್ಲರೂ ಸಂಯಮವನ್ನು ಪ್ರದರ್ಶಿಸಬೇಕಾದುದು ಮುಖ್ಯ; ಪರಿಸ್ಥಿತಿ ಸಹಜತೆಗೆ ಬರಲು ಇದು ಅತ್ಯಗತ್ಯ. ಅದಿಲ್ಲವಾದಲ್ಲಿ ನಾಡಿನ ಶಾಂತಿಗೆ ಭಂಗ ಬಂದು ಅದರ ಪರಿಣಾಮ ಜನರ ಮೇಲೂ ಆಗುತ್ತದೆ. ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ಧರಿಸಿಕೊಂಡು ಹೋಗಬಹುದೇ ಅಥವಾ ಇಲ್ಲವೇ ಎಂಬ ಪ್ರಶ್ನೆ ಈಗ ರಾಜ್ಯ ಉಚ್ಚ ನ್ಯಾಯಾಲಯದ ವಿಚಾರಣೆಯಲ್ಲಿದೆ. ಈ ಕುರಿತು ಪೂರ್ಣಪೀಠವೇ ವಿಚಾರಣೆ ನಡೆಸುತ್ತಿದ್ದು, ವಿವಿಧ ಪಕ್ಷಗಾರರು ವಾದಮಂಡನೆ ಮಾಡುತ್ತಿದ್ದಾರೆ.

ಇನ್ನೇನು ಕೆಲ ದಿನಗಳಲ್ಲಿ ತೀರ್ಪನ್ನು ನಿರೀಕ್ಷಿಸಬಹುದಾಗಿದೆ. ಹೀಗಾಗಿ ತೀರ್ಪು ಬರುವವರೆಗೂ ಎಲ್ಲರೂ ಸಮಾಧಾನದಿಂದಿರಬೇಕು. ಈ ಹಂತದಲ್ಲಿ ಕ್ರಿಯೆ-ಪ್ರತಿಕ್ರಿಯೆಯಿಂದ ಪರಿಸ್ಥಿತಿ ಇನ್ನಷ್ಟು ಹದಗೆಡುತ್ತದೆಯೇ ವಿನಾ ಪ್ರಯೋಜನ ಆಗುವುದಿಲ್ಲ. ನ್ಯಾಯಾಲಯವು ಸಂವಿಧಾನ, ರೂಢಿಗತ ಆಚರಣೆ.. ಹೀಗೆ ವಿವಿಧ ಅಂಶಗಳನ್ನು ಪರ್ಯಾಲೋಚಿಸಿ ನಿರ್ಣಯಕ್ಕೆ ಬರುವುದರಿಂದ ಆ ತೀರ್ಪನ್ನು ಎಲ್ಲರೂ ಗೌರವಿಸಬೇಕಾಗುತ್ತದೆ. ಪ್ರಜಾಪ್ರಭುತ್ವದಲ್ಲಿ ವ್ಯಕ್ತಿಗತ ನೆಲೆಯಲ್ಲಿ ಅವರವರ ಇಷ್ಟದ ಧರ್ಮ ಮತ್ತು ಆಚರಣೆಗಳನ್ನು ಅನುಸರಿಸಿಕೊಂಡು ಹೋಗುವುದಕ್ಕೆ ಅವಕಾಶ ಇದ್ದೇ ಇದೆ; ಸಂವಿಧಾನವೇ ಈ ಹಕ್ಕನ್ನು ನೀಡಿದೆ. ಆದರೆ ಸಾರ್ವಜನಿಕವಾಗಿ ಕೆಲವು ರೀತಿರಿವಾಜುಗಳು ಇರುತ್ತವೆ. ಆ ವಿಷಯದಲ್ಲಿ ಅಭಿಪ್ರಾಯಭೇದಗಳು ವ್ಯಕ್ತವಾದರೆ ಅದನ್ನು ಚರ್ಚೆ ಮೂಲಕ, ಸೌಹಾರ್ದದಿಂದ ಬಗೆಹರಿಸಿಕೊಳ್ಳುವ ಯತ್ನವಾಗಬೇಕೆ ಹೊರತು ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸುವಂತಹ ಹೆಜ್ಜೆಗಳನ್ನು ಇರಿಸಬಾರದು. ಶಿವಮೊಗ್ಗ ಘಟನೆ ಹಿನ್ನೆಲೆಯಲ್ಲಿ ಕೂಡ ಸಂಯಮವನ್ನು ಪ್ರದರ್ಶಿಸಿ, ಪರಿಸ್ಥಿತಿ ವಿಕೋಪಕ್ಕೆ ಹೋಗದಂತೆ ನೋಡಿಕೊಳ್ಳಬೇಕಿದೆ. ಪೊಲೀಸರು ಈವರೆಗೆ ಇಬ್ಬರು ಆರೋಪಿಗಳನ್ನು ಬಂಧಿಸಿದ್ದು, ಪ್ರಕರಣದಲ್ಲಿ ಭಾಗಿಯಾಗಿರಬಹುದಾದ ಇತರರ ಬಗ್ಗೆ ಮಾಹಿತಿ ಕಲೆಹಾಕುತ್ತಿದ್ದಾರೆ. ವಿಶೇಷವಾಗಿ ರಾಜಕೀಯ ಪಕ್ಷಗಳು ಕೇವಲ ಪಕ್ಷ-ಸಿದ್ಧಾಂತದ ನೆಲೆಯಲ್ಲಿ ಇದನ್ನು ನೋಡದೆ, ತಪ್ಪಿತಸ್ಥರನ್ನು ಹಿಡಿದು ಕಾನೂನು ಕ್ರಮಕ್ಕೆ ಒಳಪಡಿಸುವಲ್ಲಿ ಸರ್ಕಾರಕ್ಕೆ ಸಹಕರಿಸಬೇಕಿದೆ.

ಕರೊನೊತ್ತರದ ದಿನಗಳಲ್ಲಿ ಜನರು ಈಗಷ್ಟೇ ಚೇತರಿಸಿಕೊಳ್ಳುತ್ತಿದ್ದಾರೆ. ಕರೊನಾದಿಂದಾಗಿ ಬಹುತೇಕ ಎಲ್ಲರೂ ನಷ್ಟಕಷ್ಟಗಳಿಗೆ ಈಡಾಗಿದ್ದು, ಈ ಹಂತದಲ್ಲಿ ಜನಜೀವನವನ್ನು ಮಾಮೂಲು ಸ್ಥಿತಿಗೆ ತರುವತ್ತ ಗಮನ ಇರಬೇಕಿದೆ. ಈ ಹಂತದಲ್ಲಿ ಸಮಾಜದ ವಿವಿಧ ಜನವರ್ಗಗಳ ನಡುವೆ ಸಾಮರಸ್ಯ ಅತಿಮುಖ್ಯವಾಗುತ್ತದೆ. ಇನ್ನೊಂದೆಡೆ, ವಿದ್ಯಾರ್ಥಿಗಳಿಗೆ ವಾರ್ಷಿಕ ಪರೀಕ್ಷೆಗಳು ಸನಿಹವಾಗುತ್ತಿವೆ. ಕರೊನಾದಿಂದಾಗಿ ಸುಮಾರು ಎರಡು ವರ್ಷಗಳಿಂದ ಶಾಲಾಕಾಲೇಜಿಗೆ ಹೋಗದೆ ವಿದ್ಯಾರ್ಥಿಗಳ ಮೇಲೆ ಹಲವು ಬಗೆಗಳಲ್ಲಿ ಪರಿಣಾಮ ಆಗಿದೆ. ಹೀಗಿರುವಾಗ ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಅಹಿತಕರ ಘಟನೆಗಳು ನಡೆದರೆ ಮತ್ತೆ ವ್ಯಾಸಂಗಕ್ಕೆ ತೊಂದರೆಯಾಗುವುದಲ್ಲದೆ, ಅವರ ಮನಸ್ಸಿನ ಮೇಲೂ ಪ್ರಭಾವ ಆಗುತ್ತದೆ. ವಿಶೇಷವಾಗಿ ಎಸ್​ಎಸ್​ಎಲ್​ಸಿ, ದ್ವಿತೀಯ ಪಿಯುಸಿ ಮುಂತಾದ ತರಗತಿಗಳಲ್ಲಿರುವ ವಿದ್ಯಾರ್ಥಿಗಳು ಒತ್ತಡದಲ್ಲಿದ್ದಾರೆ. ಕೆಲ ಘಟನೆಗಳನ್ನು ಹೊರತುಪಡಿಸಿ ಕರ್ನಾಟಕ ಶಾಂತಿಪ್ರಿಯ ರಾಜ್ಯವೆಂಬ ಹೆಗ್ಗಳಿಕೆಯನ್ನು ಹೊಂದಿದೆ. ಈ ಹಿರಿಮೆಯನ್ನು ಕಾಪಿಟ್ಟುಕೊಂಡು ಹೋಗುವ ವಿವೇಚನೆಯನ್ನು ಮೆರೆಯಬೇಕಾದುದು ಸದ್ಯದ ಅನಿವಾರ್ಯ ಅಗತ್ಯ.