ನ್ಯೂಸ್

ಸಂಪಾದಕೀಯ: ವಾಸ್ತವ ಗೊತ್ತಾಗಬೇಕು, ಕರೊನಾ ಮೂಲ ಅರಿಯಲು ತನಿಖೆ ಸ್ವಾಗತಾರ್ಹ

ಮಾರಕ ಕರೊನಾ ಸೋಂಕು ಜಗತ್ತಿನಾದ್ಯಂತ ಮೂರು ಲಕ್ಷಕ್ಕೂ ಹೆಚ್ಚು ಜನರನ್ನು ಬಲಿ ಪಡೆದಿದೆ. ಅಲ್ಲದೆ, ಜಗತ್ತಿನೆಲ್ಲೆಡೆ ಅಲ್ಲೋಲಕಲ್ಲೋಲ ಸೃಷ್ಟಿಯಾಗಿದ್ದು, ಲಾಕ್​ಡೌನ್ ಪರಿಣಾಮ ಆರ್ಥಿಕತೆಯೂ ನೆಲ ಕಚ್ಚಿದೆ. ಈ ಸಂಕಷ್ಟ ಜಗತ್ತನ್ನೇ ಬೆಚ್ಚಿಬೀಳಿಸಿದ್ದರೂ, ಕರೊನಾದ ಮೂಲ ಯಾವುದು, ಅದು ಹೇಗೆ ವೇಗವಾಗಿ ಹರಡಿಕೊಂಡಿತು ಎಂಬುದು ನಿಗೂಢವಾಗಿಯೇ ಉಳಿದುಕೊಂಡಿದೆ. ಮೊದಲು ಕರೊನಾ ಸೋಂಕು ಕಾಣಿಸಿಕೊಂಡಿದ್ದು ಚೀನಾದಲ್ಲಿ. ಆದರೆ, ಆ ದೇಶ ಯಾವುದೇ ಮಾಹಿತಿ ನೀಡುತ್ತಿಲ್ಲ, ವಾಸ್ತವವನ್ನು ಬಿಟ್ಟುಕೊಡುತ್ತಿಲ್ಲ. ಒಂದು ಮೂಲದ ಪ್ರಕಾರ ಈ ವೈರಸ್ ಚೀನಾದ ವುಹಾನ್ ಮಾರುಕಟ್ಟೆಯಿಂದ ಹರಡಿದೆ. ಮತ್ತೊಂದು ಮೂಲ ದಂತೆ, ಕರೊನಾ ಪ್ರಬಲ ಜೈವಿಕ ಅಸ್ತ್ರವಾಗಿದ್ದು, ಚೀನಾದ ಪ್ರಯೋಗಾಲಯದಲ್ಲೇ ಇದನ್ನು ತಯಾರು ಮಾಡಲಾಗಿದೆ. ಈ ಅನುಮಾನ, ಗೊಂದಲಗಳಿಗೆ ಉತ್ತರಿಸಬೇಕಿದ್ದ ಚೀನಾ ಜಾಣಮೌನ ತಳೆದಿರುವುದು ವಿಶ್ವದ ಬಹುತೇಕ ರಾಷ್ಟ್ರಗಳಲ್ಲಿ ಆಕ್ರೋಶ ಹುಟ್ಟಿಸಿದೆ. ಹಾಗಾಗಿಯೇ, ವಿಶ್ವ ಆರೋಗ್ಯ ಸಂಸ್ಥೆ ವೇದಿಕೆಯಲ್ಲಿ ಚೀನಾದ ವಿರುದ್ಧ ಒಂದಾಗಿರುವ ಜಾಗತಿಕ ಸಮುದಾಯ ಕರೊನಾ ಮೂಲದ ಕುರಿತಂತೆ ತನಿಖೆಗೆ ಪಟ್ಟು ಹಿಡಿದಿದೆ.

ಡಬ್ಲ್ಯುಎಚ್​ಒದ ವಿಶ್ವ ಆರೋಗ್ಯ ಸಭೆಯಲ್ಲಿ ಐರೋಪ್ಯ ಒಕ್ಕೂಟ ಚೀನಾದ ವಿರುದ್ಧ ಕರಡು ನಿರ್ಣಯ ಅಂಗೀಕರಿಸಿದೆ. ಈ ಕರಡಿಗೆ ಭಾರತ, ಜಪಾನ್, ಬ್ರಿಟನ್, ನ್ಯೂಜಿಲೆಂಡ್, ದಕ್ಷಿಣ ಕೊರಿಯಾ, ಬ್ರೆಜಿಲ್, 54 ರಾಷ್ಟ್ರಗಳ ಆಫ್ರಿಕಾ ಕೂಟ ಸೇರಿ 123 ದೇಶಗಳು ಸಹಿ ಹಾಕಿವೆ ಎಂಬುದು ಗಮನಾರ್ಹ. ಅಮೆರಿಕ ಈಗಾಗಲೇ ಡಬ್ಲ್ಯುಎಚ್​ಒಕ್ಕೆ ನೀಡುತ್ತಿದ್ದ ಅನುದಾನವನ್ನು ಕಡಿತಗೊಳಿಸಿದ್ದು, ಚೀನಾ ಸತ್ಯವನ್ನು ಮುಚ್ಚಿಡುತ್ತಿರುವ ವಿರುದ್ಧ ಆಕ್ರೋಶ ಹೊರಹಾಕಿದೆ. ವಿಶ್ವ ಆರೋಗ್ಯ ಸಂಸ್ಥೆ ಕಡೆಗೂ, ಕರೊನಾ ಮೂಲದ ಕುರಿತಂತೆ ಸ್ವತಂತ್ರ ತನಿಖೆ ನಡೆಸಲು ನಿರ್ಧರಿಸಿದ್ದು, ಅಂತಾರಾಷ್ಟ್ರೀಯ ದನಿಗೆ ಮನ್ನಣೆ ನೀಡಿದೆ. ಈ ನಡುವೆ, ವಿಶ್ವ ಆರೋಗ್ಯ ಸಂಸ್ಥೆಯ ಕಾರ್ಯಕಾರಿ ಸಮಿತಿಯ ಮುಖ್ಯಸ್ಥ ಸ್ಥಾನವನ್ನು ಭಾರತ ಅಲಂಕರಿಸಿರುವುದು ಸಕಾರಾತ್ಮಕ ಬೆಳವಣಿಗೆ. ಕಳೆದ ಒಂದು ವರ್ಷದಿಂದ ಜಪಾನ್ ಈ ಸ್ಥಾನದಲ್ಲಿತ್ತು. ಪ್ರಸಕ್ತ ಭಾರತ ಈ ಸ್ಥಾನವನ್ನು ತನ್ನದಾಗಿಸಿಕೊಂಡಿರುವುದರಿಂದ ಡಬ್ಲ್ಯೂಎಚ್​ಒದ ನಿರ್ಣಯ ತೆಗೆದುಕೊಳ್ಳುವುದರಲ್ಲಿ ಮಹತ್ವದ ಪಾತ್ರ ನಿರ್ವಹಿಸಲಿದೆ.

ಸೋಂಕಿನ ಮೂಲ, ಅದರ ನಿರ್ವಹಣೆ ಕುರಿತು ಹಲವು ಅನುಮಾನಗಳಿರುವುದು ನಿಜ. ಈ ಬಗ್ಗೆ ನಿಷ್ಪಕ್ಷಪಾತ ಮತ್ತು ಪರಿಣಾಮಕಾರಿಯಾದ ತನಿಖೆ ನಡೆದು ವಾಸ್ತವ ಜಗತ್ತಿನ ಮುಂದೆ ಅನಾವರಣಗೊಳ್ಳಲೇಬೇಕು. ಏಕೆಂದರೆ, ಪ್ರಸಕ್ತ ಸಮಸ್ಯೆ ಅಂತಾರಾಷ್ಟ್ರೀಯ ವಲಯವನ್ನು ಅಭಿವೃದ್ಧಿಯ ಹಾದಿಯಲ್ಲಿ ಹಲವು ವರ್ಷಗಳಷ್ಟು ಹಿಂದಕ್ಕೆ ತಳ್ಳಿಬಿಟ್ಟಿದೆ. ಜೈವಿಕಾಸ್ತ್ರವಾಗಿ ಇದನ್ನು ತಯಾರಿಸಿದ್ದರೆ ಅಥವಾ ಪ್ರಯೋಗಾಲಯದಲ್ಲಿ ಯಾವುದೋ ಪರೀಕ್ಷೆ ನಡೆಸುವ ವೇಳೆ ಅಜಾಗ್ರತೆಯಿಂದ ಸೋಂಕು ಹರಡಿದ್ದರೆ ಅದಕ್ಕೆ ಚೀನಾ ತಕ್ಕ ಬೆಲೆಯನ್ನು ತೆರಬೇಕಾಗುತ್ತದೆ ಎಂಬುದರಲ್ಲಿ ಅನುಮಾನವಿಲ್ಲ. ಆದರೆ, ಕರೊನಾ ಸೋಂಕು ನಿಯಂತ್ರಣಕ್ಕೆ ಮೊದಲ ಆದ್ಯತೆ ನೀಡಿ, ಈ ತನಿಖೆಯೂ ಸರಿಯಾದ ಹಾದಿಯಲ್ಲಿ ಸಾಗಲಿ.