ನ್ಯೂಸ್

ಸಂಪಾದಕೀಯ: ಭವಿಷ್ಯಕ್ಕೆ ದಿಕ್ಸೂಚಿ; ಸರ್ಕಾರ, ವಿದ್ಯಾರ್ಥಿಗಳು ಅಭಿನಂದನೆಗೆ ಪಾತ್ರರು

ಈ ಬಾರಿ ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಯುತ್ತೋ, ಇಲ್ಲವೋ, ಒಂದು ವೇಳೆ ಆದರೂ ಸುರಕ್ಷೆ ಹೇಗೆ ಎಂಬ ಚಿಂತೆ, ಕಳವಳದ ನೂರೆಂಟು ಪ್ರಶ್ನೆಗಳು ಕಾಡಿದ್ದುಂಟು. ತಮಿಳುನಾಡು, ತೆಲಂಗಾಣ ಸೇರಿ ಹಲವು ರಾಜ್ಯಗಳಲ್ಲಿ ಪರೀಕ್ಷೆಯನ್ನೇ ರದ್ದು ಮಾಡಲಾಯ್ತು. ‘ಕರ್ನಾಟಕದಲ್ಲೂ ಹೀಗೆ ಮಾಡಿಬಿಡಿ, ಜೀವಕ್ಕಿಂತ ಯಾವುದು ದೊಡ್ಡದು’ ಎಂಬ ಸಲಹೆಗಳೂ ಬಂದವು. ಆದರೆ, ಶೈಕ್ಷಣಿಕ ಭವಿಷ್ಯಕ್ಕೆ ದಿಕ್ಸೂಚಿಯಾದ ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಸಿಯೇ ಸಿದ್ಧ ಎಂದು ಸರ್ಕಾರ ಘೋಷಿಸಿತು. ದೇಶಾದ್ಯಂತ ಹೆಚ್ಚುತ್ತಿದ್ದ ಕರೊನಾ ಪ್ರಕರಣಗಳು ರಾಜ್ಯದಲ್ಲೂ ಏರುಗತಿಯಲ್ಲಿದ್ದವು. ಪರೀಕ್ಷೆ ನಡೆಯುವುದು ನಿಜವೇ ಎಂಬ ಪ್ರಶ್ನೆ ಕಾಡುತ್ತಲೇ ಇತ್ತು. ಶಿಕ್ಷಣ ಸಚಿವ ಸುರೇಶಕುಮಾರ್ ಕರೊನಾ ಅಬ್ಬರದ ನಡುವೆಯೂ ರಾಜ್ಯದ ಎಲ್ಲ ಶೈಕ್ಷಣಿಕ ಜಿಲ್ಲೆಗಳಿಗೆ ಭೇಟಿ ನೀಡಿ ಡಿಡಿಪಿಐ ಮತ್ತು ಇತರ ಶಿಕ್ಷಣಾಧಿಕಾರಿಗಳೊಂದಿಗೆ ಸಭೆ ನಡೆಸಿ, ಪರೀಕ್ಷೆಗೆ ಸೂಕ್ತ ಏರ್ಪಾಡು ಮಾಡಿದರು. ಅಂತೂ ಸುಸೂತ್ರವಾಗಿ ಪರೀಕ್ಷೆ ಮುಗಿದಾಗ ಎಲ್ಲರೂ ನೆಮ್ಮದಿಯ ನಿಟ್ಟುಸಿರು ಬಿಟ್ಟರು.

ಸೋಮವಾರ ಎಸ್ಸೆಸ್ಸೆಲ್ಸಿ ಫಲಿತಾಂಶ ಪ್ರಕಟವಾಗುತ್ತಿದ್ದಂತೆ ಈ ಎಲ್ಲ ಪ್ರಯತ್ನಗಳು ಸಾರ್ಥಕತೆ ಪಡೆದುಕೊಂಡಿವೆ. ಸರ್ಕಾರದ ಶ್ರಮದಷ್ಟೇ ವಿದ್ಯಾರ್ಥಿಗಳ ಆತ್ಮಸ್ಥೈರ್ಯವನ್ನೂ ಮೆಚ್ಚಬೇಕು. ಕರೊನಾ ಆತಂಕದ ನಡುವೆಯೂ ಪರೀಕ್ಷೆಯನ್ನು ಎದುರಿಸಿದ ಪರಿ ಮಾದರಿಯಾದದ್ದು. ಈ ಬಾರಿ ಶೇಕಡ 71.08ರಷ್ಟು ಫಲಿತಾಂಶ ಬಂದಿದೆ. ಪರೀಕ್ಷೆ ಬರೆದ 8.11 ಲಕ್ಷ ವಿದ್ಯಾರ್ಥಿಗಳ ಪೈಕಿ 5,82, 316 ವಿದ್ಯಾರ್ಥಿಗಳು ಉತ್ತೀರ್ಣ, 2,28,734 ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದಾರೆ. ಒಟ್ಟು 227 ಮೌಲ್ಯಮಾಪನ ಕೇಂದ್ರಗಳಲ್ಲಿ ಮೌಲ್ಯಮಾಪನ ನಡೆದಿತ್ತು. ಪ್ರತಿವರ್ಷದಂತೆ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ. ಜಿಲ್ಲೆಗಳಿಗೆ ಸಂಖ್ಯೆಯ ಬದಲು ಗ್ರೇಡ್ ನೀಡಲಾಗಿದೆ. ಚಿಕ್ಕಬಳ್ಳಾಪುರದಲ್ಲಿ ಅತಿ ಹೆಚ್ಚು ಮತ್ತು ಯಾದಗಿರಿಯಲ್ಲಿ ಅತಿ ಕಡಿಮೆ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. 501 ಸರ್ಕಾರಿ ಶಾಲೆಗಳು ಶೇಕಡ 100 ಫಲಿತಾಂಶ ಪಡೆದಿರುವುದು ಗಮನಾರ್ಹ. ಬಡತನ ಹಿನ್ನೆಲೆಯ, ಅಂಗವೈಕಲ್ಯ ಹೊಂದಿದ ಮಕ್ಕಳೂ ಅದ್ಭುತ ಎನ್ನುವಂತೆ ಸಾಧನೆ ಮಾಡಿದ್ದಾರೆ. ಓದಿನಲ್ಲಿ ಶ್ರದ್ಧೆ, ಜ್ಞಾನದ ಹಂಬಲ ಇದ್ದರೆ ಯಶಸ್ಸು ಕಠಿಣವೇನಲ್ಲ ಎಂಬುದನ್ನು ಈ ಯಶೋಗಾಥೆಗಳು ಮತ್ತೊಮ್ಮೆ ಸ್ಪಷ್ಟಪಡಿಸಿವೆ.

ಈಗ ಮುಂದಿನ ಶೈಕ್ಷಣಿಕ ಹಾದಿಯ ಮೇಲೆ ಪಾಲಕರ ಮತ್ತು ಮಕ್ಕಳ ದೃಷ್ಟಿ ನೆಟ್ಟಿದೆ. ಕರೊನಾ ಸೋಂಕು ನಿಯಂತ್ರಣಕ್ಕೆ ಬಾರದಿರುವುದರಿಂದ ಇನ್ನೂ ಕಾಲೇಜುಗಳು ಆರಂಭಗೊಂಡಿಲ್ಲ. ರಾಜ್ಯ ಸರ್ಕಾರ ಕೇಂದ್ರದ ಮಾರ್ಗಸೂಚಿಯ ನಿರೀಕ್ಷೆಯಲ್ಲಿದೆ. ಹಾಗಾಗಿ, ಯಾವಾಗ ಕಾಲೇಜ್ ಆರಂಭಗೊಳ್ಳುತ್ತವೆ, ತರಗತಿಗಳು ವಿಳಂಬವಾಗಿ ಶುರುವಾದರೆ ಪಾಠಗಳ ಗತಿ ಏನು, ಅದರ ಪರಿಣಾಮ ಪರೀಕ್ಷೆ ಮೇಲಾಗುತ್ತದೆಯೇ ಎಂಬ ಕಳವಳಗಳು ಪಾಲಕರನ್ನೂ, ವಿದ್ಯಾರ್ಥಿಗಳನ್ನೂ ಕಾಡುತ್ತಿವೆ. ಎಸ್ಸೆಸ್ಸೆಲ್ಸಿ ಪರೀಕ್ಷೆಯನ್ನು ಯಶಸ್ವಿಯಾಗಿ ನಿಭಾಯಿಸಿ, ಅಭಿನಂದನೆಗೆ ಪಾತ್ರವಾಗಿರುವ ಸರ್ಕಾರ ಮುಂದಿನ ಶೈಕ್ಷಣಿಕ ದಾರಿಯ ಬಗ್ಗೆಯೂ ಸ್ಪಷ್ಟ ಮತ್ತು ದಿಟ್ಟ ನಿಲುವನ್ನು ತಳೆಯಬೇಕಾಗಿದೆ.