ನ್ಯೂಸ್

ಸಂಪಾದಕೀಯ | ನೈತಿಕತೆಯ ಎಲ್ಲೆ ಮೀರದಿರಲಿ; ತಾಯ್ತನದ ಮಹತ್ವ ಅರಿಯಬೇಕು..

ಕಾಲದ ಓಟದಲ್ಲಿ ಹಲವು ಬದಲಾವಣೆಗಳು ಸೇರ್ಪಡೆ ಆಗುತ್ತಲೇ ಇರುತ್ತವೆ. ಆದರೆ, ಅಂಥ ಬದಲಾವಣೆಗಳು ಸಮಾಜದ ಮೌಲ್ಯಗಳಿಗೆ ಪೂರಕವಾಗಿ ಇರಬೇಕು ಎಂಬುದು ಮುಖ್ಯ. ದುಡ್ಡಿನ ಆಸೆಗೆ ನೈತಿಕತೆಯ ಗೆರೆ ದಾಟಬಾರದು. ಕೆಲ ಸೌಲಭ್ಯ ಅಥವಾ ಪರ್ಯಾಯ ಆಯ್ಕೆಗಳನ್ನು ದುರುಪಯೋಗ ಪಡಿಸಿಕೊಂಡಾಗ ಅವುಗಳ ಮೂಲಉದ್ದೇಶಕ್ಕೆ ಧಕ್ಕೆ ಬರುತ್ತದೆ ಎಂಬುದನ್ನು ಮರೆಯುವಂತಿಲ್ಲ. ಇತ್ತೀಚಿನ ವರ್ಷಗಳಲ್ಲಿ ‘ಬಾಡಿಗೆ ತಾಯ್ತನ’ ತುಂಬ ಚರ್ಚೆಯಲ್ಲಿರುವ ವಿಷಯ. ಮಕ್ಕಳು ಆಗದಿದ್ದವರು, ಇತರ ಸಮಸ್ಯೆಗಳಿಂದ ಮಕ್ಕಳಿಗೆ ಜನ್ಮ ನೀಡಲಾಗದವರು, ಬಾಡಿಗೆ ತಾಯಿಯ ಮೂಲಕ ಮಗುವನ್ನು ಪಡೆಯುವ ಕ್ರಮ ಇದು. ಕಾಳಜಿ, ಒಂದಿಷ್ಟು ಭಾವನಾತ್ಮಕ ಕಳಕಳಿಯೊಂದಿಗೆ ಆರಂಭವಾದ ಈ ಬಾಡಿಗೆ ತಾಯ್ತನದ ಪರಿಕಲ್ಪನೆ ಬರಬರುತ್ತ ದಂಧೆಯ ಸ್ವರೂಪ ತಳೆದಿದ್ದು, ಲಕ್ಷಾಂತರ ರೂಪಾಯಿಯ ವ್ಯವಹಾರ ನಡೆಯುವ ನಿದರ್ಶನಗಳುಂಟು. ಹಾಗಾಗಿಯೇ, ಇದಕ್ಕೆ ಸ್ಪಷ್ಟ ಸ್ವರೂಪ, ಕಾಯ್ದೆಯ ಚೌಕಟ್ಟು, ಆ ಮುಖೇನ ಬಿಗಿ ನಿಯಮಗಳು ಇರಬೇಕು ಎಂಬ ಬೇಡಿಕೆ ಮೇಲಿಂದ ಮೇಲೆ ಕೇಳಿಬರುತ್ತಲೇ ಇತ್ತು.

ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮಹತ್ವದ ಹೆಜ್ಜೆ ಇರಿಸಿದೆ. ರಾಜ್ಯಸಭೆ ಸೂಚಿಸಿದ ತಿದ್ದುಪಡಿಯೊಂದಿಗೆ ಬಾಡಿಗೆ ತಾಯ್ತನ (ತಿದ್ದುಪಡಿ) ಮಸೂದೆ 2019ನ್ನು ಲೋಕಸಭೆ ಶುಕ್ರವಾರ ಅಂಗೀಕರಿಸಿದೆ. ರಾಜ್ಯಸಭೆಯಲ್ಲಿ ಇದು ಡಿ.14ರಂದು ಅಂಗೀಕಾರವಾಗಿತ್ತು. ಭಾರತದಲ್ಲಿ ನಿರ್ಬಂಧಿತ ಬಾಡಿಗೆ ತಾಯ್ತನಕ್ಕೆ ಮಾತ್ರ ಅವಕಾಶ ನೀಡಬೇಕು. ವಾಣಿಜ್ಯ ಬಾಡಿಗೆ ತಾಯ್ತನವನ್ನು ನಿಷೇಧಿಸಬೇಕು ಎಂದು ಕಾನೂನು ಆಯೋಗ ತನ್ನ 228ನೆ ವರದಿಯಲ್ಲಿ ಸರ್ಕಾರಕ್ಕೆ ಶಿಫಾರಸು ಮಾಡಿತ್ತು. ಹೊಸ ಮಸೂದೆಯ ಪ್ರಕಾರ, ಕಾನೂನು ಬದ್ಧವಾಗಿ ವಿವಾಹವಾಗಿರುವ ಭಾರತದ ದಂಪತಿ ಕನಿಷ್ಠ 5 ವರ್ಷ ದಾಂಪತ್ಯದ ಬಳಿಕ ಬಾಡಿಗೆ ತಾಯ್ತನವನ್ನು ಆಯ್ಕೆ ಮಾಡಿಕೊಳ್ಳಬಹುದು. ಇದರಲ್ಲೂ ಯಾವ ದಂಪತಿಗೆ ಮಗು ಆಗುವ ಸಾಧ್ಯತೆ ಕಡಿಮೆ ಇದೆಯೋ ಅಂಥವರಿಗೆ ಮಾತ್ರ ಇದನ್ನು ಬಳಸುವ ಅವಕಾಶ. ದಂಪತಿ ಪೈಕಿ ಮಹಿಳೆಗೆ 23-50 ವರ್ಷ, ಪುರುಷನಿಗೆ 26-55 ವರ್ಷದ ವಯೋಮಿತಿ ನಿಗದಿ ಆಗಿದೆ. ನ್ಯಾಷನಲ್ ಸರೋಗಸಿ ಬೋರ್ಡ್, ಸ್ಟೇಟ್ ಸರೋಗಸಿ ಬೋರ್ಡ್​ಗಳ ಸ್ಥಾಪನೆಯೂ ಆಗಲಿದೆ.

ಇಂಥದ್ದೊಂದು ಸುಧಾರಣೆಯ ಅವಶ್ಯಕತೆ ಇತ್ತು. ಈ ಮೂಲಕ ಅನವಶ್ಯಕ ಮತ್ತು ವಾಣಿಜ್ಯ ಉದ್ದೇಶದ ಬಾಡಿಗೆ ತಾಯ್ತನಕ್ಕೆ ಕಡಿವಾಣ ಬೀಳಲು ಅನುಕೂಲವಾಗಲಿದೆ. ಮಸೂದೆಯು ಕಾನೂನು ಆದ ಬಳಿಕ ತನ್ನ ಕೆಲಸ ಮಾಡಲಿದೆ. ಆದರೆ, ಸಮಸ್ಯೆಯ ಪರಿಹಾರ ಕಾನೂನಿನಿಂದ ಮಾತ್ರ ಸಾಧ್ಯವಿಲ್ಲ ಎಂಬುದನ್ನು ಅರಿಯಬೇಕು. ಸಮಾಜದಲ್ಲಿ ಈ ಬಗ್ಗೆ ಸೂಕ್ತ ಜಾಗೃತಿ, ಬಾಡಿಗೆ ತಾಯ್ತನದ ಮಹತ್ವ ತಿಳಿಸುವ ಕೆಲಸವೂ ಆಗಬೇಕು. ನಮ್ಮ ಪರಂಪರೆಯಲ್ಲಿ ತಾಯ್ತನಕ್ಕೆ ವಿಶೇಷ ಸ್ಥಾನ, ಮಾನ್ಯತೆ ಇದೆ. ಆ ಮೌಲ್ಯಕ್ಕೆ ಚ್ಯುತಿ ಬರಬಾರದು ಮತ್ತು ಅಗತ್ಯವಿದ್ದವರು ಈ ಸೌಲಭ್ಯದಿಂದ ವಂಚಿತರಾಗಬಾರದು ಕೂಡ. ಈ ವಿಷಯದಲ್ಲಿ ನಾಗರಿಕ ಸಮುದಾಯ ಕೂಡ ಪ್ರಜ್ಞೆಯಿಂದ ವರ್ತಿಸಬೇಕಿದ್ದು, ಸರ್ಕಾರದ ಪ್ರಯತ್ನಗಳೊಂದಿಗೆ ಕೈಜೋಡಿಸಬೇಕಿದೆ.