ಕೋವಿಡ್ ಸಂಕಷ್ಟ, ಆರ್ಥಿಕ ಹಿಂಜರಿತ, ಜನರು ಎದುರಿಸುತ್ತಿರುವ ಸರಣಿ ಸಮಸ್ಯೆಗಳ ನಡುವೆಯೇ ವಿಧಾನಮಂಡಲ ಅಧಿವೇಶನದಲ್ಲಿ ಯಾವ ಚರ್ಚೆಯನ್ನೂ ನಡೆಸದೆ ಸಂಬಳ ಹೆಚ್ಚಿಸಿಕೊಂಡಿದ್ದ ಸಚಿವರು, ಶಾಸಕರು ತಮ್ಮ ಜವಾಬ್ದಾರಿ ನಿರ್ವಹಣೆಯಲ್ಲಿ ಮತ್ತೆ ಮತ್ತೆ ಎಡವುತ್ತಿರುವುದನ್ನು ಜನಸಾಮಾನ್ಯರು ಗಮನಿಸುತ್ತಿದ್ದಾರೆ ಮತ್ತು ಅದನ್ನು ಗಂಭೀರವಾಗಿ ಪರಿಗಣಿಸಿದ್ದಾರೆ ಎಂಬುದನ್ನು ರಾಜಕೀಯ ಪಕ್ಷಗಳು, ಅದರ ನಾಯಕರು ಮರೆತಂತಿದೆ. ಇತ್ತೀಚಿನ ದಿನಗಳಲ್ಲಿ ತನ್ನ ನೈಜೋದ್ದೇಶವನ್ನೇ ಕಳೆದುಕೊಳ್ಳುತ್ತಿರುವ ವಿಧಾನಮಂಡಲ ಅಧಿವೇಶನ ಜನರ ಆಶಯಗಳನ್ನು, ಪ್ರಜಾಪ್ರಭುತ್ವದ ಮೌಲ್ಯಗಳನ್ನು ಗಾಳಿಗೆ ತೂರುತ್ತಿರುವುದು ವಿಪರ್ಯಾಸ. ಅಧಿವೇಶನ ಎಂದರೆ ಒಂದೋ ಗದ್ದಲ-ಕೋಲಾಹಲ ಎಬ್ಬಿಸಿ ಕಲಾಪ ನಡೆಯದಂತೆ ಮಾಡುವುದು, ಇಲ್ಲವಾದರೆ ಚರ್ಚೆಯಲ್ಲಿ ಭಾಗವಹಿಸದೆಯೇ ಜವಾಬ್ದಾರಿಯಿಂದ ವಿಮುಖರಾಗುವ ವರ್ತನೆ ಸರಿಯಲ್ಲ. ಸಚಿವರೊಬ್ಬರ ಹೇಳಿಕೆಯ ವಿಷಯ ಇರಿಸಿಕೊಂಡು ಹಲವು ದಿನಗಳ ಕಾಲ ಕಲಾಪಕ್ಕೆ ಅವಕಾಶವೇ ನೀಡದಂಥ ಬೆಳವಣಿಗೆಯೂ ಇತ್ತೀಚೆಗೆ ಸಂಭವಿಸಿತು.
ವಿಧಾನಮಂಡಲ ಅಧಿವೇಶನ ಬಗೆಗಿನ ಶಾಸಕರ ಮತ್ತು ವಿಧಾನ ಪರಿಷತ್ ಸದಸ್ಯರ ನಿರಾಸಕ್ತಿ ಬುಧವಾರ ಮತ್ತೊಮ್ಮೆ ಕಂಡುಬಂದಿತು. ವಿಧಾನಸಭೆಯಲ್ಲಿ ಪ್ರಶ್ನೆ ಕೇಳಲು ಸದಸ್ಯರಿಲ್ಲ, ಉತ್ತರ ಹೇಳಲು ಸಚಿವರಿಲ್ಲ, ಆಲಿಸಲು ಅಧಿಕಾರಿಗಳಿಲ್ಲ ಎಂಬಂಥ ಸ್ಥಿತಿ ಕಂಡುಬಂತು. ಈ ಬಗ್ಗೆ ತೀವ್ರ ಆಕ್ಷೇಪ ಮತ್ತು ಬೇಸರ ವ್ಯಕ್ತಪಡಿಸಿದ ವಿಧಾಸಸಭಾಧ್ಯಕ್ಷರು, ‘ಈ ರೀತಿ ಆದರೆ ಸದನವನ್ನು ನಡೆಸುವುದಾದರೂ ಹೇಗೆ? ಏನು ಮಾಡಿದರೂ ನಡೆಯುತ್ತದೆ ಎಂಬ ಭಾವನೆ ಸಚಿವರಲ್ಲಿ ಬಂದರೆ ಅದು ಶೋಭೆ ತರುವಂಥದ್ದಲ್ಲ’ ಎಂದು ಖಾರವಾಗಿಯೇ ಹೇಳಿದ್ದಾರೆ. ಮಂತ್ರಿ ಸ್ಥಾನ ಸಿಕ್ಕರೆ ಮಾತ್ರ ಅಭಿವೃದ್ಧಿ ಮಾಡಲು ಸಾಧ್ಯ ಎಂಬಂತೆ ವರ್ತಿಸುವ, ಸಚಿವ ಸ್ಥಾನಕ್ಕಾಗಿ ತೀವ್ರ ಲಾಬಿ ಮಾಡಿ ಆ ಹುದ್ದೆಗೇರುವವರು ಈಗ ಜವಾಬ್ದಾರಿಯನ್ನೇ ಮರೆತುಬಿಟ್ಟರೆ ಹೇಗೆ? ರಾಜ್ಯ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದೆ. ಬೆಲೆಯೇರಿಕೆ, ನಿರುದ್ಯೋಗ, ರೈತರ ಬವಣೆ, ಕರೊನಾ ಸೃಷ್ಟಿಸಿದ ಆರ್ಥಿಕ ಸಂಕಷ್ಟ ಹೀಗೆ ಹಲವು ಪ್ರಮುಖ ವಿಷಯಗಳ ಮೇಲೆ ಚರ್ಚೆ ನಡೆದು, ಪರಿಹಾರದ ದಾರಿಯನ್ನು ಶೋಧಿಸಬೇಕಿದೆ. ಆದರೆ, ಇಲ್ಲಿ ಏನಾಗುತ್ತಿದೆ? ಪ್ರಶ್ನೆ ಕೇಳಬೇಕಾದ ಶಾಸಕರು ಸರಿಯಾಗಿ ಕಲಾಪಕ್ಕೆ ಹಾಜರಾಗುತ್ತಿಲ್ಲ. ಸಮಂಜಸ ಉತ್ತರ ನೀಡಬೇಕಾದ ಸಚಿವರು ಕೂಡ ಶಿಸ್ತು ಪಾಲಿಸುತ್ತಿಲ್ಲ.
ವರ್ಷದಲ್ಲಿ ಕನಿಷ್ಠ 100 ದಿನಗಳಾದರೂ ವಿಧಾನಮಂಡಲದ ಅಧಿವೇಶನ ನಡೆಯಬೇಕು ಎಂಬ ಹಲವು ವರ್ಷಗಳ ಆಶಯ ಈಡೇರುತ್ತಲೇ ಇಲ್ಲ. ಪರಿಸ್ಥಿತಿ ಎಷ್ಟು ಬಿಗಡಾಯಿಸಿದೆ ಎಂದರೆ ಸರಿಯಾಗಿ 50-60 ದಿನ ಕೂಡ ಅಧಿವೇಶನ ನಡೆಯುತ್ತಿಲ್ಲ. ಇದು ಮತದಾರರಿಗೆ ಮಾಡುವ ಅಪಮಾನ ಎಂಬುದನ್ನು ಜನಪ್ರತಿನಿಧಿಗಳು ಅರ್ಥಮಾಡಿಕೊಳ್ಳಬೇಕು. ಅಷ್ಟಕ್ಕೂ, ಉತ್ತಮ ಸಂಸದೀಯ ಪಟುಗಳು ರೂಪುಗೊಳ್ಳುವುದು ಆರೋಗ್ಯಕರ ಚರ್ಚೆ ಮತ್ತು ಅಧಿವೇಶನದಲ್ಲಿ ಸಕ್ರಿಯ ಪಾಲ್ಗೊಳ್ಳುವಿಕೆಯ ಮೂಲಕ. ಬರೀ ಅಧಿಕಾರ ಬೇಕು, ಜವಾಬ್ದಾರಿ ಬೇಡ ಎಂಬ ವರ್ತನೆಯನ್ನು ಜನರು ಕ್ಷಮಿಸುವುದಿಲ್ಲ. ಜನಪ್ರತಿನಿಧಿಗಳು ಇನ್ನಾದರೂ ಎಚ್ಚೆತ್ತುಕೊಂಡು ಜನರ ಆಶಯಗಳಿಗೆ ಸ್ಪಂದಿಸಲಿ.