ನ್ಯೂಸ್

ಸಂಪಾದಕೀಯ | ಕಠಿಣ ಕ್ರಮ ಕೈಗೊಳ್ಳಿ; ಅಂತಾರಾಷ್ಟ್ರೀಯ ಷಡ್ಯಂತ್ರಗಳನ್ನು ವಿಫಲಗೊಳಿಸಬೇಕು

ಭಾರತದಲ್ಲಿ ಕೋಮುಸೌಹಾರ್ದವನ್ನು ಹಾಳುಗೆಡವಲು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹುನ್ನಾರ ನಡೆದಿರುವುದು ಬಯಲಿಗೆ ಬಂದಿದೆ. ಇಂಥ ಸಂಚುಗಳನ್ನು ವಿಫಲಗೊಳಿಸಲು ಅಗತ್ಯವಿರುವ ಎಲ್ಲ ಕಠಿಣಾಸ್ತ್ರಗಳನ್ನು ಮುಲಾಜಿಲ್ಲದೆ ಪ್ರಯೋಗಿಸಬೇಕು. ಮತ್ತು ಕೋಮುಸೌಹಾರ್ದಕ್ಕೆ ಧಕ್ಕೆ ತರುವ ಯಾವುದೇ ಕೃತ್ಯಗಳನ್ನು ಕೇಂದ್ರ ಸರ್ಕಾರ, ರಾಜ್ಯ ಸರ್ಕಾರಗಳು ಸಹಿಸಿಕೊಳ್ಳಬಾರದು. ಮುಖ್ಯವಾಗಿ, ಇಂಥ ವಿಷಯದಲ್ಲಿ ಎಲ್ಲ ರಾಜಕೀಯ ಪಕ್ಷಗಳು ಒಟ್ಟಾಗಬೇಕು. ಮತಬ್ಯಾಂಕ್ ರಾಜಕಾರಣವನ್ನು, ಪರಸ್ಪರ ಆರೋಪ-ಪ್ರತ್ಯಾರೋಪವನ್ನು ದೂರವಿರಿಸಿ ಸಮಾಜದಲ್ಲಿ ಸಹಬಾಳ್ವೆಯ ವಾತಾವರಣ ನೆಲೆಸುವುದನ್ನೇ ಆದ್ಯತೆಯಾಗಿಸಿಕೊಳ್ಳಬೇಕು. ಹೊರ ರಾಷ್ಟ್ರಗಳು ಭಾರತದಲ್ಲಿ ಶಾಂತಿ ಕದಡಲು ಯತ್ನಿಸುತ್ತಿರುವುದು ರಹಸ್ಯವೇನಲ್ಲ. ಆದರೆ, ಈ ಪ್ರಯತ್ನಗಳು ತೀವ್ರಗೊಂಡು, ಜಾಲಗಳು ವಿಸ್ತರಣೆಯಾಗಿರುವುದು ಕಳವಳದ ಬೆಳವಣಿಗೆ. ಅಶಾಂತಿ ಹರಡಲು ಈಗ ಸಾಮಾಜಿಕ ಮಾಧ್ಯಮಗಳನ್ನು ಅಸ್ತ್ರಗಳಾಗಿ ಬಳಕೆ ಮಾಡಲಾಗುತ್ತಿದ್ದು, ಈ ಹೊಸ ಬಗೆಯ ಭಯೋತ್ಪಾದನೆ ವಿರುದ್ಧ ಹೋರಾಡಲು ಪರಿಣಾಮಕಾರಿ ಕಾರ್ಯತಂತ್ರ ರೂಪಿಸಿ, ಅನುಷ್ಠಾನಕ್ಕೆ ತರಬೇಕಿದೆ. ಭಾರತದ ವಿರುದ್ಧ ಸುಳ್ಳುಸುದ್ದಿಗಳನ್ನು ಪ್ರಸಾರ ಮಾಡುತ್ತಿದ್ದ ಪಾಕಿಸ್ತಾನ ಮೂಲದ ಹಲವು ಯೂ ಟ್ಯೂಬ್ ವಾಹಿನಿಗಳನ್ನು ಕೇಂದ್ರ ಇತ್ತೀಚೆಗೆ ನಿಷೇಧಿಸಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು.

ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದ ಹ್ಯಾಂಡಲ್​ಗಳಿಂದ ‘ಇಂಡಿಯನ್ ಮುಸ್ಲಿಂ ಅಂಡರ್ ಅಟ್ಯಾಕ್’ ಎಂಬ ಹ್ಯಾಷ್​ಟ್ಯಾಗ್ ಬಳಸಿ ಸಾವಿರಾರು ಪ್ರಚೋದನಾಕಾರಿ ಟ್ವೀಟ್​ಗಳು ಪ್ರಸಾರವಾಗಿರುವುದು ಅಂತಾರಾಷ್ಟ್ರೀಯ ಅಪಪ್ರಚಾರದ ಭಾಗವೆಂಬುದು ಸ್ಪಷ್ಟವಾಗಿದೆ. ಭಾರತದಲ್ಲಿ ಕೋಮುಸೌಹಾರ್ದವನ್ನು ನಾಶ ಮಾಡಲು ಪಾಕಿಸ್ತಾನದ ಅಪಪ್ರಚಾರ ತಂತ್ರ ಇದು ಎಂಬುದರಲ್ಲಿ ಯಾವುದೇ ಅನುಮಾನ ಇಲ್ಲ. ಗುಜರಾತ್, ಮಧ್ಯಪ್ರದೇಶ, ಜಾರ್ಖಂಡ್ ಮತ್ತು ಪಶ್ಚಿಮ ಬಂಗಾಳ ಮೊದಲಾದ ರಾಜ್ಯಗಳಲ್ಲಿ ರಾಮನವಮಿ ವೇಳೆ ಕೋಮು ಹಿಂಸಾಚಾರಗಳು ನಡೆದಿರುವುದಕ್ಕೂ ಪ್ರಚೋದನಕಾರಿ ಟ್ವೀಟ್​ಗಳಿಗೂ ಸಂಬಂಧವಿದೆ ಎಂದು ಹೇಳಲಾಗಿದೆ. ಹಿಂದೊಮ್ಮೆ ದೇಶವಿರೋಧಿ ಘೋಷಣೆಗಳಿಂದ ಕುಖ್ಯಾತಿಯಾಗಿದ್ದ ದೆಹಲಿಯ ಜವಾಹರಲಾಲ ನೆಹರು ವಿಶ್ವವಿದ್ಯಾಲಯದಲ್ಲಿ ರಾಮನವಮಿ ದಿನ ವಿದ್ಯಾರ್ಥಿಗಳಿಗೆ ಮಾಂಸಾಹಾರ ಪೂರೈಸಲಾಗಿತ್ತು ಎಂಬ ಪ್ರಕರಣದ ಬಗ್ಗೆಯೂ ವರದಿ ಸಲ್ಲಿಸುವಂತೆ ಕೇಂದ್ರ ಶಿಕ್ಷಣ ಸಚಿವಾಲಯ ವಿವಿಗೆ ಸೂಚನೆ ನೀಡಿದೆ. ಮಧ್ಯಪ್ರದೇಶದಲ್ಲಿಯೂ ಅಹಿತಕರ ಘಟನೆಗಳು ಸಂಭವಿಸಿದ್ದು, ಗುಜರಾತ್​ನ ಸಬರಕಾಂತ್ ಜಿಲ್ಲೆಯ ಹಿಮ್ಮತ್​ನಗರದಲ್ಲಿ ಮತ್ತೆ ಕಲ್ಲು ತೂರಾಟದ ಘಟನೆ ನಡೆದಿದೆ. ಈ ಸರಣಿ ಘಟನೆಗಳನ್ನು ಅವಲೋಕಿಸಿದಾಗ ಪಿತೂರಿಯ ಭಾಗವಾಗಿಯೇ ಇದನ್ನೆಲ್ಲ ನಡೆಸಿ, ಕೋಮುಸೌಹಾರ್ದ ಹಾಳುಗೆಡವಲು ಯತ್ನಿಸಲಾಗುತ್ತಿದೆ ಎಂಬುದು ಸ್ಪಷ್ಟ. ಇಂಥ ಕೃತ್ಯಗಳ ಹಿಂದೆ ಯಾರೇ ಇದ್ದರೂ ಅವರನ್ನು ಪತ್ತೆ ಹಚ್ಚಬೇಕು ಮತ್ತು ಇಂಥ ಸಮಾಜವಿರೋಧಿ ಕೃತ್ಯಗಳಿಗೆ ಬೆಂಬಲಿಸುತ್ತಿರುವವರ ವಿರುದ್ಧವೂ ಸೂಕ್ತ ಕ್ರಮ ಕೈಗೊಳ್ಳಬೇಕು.