ಕೊಪ್ಪ ತಾಲೂಕಿನ ಭಂಡಿಗಡಿ ಗ್ರಾಪಂ ವ್ಯಾಪ್ತಿಯ ಹಾಲ್ಮೂತ್ತೂರಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ಸಂತೆ ತೆರೆದಿರುವುದು.  
ನ್ಯೂಸ್

ಸಂತೆ ವ್ಯಾಪಾರದಲ್ಲಿ ತೊಡಗಿದ ಮಕ್ಕಳು

ಕೊಪ್ಪ; ರಸ್ತೆ ಪಕ್ಕದಲ್ಲಿ ತರಕಾರಿ, ಹಣ್ಣು, ದಿನಸಿ ವಸ್ತುವಿನ ಅಂಗಡಿಗಳು, ಖರೀದಿಸಲು ಬಂದ ಪಾಲಕರು, ಗ್ರಾಮಸ್ಥರು, ಮಾರಾಟ ಮಾಡಲು ಮಕ್ಕಳ ಪೈಪೋಟಿ. ಈ ದೃಶ್ಯ ಕಂಡು ಬಂದಿದ್ದು ತಾಲೂಕಿನ ಹಾಲ್ಮೂತ್ತೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ. ಮಕ್ಕಳಲ್ಲಿ ವ್ಯಾಪಾರ ವಾಹಿವಾಟಿನ ಬಗ್ಗೆ ಜ್ಞಾನ ವೃದ್ಧಿಯಾಗಲಿ ಎಂಬ ಉದ್ದೇಶದಿಂದ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಮಕ್ಕಳ ಸಂತೆ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳೇ ಅಂಗಡಿಯನ್ನು ತೆರೆದು ವ್ಯಾಪಾರ ನಡೆಸಿದರು. ಮಕ್ಕಳಿಗೆ ಪಾಲಕರು ಹಾಗೂ ಶಿಕ್ಷಕರು ಸಾಥ್ ನೀಡಿದರು.

ಪಾಲಕರು ಮಕ್ಕಳಿಗೆ ಮನೆಯಲ್ಲಿಯೇ ಬೆಳೆದ ಒಂದಷ್ಟು ತರಕಾರಿ ಹಾಗೂ ಹಣ್ಣು ನೀಡಿ ಮಕ್ಕಳ ಸಂತೆಯಲ್ಲಿ ಭಾಗವಹಿಸುವಂತೆ ಪ್ರೋತ್ಸಾಹ ನೀಡಿದರು. ಕೆಲ ಪಾಲಕರು ಮಕ್ಕಳಿಗೆ ಕಡಿಮೆ ದರದಲ್ಲಿ ಸಿಗುವ ಹಣ್ಣುಗಳನ್ನು ಖರೀದಿಸಿಕೊಟ್ಟಿದ್ದರು. ಮನೆಯಿಂದ ಸಿದ್ಧವಾಗಿ ಬಂದಿದ್ದ ಮಕ್ಕಳು ಶಾಲಾ ಮುಂಭಾಗದ ರಸ್ತೆಯ ಇಕ್ಕೆಲಗಳಲ್ಲಿ ಅಂಗಡಿಗಳನ್ನು ತೆರೆದು ಒಂದು ದಿನದ ಸಂತೆ ನಡೆಸಿದರು.

ಇತ್ತೀಚಿನ ದಿನಗಳಲ್ಲಿ ಮಕ್ಕಳು ಮನೆಗೆ ಮತ್ತು ಶಾಲೆಗೆ ಮಾತ್ರ ಸೀಮಿತವಾಗುತ್ತಿದ್ದಾರೆ. ಅಂಗಡಿಗೆ ತೆರಳಿ ಖರೀದಿಸುವುದು, ಪಾಲಕರ ಜತೆಯಲ್ಲಿ ಸಂತೆಗೆ ಹೋಗುವುದು ವಿರಳ. ಇದರ ನಡುವೆ ಶಾಲೆಯಲ್ಲಿ ಮಕ್ಕಳಿಗೆ ವ್ಯವಹಾರಿಕ ಜ್ಞಾನವನ್ನು ಹೆಚ್ಚಿಸಲು ಮಕ್ಕಳ ಸಂತೆ ಎಂಬ ಕಾರ್ಯಕ್ರಮ ನಡೆಸಲಾಗುತ್ತಿದೆ.

ಹಾಲ್ಮೂತ್ತೂರಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಶ್ಯಾಮಲಾ ಮಾತನಾಡಿ, ಮಕ್ಕಳನ್ನು ಕ್ರಿಯಾಶೀಲವಾಗಿಡಲು ಇಲಾಖೆ ಹಲವು ಕಾರ್ಯಕ್ರಮಗಳ್ನು ರೂಪಿಸಿದೆ. ಅದರಲ್ಲಿ ಮಕ್ಕಳ ಸಂತೆ ಕೂಡ ಒಂದು ಎಂದರು.

ವಿದ್ಯಾರ್ಥಿನಿ ಕೋಮಲಾ ಮಾತನಾಡಿ, ಶಾಲೆಯಲ್ಲಿ ಇಂತಹ ಕಾರ್ಯಕ್ರಮ ಹಮ್ಮಿಕೊಂಡಿರುವುದು ಸಂತೋಷವಾಗಿದೆ. ಸಂತೆಗಳಲ್ಲಿ ಯಾವ ರೀತಿ ವ್ಯಾಪಾರ ಮಾಡುತ್ತಾರೆ ಎಂದು ತಿಳಿಯಿತು ಎಂದರು.

ಎಸ್‌ಡಿಎಂಸಿ ಅಧ್ಯಕ್ಷ ಸುಧೀರ್ ಮಾತನಾಡಿ, ಪಠ್ಯ ಜತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಮಕ್ಕಳು ತೊಡಗಿಸಿಕೊಂಡಾಗ ಮಕ್ಕಳ ಸರ್ವತೋಮುಖ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದರು. ಶಾಲೆಯ ಶಿಕ್ಷಕರಾದ ಜ್ಯೋತಿ, ಸ್ಮಿತಾ, ಆತ್ಮೀಯ, ಪಾಲಕರಾದ ಸುರೇಶ್, ನಿತೀನ್, ಅಮೃತಾ, ನಾಗಶ್ರೀ, ವಿದ್ಯಾ ಇತರರಿದ್ದರು.