ಜಯಪುರ: ತುಳು ಆದಿ ದ್ರಾವಿಡ ಶ್ರೀ ಸತ್ಯ ಸಾರಮಾನಿ ದೈವಗಳ ಆರಾಧನಾ ಸಮಾಜವು ಕೊಪ್ಪ ತಾಲೂಕಿನಲ್ಲಿ ಅತಿಹೆಚ್ಚು ಜನಸಂಖ್ಯೆ ಹೊಂದಿದ್ದರೂ ಮಾಹಿತಿ ಕೊರತೆ ಕಾರಣದಿಂದಾಗಿ ಬೇರೆ ಬೇರೆ ಜಾತಿಯ ಪ್ರಮಾಣ ಪತ್ರ ಪಡೆದಿದೆ. ಹೀಗಾಗಿ ನಮ್ಮ ಜನಸಂಖ್ಯೆಯ ನಿಖರ ಅಂಕಿಅಂಶ ಸಿಗದಂತಾಗಿದೆ ಎಂದು ಆದಿ ದ್ರಾವಿಡ ಕೊಪ್ಪ ತಾಲೂಕು ಸಮಾಜ ಸೇವಾ ಸಂಘದ ಉಪಾಧ್ಯಕ್ಷರ ಹರೀಶ್ ಜಯಪುರ ಹೇಳಿದರು.
ಜಯಪುರದ ಶ್ರೀ ದುರ್ಗಾ ಪರಮೇಶ್ವರಿ ಸಭಾಭವನದಲ್ಲಿ ಭಾನುವಾರ ಏರ್ಪಡಿಸಿದ್ದ ಕೊಪ್ಪ ತಾಲೂಕು ಆದಿ ದ್ರಾವಿಡ ಸಮಾಜ ಸೇವಾ ಸಂಘದ ಸಭೆಯಲ್ಲಿ ಮಾತನಾಡಿ, ಇದರಿಂದ ನಮ್ಮ ಸಮಾಜವು ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯವಾಗಿ ಜಿಲ್ಲೆಯಲ್ಲಿ ಹಿಂದುಳಿದಿದೆ ಎಂದು ತಿಳಿಸಿದರು.
ನಾವು ಜಾತಿ ಗಣತಿ ಸೇರಿದಂತೆ ಸರ್ಕಾರಿ ದಾಖಲೆಗಳನ್ನು ಮಾಡಿಸುವಾಗ ಸ್ಪಷ್ಟವಾಗಿ ನಮ್ಮ ಜಾತಿ ನಮೂದಿಸಲು ಗಮನಹರಿಸಬೇಕು. ನಮ್ಮ ಹಕ್ಕುಗಳಿಗಾಗಿ ಸಂಘಟಿತವಾಗಿ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಅಭಿವೃದ್ಧಿಗಾಗಿ ಹೋರಾಡಬೇಕಿದೆ ಎಂದರು.
ಆದಿ ದ್ರಾವಿಡ ತುಳು ಸಮಾಜದ ರಾಜ್ಯಾಧ್ಯಕ್ಷ ಗಣೇಶ್ ಪ್ರಸಾದ್ ಮೂಡಬಿದ್ರೆ ಮಾತನಾಡಿ, ದ್ರಾವಿಡ ತುಳು ಸಮಾಜಕ್ಕೆ ಉಪಜಾತಿಯ ಗೊಂದಲವಿದ್ದು ಇನ್ನೇನು ಕೆಲವೇ ದಿನಗಳಲ್ಲಿ ಕುಲಶಾಸ್ತ್ರ ಅಧ್ಯಯನ ನಡೆಯಲಿದೆ. ಇದಕ್ಕೆ ಸಮಾಜದ ಬಂಧುಗಳು ಸಹಕರಿಸಿ ಸಮಾಜವು ಸಾಂವಿಧಾನಿಕ ಹಕ್ಕುಗಳನ್ನು ಪಡೆಯಲು ಪ್ರಯತ್ನಿಸಬೇಕಿದೆ ಎಂದು ಮನವಿ ಮಾಡಿದರು.
ರಾಜ್ಯ ಕಾರ್ಯದರ್ಶಿ ಸುರೇಶ್, ಜಿಲ್ಲಾಧ್ಯಕ್ಷ ಆರ್.ಡಿ.ಸುರೇಶ್, ತಾಲೂಕು ಅಧ್ಯಕ್ಷ ರವಿ ನೇರಳಕಟ್ಟೆ, ರಾಜ್ಯ ಪ್ರಚಾರ ಸಮಿತಿ ಅಧ್ಯಕ್ಷ ಸಂತೋಷ್ ನಿಡುವಾಳೆ ಇತರರಿದ್ದರು.