ಚಾಮರಾಜನಗರ: ವಾರಕ್ಕೊಂದು ಬಾಡಿಗೆ ಸಿಗದ ಪರಿಸ್ಥಿತಿ, ಏರಿಕೆ ಕಾಣುತ್ತಲೇ ಇರುವ ರೋಡ್ ಟ್ಯಾಕ್ಸ್ ನಡುವೆ ದುಸ್ತರವಾಗಿರುವ ಕುಟುಂಬ ನಿರ್ವಹಣೆ..
ಕೊಳ್ಳೇಗಾಲಪಟ್ಟಣದ ಕೆಎಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಸಮೀಪದಲ್ಲೇ ಇರುವ ಕಾರು, ಕ್ಯಾಬ್ ನಿಲ್ದಾಣದಲ್ಲಿ ನಂ.1 ಕನ್ನಡ ದಿನಪತ್ರಿಕೆ ವಿಜಯವಾಣಿ ವತಿಯಿಂದ ಶುಕ್ರವಾರ ಆಯೋಜಿಸಿದ್ದ ಕಾಯಕ ಸಮಾಜ ಸಂವಾದ ಕಾರ್ಯಕ್ರಮದಲ್ಲಿ ಕಾರು, ಮ್ಯಾಕ್ಸಿಕ್ಯಾಬ್, ಟಿಟಿ ಮತ್ತು ಮಿನಿ ಬಸ್ ಚಾಲಕರು ಹಂಚಿಕೊಂಡ ನೋವಿನ ನುಡಿಗಳಿವು.
ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶ್ರೀ ಮಹಾಗಣಪತಿ ಕಾರು ಮಾಲೀಕರು ಮತ್ತು ಚಾಲಕರ ಸಂಘದ ಮಾಜಿ ಅಧ್ಯಕ್ಷ ಆರ್.ಮನೋಹರ್, ಪ್ರಸ್ತುತ ಸ್ಥಿತಿಯಲ್ಲಿ ಕಾರು ಮತ್ತು ಮ್ಯಾಕ್ಸಿಕ್ಯಾಬ್ಗಳನ್ನು ಬಾಡಿಗೆಗೆ ಕರೆಯುವವರ ಸಂಖ್ಯೆ ಕಡಿಮೆಯಾಗಿದೆ. ಕೋವಿಡ್ ಸಂದರ್ಭದಲ್ಲಿ ನಾವೆಲ್ಲರೂ ಸಾಕಷ್ಟು ಕಷ್ಟ ಅನುಭವಿಸಿದ್ದೆವು. ಈಗ ಮತ್ತಷ್ಟು ಸಮಸ್ಯೆಗೆ ಸಿಲುಕಿದ್ದೇವೆ ಎಂದು ನೋವು ತೋಡಿಕೊಂಡರು.
ಸಂಘದಲ್ಲಿ 50ಕ್ಕೂ ಹೆಚ್ಚು ಕಾರು, 60ಕ್ಕೂ ಹೆಚ್ಚು ಕ್ಯಾಬ್‌ಗಳಿವೆ. ಈ ನಿಲ್ದಾಣದಲ್ಲಿ 120ಕ್ಕೂ ಹೆಚ್ಚು ವಾಹನಗಳು ಇದ್ದು, ಕಾರು ನಿಲುಗಡೆಗೆ ಸೂಕ್ತ ಜಾಗವೇ ಇಲ್ಲದಂತಾಗಿದೆ. ಜನಪ್ರತಿನಿಧಿಗಳು ಹಾಗೂ ನಗರಸಭೆ ಗಮನಹರಿಸಿ ಶಾಶ್ವತ ಜಾಗ ಒದಗಿಸಿಕೊಟ್ಟರೆ ಅನುಕೂಲ. ವಿಜಯವಾಣಿ ಇಂತಹ ಕಾರ್ಯಕ್ರಮವನ್ನು ಆಯೋಜನೆ ಮಾಡುವ ಮೂಲಕ ನಮ್ಮ ನೋವನ್ನು ಹಂಚಿಕೊಳ್ಳಲು ವೇದಿಕೆ ರೂಪಿಸಿರುವುದು ಸಹಕಾರಿ ಎಂದರು.
ವಿದ್ಯಾಭ್ಯಾಸ ಕೊಡಿಸಲು ಪರದಾಟ: ಪಟ್ಟಣದ ಕಾರು, ಮ್ಯಾಕ್ಸಿಕ್ಯಾಬ್ ಹಾಗೂ ಮಿನಿಬಸ್ ಚಾಲಕರು ಸಾಕಷ್ಟು ಬಡ ಕುಟುಂಬಗಳಿಂದಲೇ ಬಂದಿದ್ದಾರೆ. 4 ತಿಂಗಳಿಂದ ವಾರಕ್ಕೆ ಒಂದು ಬಾಡಿಗೆಯೂ ಸಿಗುತ್ತಿಲ್ಲ. ಹಲವು ಮಾಲೀಕರು ಮತ್ತು ಚಾಲಕರು ಕಾರುಗಳನ್ನು ಮಾರಾಟ ಮಾಡಿ ಹೋಗುತ್ತಿದ್ದಾರೆ. ಕಾರನ್ನು ಶುಚಿಯಾಗಿ ಇಟ್ಟುಕೊಳ್ಳುವ ನಾವು, ನಮ್ಮ ಕುಟುಂಬ ನಿರ್ವಹಣೆಗೆ ಹೆಣಗಾಡುವಂತಾಗಿದೆ. ಬೆಳಗ್ಗೆಯಿಂದ ಸಂಜೆಯವರೆಗೂ ಕಾರನ್ನು ನಿಲ್ದಾಣದಲ್ಲಿ ನಿಲ್ಲಿಸಿ ವಾಪಸ್ ಹೋಗುತ್ತಿದ್ದೇವೆ. ಮಡದಿಯ ಚಿನ್ನ ಅಡವಿಟ್ಟು ಟ್ಯಾಕ್ಸ್ ಕಟ್ಟುತ್ತಿದ್ದೇವೆ. ನಮ್ಮ ಮಕ್ಕಳಿಗೆ ಸೂಕ್ತ ವಿದ್ಯಾಭ್ಯಾಸ ಕೊಡಿಸಲು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಹಲವರು ನೋವು ತೋಡಿಕೊಂಡರು.
ಸಂವಾದದಲ್ಲಿ ಟಿಟಿ ಚಾಲಕರಾದ ರಾಮು, ಪ್ರಶಾಂತ್, ಫೈರೋಜ್ ಖಾನ್, ಮಹಾದೇವ್, ಗಿರಿಧರ್, ಶ್ರೀನಿವಾಸ್, ಮಂಜು, ಕುಮಾರ್, ದೀಪು, ಗಿರೀಶ್, ಮುಕುಂದ, ಶಿವಪ್ರಸಾದ್, ಮೊಳಗನಕಟ್ಟೆ ರಾಜು, ಕಾರು ಚಾಲಕರಾದ ರಾಚನಾಯ್ಕ, ನಿಂಗರಾಜು, ಶ್ರೀನಿವಾಸ್, ಕೃಷ್ಣ, ನಾಗರಾಜು, ಶಿವು, ಮುಳ್ಳೂರು ನಾಗರಾಜ್, ಸಿದ್ದರಾಜು, ನವೀನ್, ರಾಜು, ಜೋಗಿ, ಜೋಶಿ ಇತರರು ಭಾಗವಹಿಸಿದ್ದರು.
ರೋಡ್‌ಟ್ಯಾಕ್ಸ್ ಹೊರೆ: ಕಾರು ಮತ್ತು ಮ್ಯಾಕ್ಸಿ ಕ್ಯಾಬ್ಗಳಿಗೆ ಮೂರು ತಿಂಗಳಿಗೊಮ್ಮೆ 5,500 ರೂ. ರೋಡ್‌ಟ್ಯಾಕ್ಸ್ ಮತ್ತು 35000 ರೂ. ಇನ್ಶೂರೆನ್ಸ್ ಕಟ್ಟಬೇಕಿದೆ. ಮಿನಿ ಬಸ್‌ಗಳಿಗೆ ಮೂರು ತಿಂಗಳಿಗೆ ಒಮ್ಮೆ 16,000 ರೂ. ರೋಡ್‌ಟ್ಯಾಕ್ಸ್, ವರ್ಷಕ್ಕೆ 43,000 ರೂ. ಇನ್ಶೂರೆನ್ಸ್ ಪಾವತಿಸಬೇಕು. ಇಂತಹ ಪರಿಸ್ಥಿತಿ ನಡುವೆ ಸರಿಯಾಗಿ ಬಾಡಿಗೆ ಸಿಗದೆ ರೋಡ್‌ಟ್ಯಾಕ್ಸ್ ಹೊರೆಯಿಂದ ಕಾರು ಮಾಲೀಕರು ಮತ್ತು ಚಾಲಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಕುರಿತು ಸರ್ಕಾರ ನಮ್ಮ ಬಗ್ಗೆ ಗಮನಹರಿಸಿ ಸ್ವಲ್ಪವಾದರೂ ಟ್ಯಾಕ್ಸ್ ಹೊರೆ ತಗ್ಗಿಸಿದರೆ ಅನುಕೂಲ ಎಂದು ಶ್ರೀ ವಿನಾಯಕ ಮ್ಯಾಕ್ಸಿಕ್ಯಾಬ್ ಮಾಲೀಕರು ಮತ್ತು ಚಾಲಕರ ಸಂಘದ ಗೌರವಾಧ್ಯಕ್ಷ ಬಸವಣ್ಣ ಮನವಿ ಮಾಡಿದರು.
ಶಕ್ತಿ ಯೋಜನೆ ಹೊಡೆತ: ಕೋವಿಡ್ ಸಂದರ್ಭದಲ್ಲಿ ಸಾಕಷ್ಟು ಕಾರು ಚಾಲಕರು ಈ ವೃತ್ತಿಯನ್ನು ತೊರೆದಿದ್ದರು. ರಾಜ್ಯ ಸರ್ಕಾರದ ಶಕ್ತಿ ಯೋಜನೆ ಜಾರಿಯಾದ ದಿನಗಳಿಂದ ಕಾರು, ಮ್ಯಾಕ್ಸಿಕ್ಯಾಬ್ಗಳನ್ನು ಬಾಡಿಗೆ ಕೇಳುವವರೇ ಇಲ್ಲದಂತಾಗಿದೆ. ಈ ಭಾಗದ ಮಲೆ ಮಹದೇಶ್ವರ ಬೆಟ್ಟ, ಭರಚುಕ್ಕಿ ಹಾಗೂ ಇತರ ಪ್ರವಾಸಿ ತಾಣಗಳಿಗೆ ಕಾರು ಬಾಡಿಗೆಗೆ ಪಡೆಯುವವರ ಸಂಖ್ಯೆ ಹೆಚ್ಚಾಗಿತ್ತು. ಈಗ ನಾವೇ ಕೇಳಿದರೂ ಯಾರೂ ಬಾಡಿಗೆಗೆ ಬರುತ್ತಿಲ್ಲ. ಸರ್ಕಾರ ಯೋಜನೆಗಳನ್ನು ರೂಪಿಸುವಾಗ ನಮ್ಮಂತಹವರನ್ನೂ ಗಮನದಲ್ಲಿ ಇಟ್ಟುಕೊಳ್ಳಬೇಕು ಎಂದು ಶ್ರೀ ಮಹಾಗಣಪತಿ ಕಾರು ಚಾಲಕರು ಮತ್ತು ಮಾಲೀಕರ ಸಂಘದ ಕಾರ್ಯದರ್ಶಿ ಪ್ರಭುದೇವ್ ಹಾಗೂ ಖಜಾಂಚಿ ಶಿವಕುಮಾರ್ ಬೇಸರ ವ್ಯಕ್ತಪಡಿಸಿದರು.
ಸೂಕ್ತ ಜಾಗ ಕಲ್ಪಿಸಿ: ಪಟ್ಟಣದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಬಳಿ ಇರುವ ಗಣಪತಿ ದೇವಸ್ಥಾನದ ಹಿಂಭಾಗ ಕಾರು ಮಾಲೀಕರು ಮತ್ತು ಚಾಲಕರ ಸಂಘಕ್ಕೆ ಜಾಗ ನೀಡಲಾಗಿತ್ತು. ನೂತನ ಬಸ್ ನಿಲ್ದಾಣ ನಿರ್ಮಾಣಕ್ಕಾಗಿ 2019 ರಲ್ಲಿ ಅಂದಿನ ಶಾಸಕರಾಗಿದ್ದ ಎಸ್.ಜಯಣ್ಣ ಅವರು, ಕೆರೆಗೆ ಹೋಗುವ ರಸ್ತೆಯಲ್ಲಿ ಕಾರು ನಿಲ್ದಾಣ ಮಾಡಿಕೊಳ್ಳಲು ಸೂಚಿಸಿದ್ದರು. ಈ ಜಾಗ ನಗರಸಭೆಗೆ ಸೇರಿದ್ದು, ಈಗ ಸಂಘದ್ದು ಎಂದು ಹೇಳಿಕೊಳ್ಳಲು ಜಾಗವೇ ಇಲ್ಲ. ಜನಪ್ರತಿನಿಧಿಗಳು, ಅಧಿಕಾರಿಗಳು ಸಂಘಕ್ಕೆ ಸೂಕ್ತ ಜಾಗವನ್ನು ಒದಗಿಸಿಕೊಡಬೇಕು ಎಂದು ಸಂಘದ ಮಾಜಿ ಖಜಾಂಚಿ ಎಂ.ರಾಜಶೇಖರ್ ಮನವಿ ಮಾಡಿದರು.
ಪಟ್ಟಣದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಸಮೀಪ ಕೆರೆಗೆ ಹೋಗುವ ರಸ್ತೆಯಲ್ಲಿ ತಾತ್ಕಾಲಿಕವಾಗಿ ಕಾರು ಮತ್ತು ಕ್ಯಾಬ್‌ಗಳನ್ನು ನಿಲ್ಲಿಸುತ್ತಿದ್ದೇವೆ. ನಮ್ಮ ಸಂಘಕ್ಕೆ ಸೂಕ್ತವಾದ ಜಾಗ ನೀಡಿದರೆ ಅನುಕೂಲ.
ಸರ್ಕಾರದ ಮಟ್ಟದಲ್ಲಿ ರೋಡ್‌ಟ್ಯಾಕ್ಸ್ ಹೊರೆಯನ್ನು ಕಡಿಮೆ ಮಾಡಿದರೆ ಸಾಕು. ಆದರೆ ದಿನೇ ದಿನೇ ಟ್ಯಾಕ್ಸ್ ಏರಿಕೆ ಮಾಡುತ್ತಿದ್ದಾರೆ. ಗಗನಕ್ಕೆ ಏರಿರುವ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ನಮ್ಮ ಬದುಕು ದುಸ್ತರವಾಗಿದೆ.