ರಾಜ್ಯಪಾಲ ಥಾವರ್​ಚಂದ್​ ಗೆಹಲೋತ್​ ಶಹನಾಯ್​ ವಾದಕ ಬಲ್ಲೇಶ್​ಭಜಂತ್ರಿ, ಐಟಿ ಕ್ಷೇತ್ರಕ್ಕೆ ಕೊಡುಗೆ ನೀಡಿರುವ ಶರದ್​ ಶಮಾರ್ಗೆ ಗೌರವ ಡಾಕ್ಟರೇಟ್​ ನೀಡಿ ಗೌರವಿಸಿದರು. 
ನ್ಯೂಸ್

ಶ್ರೇಷ್ಠ ಭಾರತ ನಿಮಾರ್ಣಕ್ಕೆ ಕೈಜೋಡಿಸಿ: ರಾಜ್ಯಪಾಲ ಥಾವರ್​ಚಂದ್​ ಗೆಹಲೋತ್​ ಕರೆ

ಕೋಲಾರ: ಕೇಂದ್ರ, ರಾಜ್ಯ ಸರ್ಕಾರಗಳು ಜಾರಿಗೆ ತಂದಿರುವ ಹಲವು ಯೋಜನೆಗಳ ಸದುಪಯೋಗ ಪಡೆದುಕೊಂಡು ಯುವಜನತೆ ಶ್ರೇಷ್ಠ ಭಾರತ ನಿಮಾರ್ಣದಲ್ಲಿ ಕೈಜೋಡಿಸಬೇಕು ಎಂದು ರಾಜ್ಯಪಾಲ ಹಾಗೂ ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಕುಲಾಧಿಪತಿ ಥಾವರ್​ಚಂದ್​ ಗೆಹಲೋತ್​ ತಿಳಿಸಿದರು.


ನಗರದ ಹೊರವಲಯದ ನಂದಿನಿ ಪ್ಯಾಲೇಸ್​ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಬೆಂ.ಉ.ವಿವಿಯ 2ನೇ ವಾರ್ಷಿಕ ಘಟಿಕೋತ್ಸವದ ಅಧ್ಯಕ್ಷತೆ ವಹಿಸಿ ಮಾತನಾಡಿ, ಯುವಕರು ರಾಷ್ಟ್ರದ ಭವಿಷ್ಯ ರೂಪಿಸುವವರಾಗಿದ್ದು, ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರವಹಿಸಬೇಕು. ಡಿಜಿಟಲ್​, ಸ್ಟಾರ್ಟ್​ಅಪ್​, ಮೇಕ್​ ಇನ್​ ಇಂಡಿಯಾ ಸೇರಿ ಹಲವು ಯೋಜನೆಗಳು ಅನುಷ್ಠಾನಗೊಂಡಿದ್ದು, ಇವುಗಳ ಸದುಪಯೋಗಪಡಿಸಿಕೊಂಡು ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸಬಹುದು. ಅಲ್ಲದೇ ಉದ್ಯೋಗ ಅರಸುವ ಬದಲು ಉದ್ಯೋಗ ನೀಡುವಂತವರಾಗಬೇಕು. ಈ ಮೂಲಕ ಶ್ರೇಷ್ಠ, ನವ ಮತ್ತು ಸ್ವಾವಲಂಬಿ ಭಾರತ ನಿರ್ಮಿಸಬಹುದು ಎಂದು ತಿಳಿಸಿದರು.


ಶಿಕ್ಷಣ ಕ್ಷೇತ್ರದಲ್ಲಿ ತಂತ್ರಜ್ಞಾನ ಅಳವಡಿಕೆಯಾಗುವುದರ ಜತೆಗೆ ಗುಣಮಟ್ಟದ ಶಿಕ್ಷಣ ಎಲ್ಲರಿಗೂ ಸಿಗುವಂತಾಗಬೇಕು. ಇದರ ಜತೆಗೆ ಮಾನವೀಯ ಮೌಲ್ಯಗಳು, ಪರಿಸರ ಮತ್ತು ಜಲ ಸಂರಕ್ಷಣೆ ಅರಿವು ಮೂಡಿಸಬೇಕು ಎಂದು ತಿಳಿಸಿದರು.


ಡಾಕ್ಟರೇಟ್​ ಗೆ ಭಾಜನರಾಗಿದ್ದ ಚಲನಚಿತ್ರ ಹಿರಿಯ ನಟ ಅನಂತನಾಗ್​ ಅವರ ಅನುಪಸ್ಥಿತಿಯಲ್ಲಿ ಸಂಗೀತ ಕ್ಷೇತ್ರದ ಬಲ್ಲೇಶ್​ ಭಜಂತ್ರಿ ಮತ್ತು ಐಟಿ ಕ್ಷೇತ್ರದಲ್ಲಿ ಕೊಡುಗೆ ನೀಡಿರುವ ಶರದ್​ ಶಮಾರ್ಗೆ ಗೌರವ ಡಾಕ್ಟರೇಟ್​ ಪ್ರದಾನ ಮಾಡಿದ ಅವರು, ಈ ಮಹನೀಯರು ಮಕ್ಕಳಿಗೆ ಸ್ಫೂರ್ತಿಯಾಗಿದ್ದಾರೆ. ನೀವೂ ಸಹ ಸಾಮಾಜಿಕ ಸೇವೆಯಲ್ಲಿ ನಿರಂತರವಾಗಿ ತೊಡಗಿಸಿಕೊಳ್ಳಬೇಕು ಎಂದು ತಿಳಿಸಿದರು.


ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕ ಡಾ.ಸಿ.ಎನ್​.ಮಂಜುನಾಥ್​ ಮಾತನಾಡಿ, ಪಾಲಕರು ಅಂಕಗಳಿಕೆಗೆ ಒತ್ತಡ ಹೇರದೆ ಮೌಲ್ಯಯುತ ಶಿಕ್ಷಣ ದೊರಕುವಂತೆ ಮಾಡಬೇಕು. ಜೀವನದ ಪಾಠ ಅದರಲ್ಲಿರಬೇಕು. ಸೋಲು&ಗೆಲುವನ್ನು ಭವಿಷ್ಯದಲ್ಲಿ ಸಮಾನವಾಗಿ ಸ್ವೀಕರಿಸುವಂತಹ ಮನೋಭಾವ ಬೆಳೆಸಬೇಕು. ಕೆಲಸ ಯಾವುದೇ ಇದ್ದರೂ ಅದನ್ನು ಪ್ರಾಮಾಣಿಕ, ಖುಷಿ, ಹೆಮ್ಮೆ, ನಿಷ್ಠೆಯಿಂದ ಮಾಡುವುದೇ ಶ್ರೇಷ್ಠ ಎಂಬುದನ್ನು ಹೇಳಿಕೊಡಬೇಕು ಎಂದರು.


ಕುಲಪತಿ ಪ್ರೊ. ನಿರಂಜನ ವಾನಳ್ಳಿ ಮಾತನಾಡಿ, 2017ರಲ್ಲಿ ಸ್ಥಾಪನೆಯಾದ ವಿವಿ ಆಡಳಿತ ಕಚೇರಿ ಕೋಲಾರದ ಟಮಕ ಬಳಿ ಇದೆ. ಚಿಕ್ಕಬಳ್ಳಾಪುರ ಜಿಲ್ಲೆಯ ಜಂಗಮ ಕೋಟೆಯ ಅಮರಾವತಿ ಬಳಿ ಹೊಸ ಕಟ್ಟಡ ನಿಮಾರ್ಣ ಮಾಡಲಾಗುತ್ತಿದೆ. ವಿವಿಗೆ 284 ಸರ್ಕಾರಿ ಪ್ರಥಮ ದರ್ಜೆ ಕಾಲೇಜು, 200 ಅಟಾನಮಸ್​ ಕಾಲೇಜುಗಳು ಒಳಪಡುತ್ತಿವೆ. ವಿವಿಯು ನ್ಯಾಕ್​, ಯುಜಿಸಿಯಿಂದ ಮಾನ್ಯತೆ ಪಡೆದಿದೆ. ಪದವಿಯಲ್ಲಿ 18203, ಸ್ನಾತಕೋತ್ತರದಲ್ಲಿ 7482 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ ಎಂದು ತಿಳಿಸಿದರು.


41 ವಿದ್ಯಾರ್ಥಿಗಳಿಗೆ ಚಿನ್ನದ ಪದಕಗಳನ್ನು ವಿತರಿಸಲಾಯಿತು. ಬೆಂಗಳೂರು ಉ.ವಿವಿ ಕುಲಸಚಿವರಾದ ಡಾ.ವೆಂಕಟೇಶಮೂರ್ತಿ(ಆಡಳಿತ), ಪ್ರೊ.ಡೊಮಿನಿಕ್​(ಮೌಲ್ಯಮಾಪನ), ಡೀನ್​ ಡಾ.ಡಿ.ಕುಮುದಾ, ವಿತ್ತಾಧಿಕಾರಿ ವಸಂತ್​ಕುಮಾರ್​, ಜಿಲ್ಲಾಧಿಕಾರಿ ವೆಂಕಟ್​ ರಾಜಾ, ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಡಿ.ದೇವರಾಜ್​ ಮತ್ತಿತರರು ಇದ್ದರು.

ರಾಜ್ಯಪಾಲ ಥಾವರ್​ಚಂದ್​ ಗೆಹಲೋತ್​ ಸಾಧಕ ವಿದ್ಯಾರ್ಥಿನಿಗೆ ಚಿನ್ನದ ಪದಕ ನೀಡಿದರು.

ಮನುಷ್ಯರಾಗಿ ಬಾಳುವುದನ್ನು ಕಾಣಬಯಸುವೆ: ಮಕ್ಕಳನ್ನು ಪ್ರಕೃತಿಯಲ್ಲಿ ಬೆರೆಯುವಂತೆ ಮಾಡಬೇಕು. ಮಳೆಯಲ್ಲಿ ನೆನೆಯುವ, ಚಿಟ್ಟೆಗಳ ಚಂದ ಆನಂದಿಸುವ, ಹಾರುವ ಪಕ್ಷಿಗಳನ್ನು ಎಣಿಸುವ, ಬೀಜಮೊಳಕೆ ಒಡೆಯುವುದನ್ನು ಕಾಯುವ ಕುತೂಹಲ ತುಂಬಬೇಕು. ಗಿಡ ನೆಡಲು ಪಣತೊಡುವ ಮನಸ್ಸು ಬರುವಂತೆ ಮಾಡಬೇಕು. ಹೆಣ್ಣನ್ನು ಗೌರವಿಸುವ, ದೀನದುರ್ಬಲರು, ವೃದ್ಧರನ್ನು ನೋಡಿ ಮರುಗುವ ಗುಣ ಕಲಿಸಿಕೊಡಬೇಕು. ನಾನು ಒಬ್ಬ ವಿದ್ಯಾರ್ಥಿ ಉನ್ನತ ಅಧಿಕಾರಿಯಾಗುವುದಕ್ಕಿಂತ ಒಳ್ಳೆಯ ಮನುಷ್ಯನಾಗಿ ಬಾಳುವುದನ್ನು ಕಾಣಬಯಸುತ್ತೇನೆ ಎಂದು ಜಯದೇವ ಹೃದ್ರೋಗ ಸಂಸ್ಥೆ ನಿರ್ದೇಶಕ ಡಾ.ಸಿ.ಎನ್​.ಮಂಜುನಾಥ್​ ತಿಳಿಸಿದರು.


ದೇಶದ ಪ್ರತಿಷ್ಠಿತ ಸಂಗೀತ ನಿರ್ದೇಶಕರೊಂದಿಗೆ ಸಂಗೀತ ಸಂಯೋಜನೆ ಮಾಡಿದ್ದೇನೆ. ಹಲವು ಭಾಷೆಗಳ ಚಲನಚಿತ್ರಗಳಿಗೆ ಶಹನಾಯ್​ ನುಡಿಸಿದ್ದು, ಎಲ್ಲೂ ಭಾಷೆ, ಸಮಸ್ಯೆಯಾಗಿ ಕಾಡಿಲ್ಲ. ಸಂಗೀತದಲ್ಲಿ ಭಾವನೆಗೇ ಪ್ರಾಧಾನ್ಯತೆ. ಸಾಕಷ್ಟು ಪ್ರಶಸ್ತಿಗಳು ಲಭಿಸಿವೆ, ವಿವಿ ಗೌರವ ಡಾಕ್ಟರೇಟ್​ ನೀಡಿರುವುದು ಖುಷಿ ತಂದಿದೆ.

|ಪದ್ಮಶ್ರೀ ಬಲ್ಲೇಶ್​ ಭಜಂತ್ರಿ ಶಹನಾಯ್​ ಪಂಡಿತ.

ಬೆಸ್ಕಾಂನಲ್ಲಿ ಉದ್ಯೋಗಿಯಾಗಿದ್ದುಕೊಂಡೇ ಓದಿದೆ. ಓದಲೇಬೇಕೆಂಬ ಛಲದಿಂದ ದೊಡ್ಡಬಳ್ಳಾಪುರದ ಸಂಜೆ ಕಾಲೇಜು ಸೇರಿದೆ. ರಾತ್ರಿ ಓದಿ ಬೆಳಗ್ಗೆ ಕರ್ತವ್ಯಕ್ಕೆ ಹಾಜರಾಗುತ್ತಿದ್ದೆ. ಈಗ ಬಿ.ಎನಲ್ಲಿ 90.63 ಅಂಕ ಬಂದಿರುವುದರ ಜತೆಗೆ ಚಿನ್ನದ ಪದಕ ಸಿಕ್ಕಿರುವುದು ಮಾತೇ ಬಾರದಂತೆ ಮಾಡಿದೆ. ಮುಂದೆ ಪೊಲೀಸ್​ ಸಬ್​ ಇನ್​ಸ್ಪೆಕ್ಟರ್​ ಆಗಬೇಕೆಂಬ ಆಸೆಯಿದ್ದು, ಸ್ಪರ್ಧಾತ್ಮಕ ಪರೀಕ್ಷೆಗಳನ್ನು ತೆಗೆದುಕೊಳ್ಳಲು ಸಜ್ಜಾಗುತ್ತೇನೆ.

|ಬಿ.ಎಸ್​.ನಂದೀಶ್​, ಪದಕ ಪಡೆದವರು.

ಎಂಎಸ್ಸಿ(ಭೌತಶಾಸ್ತ್ರ)ದಲ್ಲಿ 87.92 ಅಂಕಗಳಿಸಿದ್ದೇನೆ. ಸರ್ಕಾರಿ ಕಾಲೇಜುಗಳ ಬಗ್ಗೆ ತಾತ್ಸಾರ ಬೇಡ. ಕುಟುಂಬದವರು, ಉಪನ್ಯಾಸಕರ ಮಾರ್ಗದರ್ಶನದಲ್ಲಿ ಪದಕ ಪಡೆಯಲು ಸಹಕಾರಿಯಾಯಿತು. ಸ್ಪರ್ಧಾತ್ಮಕ ಪರೀಕ್ಷೆಗಳನ್ನು ತೆಗೆದುಕೊಂಡು ಇನ್ನೂ ಓದಬೇಕೆಂಬ ಆಸೆಯಿದೆ. ಇಂತಹುದೇ ಉದ್ಯೋಗವಿರಬೇಕೆಂಬ ಮನೋಭಾವವಿಲ್ಲ. |ಲಾವಣ್ಯ, ಕೋಲಾರ, ಪದಕ ಪಡೆದವರು.

ಸರ್ಕಾರಿ ಕಾಲೇಜುಗಳ ಬಗ್ಗೆ ಅಸಡ್ಡೆ ಬೇಡ. ಪದವಿ ಮುಗಿಸಿ 10 ವರ್ಷ ಮನೆಯಲ್ಲಿದ್ದೆ. ನಂತರ ಕೆ.ಆರ್​.ಪುರಂನ ಸರ್ಕಾರಿ ಕಾಲೇಜಿನಲ್ಲಿ ಎಂಎಗೆ ಸೇರಿ ತನ್ಮಯತೆಯಿಂದ ಓದಿದ್ದಕ್ಕೆ ಚಿನ್ನದ ಪದಕ ಬಂದಿದೆ. ಎಂಎ ಕನ್ನಡದಲ್ಲಿಯೇ ಮಾಡಬೇಕೆಂಬ ಆಸೆಯಿತ್ತು.
|ಕುಸುಮಾ ಯಾದವ್​, ಪದಕ ಪಡೆದವರು