ವಿಜಯವಾಣಿ ಸುದ್ದಿಜಾಲ ಶ್ರೀನಿವಾಸಪುರ
ಶ್ರೀನಿವಾಸಪುರ ಪುರಸಭೆಯ ಅಧ್ಯಕ್ಷರಾಗಿ ಕಾಂಗ್ರೇಸ್‌ನ ಭಾಸ್ಕರ್ ಮತ್ತು ಉಪಾಧ್ಯಕ್ಷರಾಗಿ ಜೆಡಿಎಸ್‌ನ ಸುನಿತ ಆಯ್ಕೆಯಾಗಿದ್ದು, ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಿತು. ಉಪಾಧ್ಯಕ್ಷ ಸ್ಥಾನ ಅವಿರೋಧವಾಗಿ ಆಯ್ಕೆ ಆಯಿತು.
ಶ್ರೀನಿವಾಸಪುರ ಪುರಸಭೆ ಒಟ್ಟು ೨೩ ಸದಸ್ಯರ ಬಲ ಹೊಂದಿದ್ದು, ಕಾಂಗ್ರೇಸ್ ೧೧ ಸದಸ್ಯರು ಜೆಡಿಎಸ್ ೧೨ ಸದಸ್ಯರ ಸಂಖ್ಯಾ ಬಲ ಹೊಂದಿದ್ದು, ಜೆಡಿಎಸ್ ಗೆ ಶಾಸಕರ ಮತ್ತು ಸಂಸದರ ಮತ ಸೇರಿ ಬಹುಮತಕ್ಕೆ ಕೊರತೆ ಇರಲಿಲ್ಲ. ಜೆಡಿಎಸ್ ನ ೫ ಜನ ಸದಸ್ಯರನ್ನು ಕಾಂಗ್ರೇಸ್‌ನವರು ಹೈಜಾಕ್ ಮಾಡಿದ ಕಾರಣ ಚುನಾವಣೆಯಲ್ಲಿ ಜೆಡಿಎಸ್‌ಗೆ ಸದಸ್ಯರು ಕೈಕೊಟ್ಟಿದ್ದರಿಂದ ಅಧ್ಯಕ್ಷ ಸ್ಥಾನ ಜೆಡಿಎಸ್‌ಗೆ ತಪ್ಪಿ ಕಾಂಗ್ರೇಸ್ ಪಾಲಾಗುವಂತಾಯಿತು.
ಶುಕ್ರವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೇಸ್ ಪಕ್ಷದಿಂದ ಭಾಸ್ಕರ್ ನಾಮಪತ್ರ ಸಲ್ಲಿಸಿದ್ದರು. ಜೆಡಿಎಸ್ ಪಕ್ಷದಿಂದ ಬಿ.ವೆಂಕಟರೆಡ್ಡಿ, ನಾಮಪತ್ರ ಸಲ್ಲಿಸಿದ್ದರು. ಉಪಾಧ್ಯಕ್ಷ ಸ್ಥಾನಕ್ಕೆ ಜೆಡಿಎಸ್ ಪಕ್ಷದಿಂದ ಸುನಿತ ಏಕೈಕ ನಾಮಪತ್ರ ಸಲ್ಲಿಸಿದ್ದರು.
ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಭಾಸ್ಕರ್ ೧೧ ಮತಗಳನ್ನು ಪಡೆದು ಜಯಶೀಲರಾದರು. ಜೆಡಿಎಸ್ ಬೆಂಬಲಿತ ಬಿ.ವೆಂಕಟರೆಡ್ಡಿ ೦೯ ಮತಗಳನ್ನು ಪಡೆದು ಪರಾಭವಗೊಂಡಿದ್ದರು.
ಜೆಡಿಎಸ್ ಪಕ್ಷದ ಅಭ್ಯರ್ಥಿ ಪರವಾಗಿ ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಹಾಗು ಸಂಸದ ಮಲ್ಲೇಶ್‌ಬಾಬು ರವರು ಮತ ಚಲಾಯಿಸಿದರು. ಆದರೆ ಜೆಡಿಎಸ್ ೦೪ ಜನ ಅಲ್ಪಸಂಖ್ಯಾತ ಸದಸ್ಯರು ಮತ್ತು ಮಾಜಿ ಪುರಸಭಾ ಅಧ್ಯಕ್ಷೆ ಲಲಿತಾ ಶ್ರೀನಿವಾಸ್ ಚುನಾವಣೆಗೆ ಗೈರು ಹಾಜರಾದ ಕಾರಣ ಜೆಡಿಎಸ್ ಅಭ್ಯರ್ಥಿಗೆ ಮತಗಳ ಸಂಖ್ಯೆ ಕಡಿಮೆಯಾಯಿತು.
ಉಪಾಧ್ಯಕ್ಷರ ಸ್ಥಾನಕ್ಕೆ ಸುನಿತ ಏಕೈಕ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ಕಾರಣ ಅವಿರೋಧವಾಗಿ ಆಯ್ಕೆ ಆಗಿರುವುದಾಗಿ ಚುನಾವಣಾಧಿಕಾರಿ ತಹಶೀಲ್ದಾರ್ ಜಿ.ಎನ್.ಸುದೀಂದ್ರ ಘೋಷಿಸಿದರು. ಚುನಾವಣೆ ಪ್ರಕ್ರಿಯೆಯಲ್ಲಿ ಅಪರ ಜಿಲ್ಲಾಧಿಕಾರಿ ಮಂಗಳ, ಮುಖ್ಯಾಧಿಕಾರಿ ಸತ್ಯನಾರಾಯಣ ಪಾಲ್ಗೊಂಡಿದ್ದರು.
ಕಾಂಗ್ರೇಸ್ ಪಕ್ಷದಲ್ಲಿ ಉಪಾಧ್ಯಕ್ಷರ ಸ್ಥಾನಕ್ಕೆ ಲೀಲಾವತಿ ಎಂಬ ಅಭ್ಯರ್ಥಿ ಇದ್ದರೂ ಸಹ ಅವರಿಂದ ನಾಮಪತ್ರ ಸಲ್ಲಿಕೆ ಮಾಡಿಸಲಿಲ್ಲ. ಮಾಜಿ ಜಿಲ್ಲಾ ಪಂಚಾಯ್ತಿ ಸದಸ್ಯ ಶ್ರೀನಿವಾಸ ರವರ ಕೊಲೆಯ ಆರೋಪದಲ್ಲಿ ಲೀಲಾವತಿಯ ಪುತ್ರನ ಕೈವಾಡವಿದೆಯೆಂದು ಆರೋಪ ಇರುವ ಕಾರಣ ಕಾಂಗ್ರೇಸ್ ಪಕ್ಷದಿಂದ ಅಧ್ಯಕ್ಷರಾಗಿ ಆಯ್ಕೆ ಆಗಿರುವ ಭಾಸ್ಕರ್ ವಿರೋಧ ವ್ಯಕ್ತಪಡಿಸಿದ ಕಾರಣ ಚುನಾವಣೆ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದರಾದರೂ ಉಪಾಧ್ಯಕ್ಷರ ಸ್ಥಾನಕ್ಕೆ ನಾಮಪತ್ರ ಸಲ್ಲಿಕೆ ಮಾಡಿಸಲಿಲ್ಲದ ಕಾರಣ ಜೆಡಿಎಸ್ ಪಕ್ಷದ ಸುನಿತ ಅವಿರೋಧವಾಗಿ ಆಯ್ಕೆ ಆಗಿದ್ದಾರೆ.
ಜೆಡಿಎಸ್ ಬೆಂಬಲಿತ ಐವರು ಜನ ಸದಸ್ಯರು ಗೈರು ಹಾಜರಾಗಿರುವ ಹಿನ್ನೆಲೆಯಲ್ಲಿ ಬಹಮತವಿದ್ದರೂ ಸಹ ಅಧ್ಯಕ್ಷ ಸ್ಥಾನ ಕಳೆದುಕೊಳ್ಳುವ ಮೂಲಕ ಜೆಡಿಎಸ್ ಪಕ್ಷಕ್ಕೆ ಮುಖಭಂಗವಾದAತಾಗಿದೆ.
ಕಾನೂನು ರೀತಿ ಕ್ರಮ :
ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಮಾತನಾಡಿ, ಚುನಾವಣೆಗೆ ಗೈರು ಹಾಜರಾಗಿರುವ ಸದಸ್ಯರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುತ್ತೇನೆ. ಈ ಚುನಾವಣೆ ನನಗೆ ಲೆಕ್ಕವಿಲ್ಲ. ಕ್ಷೇತ್ರದ ಅಭಿವೃದ್ಧಿ ಮುಖ್ಯ. ನಾಳೆಯಿಂದಲೇ ಕ್ಷೇತ್ರದ ಅಭಿವೃದ್ಧಿಗೆ ನಾನು ಮತ್ತು ಸಂಸದರು ಶ್ರಮಿಸುತ್ತೇವೆ.
-ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ,
ಅಭಿವೃದ್ಧಿಗೆ ಒತ್ತು ನೀಡುತ್ತೇನೆ :
ನೂತನ ಪುರಸಭೆ ಅಧ್ಯಕ್ಷ ಭಾಸ್ಕರ್ ಮಾತನಾಡಿ, ನಿಮ್ಮ ಕುಟುಂಬ ಬಿ.ಎಲ್. ನಾರಾಯಣಸ್ವಾಮಿಯವರ ಕುಟುಂಬ. ಈ ಪಟ್ಟಣದ ಪ್ರಥಮ ಪುರಪಿತೃ ಬಿ.ಎಲ್.ನಾರಾಯಣಸ್ವಾಮಿಯವರೇ ಆಗಿದ್ದರು. ಅವರು ಶಾಸಕರು ಆಗಿದ್ದರು. ಮತ್ತೆ ನಮ್ಮ ಕುಟುಂಬಕ್ಕೆ ಅಧ್ಯಕ್ಷರ ಸ್ಥಾನ ನನಗೆ ದೊರಕಿದೆ. ಹಾಗೂ ನಮ್ಮ ಮಾವ ದಿವಂಗತ ಎಂ.ಶ್ರೀನಿವಾಸನ್, ಡಾ.ಚಂದ್ರಕಳ ಮತ್ತು ನನಗೆ ಮತ ನೀಡಿದ ಕಟ್ಟೆಕೆಳಗಿನ ಪಾಳ್ಯದ ಜನತೆಗೆ ಚಿರಋಣಿಯಾಗಿರುತ್ತೇನೆ. ನಗರದ ಸಮಸ್ಯೆಗಳನ್ನು ಹಂತ ಹಂತವಾಗಿ ಬಗೆಹರಿಸಲಾಗುವುದು. ಖಾತೆ ಬದಲಾವಣೆ, ಕುಡಿಯುವ ನೀರು, ವಿದ್ಯುತ್ ದೀಪ, ರಸ್ತೆ, ಚರಂಡಿಗಳ ಅಭಿವೃದ್ಧಿಗೆ ಒತ್ತು ನೀಡಲಾಗುವುದು.
ಕಾಂಗ್ರೇಸ್ ಪಕ್ಷದ ಮತ್ತೊಬ್ಬ ಸದಸ್ಯೆ ನಮ್ಮ ಪಕ್ಷದ ಸದಸ್ಯರೊಂದಿಗೆ ನನಗೆ ಮತ ಚಲಾವಣೆ ಮಾಡಿದ್ದಾರೆ. ನನಗೆ ಆ ಮತ ಅವಶ್ಯಕತೆ ಇರಲಿಲ್ಲ. ನಮ್ಮ ಮಾವ ಶ್ರೀನಿವಾಸನ್ ಕೊಲೆ ಆರೋಪದಲ್ಲಿ ಅವರ ಕುಟುಂಬ ಇದೆ. ಆ ಕಾರಣ ಆ ಮತವನ್ನು ನಾನು ಮೊದಲೇ ನಿರಾಕರಿಸಿದ್ದೆ. ಕಾಂಗ್ರೇಸ್ ಪಕ್ಷದ ಪರವಾಗಿ ಮತ ಚಲಾಯಿಸಿರಬಹುದು. ಅದಕ್ಕೂ ನನಗೂ ಸಂಬAಧವಿಲ್ಲ ಎಂದು ಸ್ಪಷ್ಟಣೆ ನೀಡಿದ್ದಾರೆ.
ಬಿಗಿ ಬಂದೋಬಸ್ತ್ :
ಹೆಚ್ಚುವರಿ ಜಿಲ್ಲಾ ರಕ್ಷಣಾಧಿಕಾರಿ ರವಿಶಂಕರ್ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತನ್ನು ಏರ್ಪಡಿಸಲಾಗಿತ್ತು. ವೃತ್ತ ನಿರೀಕ್ಷಕ ಎಂ.ಬಿ.ಗೊರವನಕೊಳ್ಳ, ಪಿಎಸ್‌ಐ ಜಯರಾಮ್ ನೇತೃತ್ವದಲ್ಲಿ ಪೊಲೀಸ್‌ನ್ನು ಬಿಗಿಗೊಳಿಸಲಾಗಿತ್ತು. ಪುರಸಭೆ ಮುಂಭಾಗದ ಜೋಡಿ ರಸ್ತೆಯನ್ನು ಬಂದ್ ಮಾಡಲಾಗಿತ್ತು.
ಪಟಾಕಿ ಸಿಡಿಸಿ ಸಂಭ್ರಮ :
ಕಾಂಗ್ರೇಸ್ ಪಕ್ಷದ ಭಾಸ್ಕರ್ ಅಧ್ಯಕ್ಷರಾಗಿ ಆಯ್ಕೆ ಆಗುತ್ತಿದ್ದಂತೆ ಪಟ್ಟಣದಲ್ಲಿ ಕಾಂಗ್ರೇಸ್ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮ ಆಚರಿಸಿದರು. ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ಮ್ಯಾಕಲ ನಾರಾಯಣಸ್ವಾಮಿ ಮಾತನಾಡಿ, ಕಾಂಗ್ರೇಸ್ ಪಕ್ಷದಲ್ಲಿ ಸದಸ್ಯರ ಒಗ್ಗಟ್ಟು ಪ್ರದರ್ಶನ ಮಾಡಿದ ಕಾರಣ ಅಧ್ಯಕ್ಷ ಆಯ್ಕೆ ಸುಗಮವಾಯಿತು. ಪರೋಕ್ಷವಾಗಿ ಜೆಡಿಎಸ್ ನ ಸದಸ್ಯರು ನಮಗೆ ಬೆಂಬಲ ಸೂಚಿಸಿದ್ದಾರೆ. ಅಧ್ಯಕ್ಷ ಭಾಸ್ಕರ್ ಪಾರದರ್ಶಕವಾಗಿ ಅಧ್ಯಕ್ಷರಾಗಿ ಕೆಲಸ ನಿರ್ವಹಿಸುತ್ತಾರೆ ಎಂದರು.
ಚಿತ್ರ ೨೩ ಕೆ.ಎಲ್.ಆರ್. ೦೨ : ಪುರಸಭೆಯ ನೂತನ ಅಧ್ಯಕ್ಷರಾಗಿ ಭಾಸ್ಕರ್ ಮತ್ತು ಉಪಾಧ್ಯಕ್ಷರಾಗಿ ಆಯ್ಕೆ ಆಗಿದ್ದು ಅವರನ್ನು ಮುಖ್ಯಾಧಿಕಾರಿ ಸತ್ಯನಾರಾಯಣ ಅಭಿನಂದಿಸುತ್ತಿದ್ದಾರೆ.